ಅರಸೀಕೆರೆ: ಕಳೆದ ಎರಡು ಅವಧಿಯಲ್ಲಿ ರಾಜ್ಯವನ್ನಾಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ 5.65 ಲಕ್ಷ ಕೋಟಿ ರೂ.ಸಾಲ ಮಾಡಿ, ಅದನ್ನು ಜನರ ತಲೆ ಮೇಲೆ ಹೊರೆಸಿವೆ. ಇದು ರಾಷ್ಟ್ರೀಯ ಪಕ್ಷಗಳ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ಶೇ.60 ಸರ್ಕಾರದ ಹಣ ಅರ್ಹ ಫಲಾನುಭವಿಗಳಿಗೆ ಸೇರದೆ ಮಧ್ಯವರ್ತಿ ಪಾಲಾಗಿದೆ. ಇಂತಹ ಯೋಜನೆಗಳ ಅನುಷ್ಠಾನಕ್ಕಾಗಿ ಈ ಸರ್ಕಾರಗಳು 5.65 ಲಕ್ಷ ಕೋಟಿ ರೂ. ಹಣವನ್ನು ಸಾಲ ತಂದು, ರಾಜ್ಯದ ಜನತೆ ತಲೆ ಮೇಲೆ ಹೊರೆಸಿದ್ದಾರೆ ಎಂದು ಹೇಳಿದರು.
ಕೊಟ್ಟಿದ್ದು ಕಾಲು ಮುರಿದ ಕುದುರೆ: ಕೊಟ್ಟ ಕುದುರೆಯನ್ನು ಏರದವನೂ ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಕೊಟ್ಟಿದ್ದು, ಕಾಲು ಮುರಿದ ಕುದುರೆ, ಅದನ್ನು ನಾನು ಏರಿ ಧೀರನೂ, ಶೂರನೂ ಆಗಲು ಹೇಗೆ ಸಾಧ್ಯ? ಅವರನ್ನೇ ಕೇಳಿ ಎಂದು ಹರಿಹಾಯ್ದರು.
ಐಟಿ, ಇಡಿ ದಾಳಿಗೆ ನಾವು ಕಾರಣರಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಮೇಲೆ ನಡೆಯುತ್ತಿರುವ ಐಟಿ ಮತ್ತು ಇಡಿ ದಾಳಿಗೆ ಮಾಜಿ ಪ್ರಧಾನಿ ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಕಾರಣ ಎಂದು ಹೇಳಿಕೆ ನೀಡುತ್ತಿದ್ದಾರೆ. ಇಂತಹ ಆರೋಪಕ್ಕೆ ತಮ್ಮಿಂದ ಉತ್ತರವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.