ಎಚ್.ಡಿ.ಕೋಟೆ: ಪುರಸಭೆಯ 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 91 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪುರಸಭೆ ಅಧಿಕಾರದ ಗದ್ದುಗೆ ಹಿಡಿಯಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿರುವುದರ ಜತೆಗೆ ಬಿಜೆಪಿ ಕೂಡ ಹೆಚ್ಚಿನ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದು, ಶುಕ್ರವಾರ ನಡೆಯುವ ಮತದಾನಕ್ಕೆ ಚುನಾವಣಾಧಿಕಾರಿಗಳು ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದಾರೆ.
23 ವಾರ್ಡ್‌ಗಳ ವ್ಯಾಪ್ತಿಯಲ್ಲಿ 8,789 ಮಹಿಳೆಯರು, 8,683 ಪುರುಷರು, ಇತರೆ ಮೂರು ಮಂದಿ ಸೇರಿ 17,475 ಮಂದಿ ಮತದಾರರಿದ್ದು, ತಮ್ಮ ಮತದಾನದ ಹಕ್ಕು ಚಾಲಾಯಿಸುವ ಮೂಲಕ ಮೊದಲ ಪುರಸಭೆ ಚುನಾವಣೆಗೆ ಸಾಕ್ಷಿಯಾಗಲಿದ್ದಾರೆ.
ಕಳೆದ ಹದಿನೈದು ದಿನಗಳಿಂದ ವಾರ್ಡ್‌ಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ತಮ್ಮ ಅಪಾರ ಬೆಂಬಲಿಗರೊಂದಿಗೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಕೈಗೊಂಡಿದ್ದರು. ಆ.29ಕ್ಕೆ ಬಹಿರಂಗ ಪ್ರಚಾರ ಪ್ರಕ್ರಿಯೆ ಅಂತ್ಯಗೊಂಡಿದ್ದು, ಗುರುವಾರ ನಡೆದ ಮನೆ ಮನೆ ಪ್ರಚಾರ ಕೂಡ ಬಿರುಸಿನಿಂದ ಕೂಡಿದೆ.
ಪಕ್ಷೇತರರ ಸ್ಪರ್ಧೆ: ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು ಕಾಂಗ್ರಸ್ ಮತ್ತು ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ತಲಾ 23 ವಾರ್ಡ್‌ಗಳಲ್ಲೂ ಸ್ಪರ್ಧಿಸಿದರೆ, ರಾಷಿಯ ಪಕ್ಷವಾದ ಬಿಜೆಪಿ ಕೂಡ 21 ವಾರ್ಡ್‌ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಎಸ್ಪಿ 5 ವಾರ್ಡ್‌ಗಳಲ್ಲಿ ಸಮಾಜವಾದಿ ಪಕ್ಷ(ಎಸ್‌ಪಿ) 1 ವಾರ್ಡ್‌ನಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ,
10ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಪಕ್ಷೇತರರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಕೆಲ ವಾರ್ಡ್‌ಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳಿಗೆ ನೇರ ಹಣಾಹಣಿ ಏರ್ಪಟ್ಟಿದೆ. ಕೆಲ ವಾರ್ಡ್‌ಗಳಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಪಕ್ಷೇತರರು ಕಾರಣರಾಗಲಿದ್ದು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಸಂಸದ ಆರ್.ಧ್ರುವನಾರಾಯಣ್, ಹಾಲಿ ಶಾಸಕ ಅನಿಲ್‌ಕುಮಾರ್, ಜೆಡಿಎಸ್ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಬಿಜೆಪಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಪುರಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತೀವ್ರ ಪೈಪೋಟಿ ಇದ್ದು, ಹೆಚ್ಚಿನ ಸ್ಥಾನಗಳು ಯಾವ ಪಕ್ಷದ ಪಾಲಾಗಲಿದೆ ಹಾಗೂ ಪಕ್ಷೇತರರು ಎಷ್ಟು ಸ್ಥಾನ ಗೆಲ್ಲುವರೂ ಎಂಬ ಕುತೂಹಲ ಮನೆ ಮಾಡಿದೆ.
ಬಿಗಿ ಭದ್ರತೆ: ಆ.31ರ ಶುಕ್ರವಾರ ನಡೆಯಲಿದ್ದು, 23 ಮತಗಟ್ಟೆಗಳಿದ್ದು ಪ್ರತಿ ಮತಗಟ್ಟೆಗೆ ಒರ್ವ ಪಿಆರ್‌ಒ, ಮೂವರು ಎಪಿಆರ್‌ಒ, ಓರ್ವ ಡಿ.ಗ್ರೂಪ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪಾರದರ್ಶಕ ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.