Advertisement

ಕೋಟೆ: 50 ಹಾಸಿಗೆ ಕೋವಿಡ್‌ ಚಿಕಿತ್ಸೆ ಕೇಂದ್ರ

03:28 PM Nov 04, 2020 | Suhan S |

ಎಚ್‌.ಡಿ.ಕೋಟೆ: ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸೆಗೇ ಮೀಸಲಾದ 50 ಹಾಸಿಗೆ ಸಾಮರ್ಥಯದ ಆರೋಗ್ಯ ಕೇಂದ್ರ (ಡೆಡಿಕೇಟೆಡ್‌ ಕೋವಿಡ್‌ ಹೆಲ್ತ್‌ ಸೆಂಟರ್‌) ತೆರೆಯಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನು ಒಂದು ವಾರದಲ್ಲಿ ಕೋವಿಡ್‌ ಸೋಂಕಿತರ ಸೇವೆಗೆ ಕೇಂದ್ರ ಲಭ್ಯವಾಗಲಿದೆ.

Advertisement

ಜಿಲ್ಲಾ ಕೇಂದ್ರದಲ್ಲಿರುವ ಕೋವಿಡ್‌ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ಆಯಾ ತಾಲೂಕುಗಳಲ್ಲೇ ಕೋವಿಡ್‌ ಕೇರ್‌ ಸೌಲಭ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಹೀಗಾಗಿ ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗುತ್ತಿದೆ.

ಪ್ರತ್ಯೇಕ ಕೊಠಡಿಗಳಲ್ಲಿ ತಲಾ 10 ಹಾಸಿಗೆಗಳಂತೆ ಪ್ರತಿ ಕೊಠಡಿಗಳಲ್ಲಿ ಶೌಚಾಲಯ, ಬಿಸಿನೀರು ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್‌ ಸೋಂಕಿತರಾಗಿದ್ದು, ಗಂಭೀರ ಲಕ್ಷಣಗಳು ಇಲ್ಲದವರಿಗಾಗಿ ತಾಲೂಕು ಕೇಂದ್ರದಲ್ಲಿರುವ ಕೋವಿಡ್‌ ಸೆಂಟರ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಕೇಂದ್ರದಲ್ಲಿ 3 ತೀವ್ರ ನಿಗಾ ಹಾಸಿಗೆ (ಐಸಿಯು) ಹಾಗೂ 6 ವೆಂಟಿಲೇಟರ್‌ ವ್ಯವಸ್ಥೆ ಮಾಡಲಾಗುತ್ತಿದೆ. ಈ ಕೇಂದ್ರಕ್ಕೆ ಮೂವರು ವೈದ್ಯರನ್ನು ನಿಯೋಜಿಸಲಾಗಿದ್ದು, ದಿನ ಪೂರ್ತಿ ಇವರ ಸೇವೆ ಲಭ್ಯವಿರಲಿದೆ. ಕೇಂದ್ರದಲ್ಲಿ ಹಾಸಿಗೆ, ದಿಂಬುಗಳ ಮತ್ತಿತರ ಸೌಲಭ್ಯ ಕಲ್ಪಿಸಲು ಭರದ ಸಿದ್ಧತೆ ನಡೆಯುತ್ತಿದೆ.

ನಾಲ್ಕೈದು ತಿಂಗಳ ಹಿಂದೆ ತಾಲೂಕು ಕೇಂದ್ರ ಸ್ಥಾನದಿಂದ ಸುಮಾರು 6-7 ಕಿ.ಮೀ. ದೂರದಲ್ಲಿರುವ ಸೊಳ್ಳಾಪುರ ಏಕಲವ್ಯ ವಸತಿ ಶಾಲೆಯಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಲಾಗಿತ್ತು. ಕೋವಿಡ್‌ ಸೋಂಕಿತರನ್ನು ಇಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಸೋಂಕಿತರಿಗೆ ಉಸಿರಾಟದ ಸಮಸ್ಯೆ ಕಾಣಿಸಿ ಕೊಂಡಾಗ, ಪರಿಸ್ಥಿತಿ ಗಂಭೀರವಾದಾಗ ವೆಂಟಿಲೇಟರ್‌ ಹಾಗೂ ಐಸಿಯು ಬೆಡ್‌ಗಾಗಿ ಮೈಸೂರು ನಗರಕ್ಕೆ ತೆರಬೇಕಾಗಿತ್ತು.

ಇದೀಗ ತಾಲೂಕು ಕೇಂದ್ರದಲ್ಲಿ ವೆಂಟಿಲೇಟರ್‌, ಐಸಿಯು ಬೆಡ್‌ ಸಹಿತ ಕೋವಿಡ್‌ ಚಿಕಿತ್ಸಾ ಕೇಂದ್ರವನ್ನು ತೆರೆಯುತ್ತಿರುವುದರಿಂದ ಗಂಭೀರ ಸಮಸ್ಯೆ ಕಾಣಿಸಿ ಕೊಂಡ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ದೊರೆಯಲಿದೆ. ಕೋವಿಡ್‌ ಚಿಕಿತ್ಸಾ ಕೇಂದ್ರ ತೆರೆಯಲು ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು, ಇನ್ನು ಒಂದು ವಾರದೊಳಗೆ ಈ ಕೇಂದ್ರ ಲೋಕಾರ್ಪಣೆಗೊಳ್ಳಲಿದೆ.

Advertisement

ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೇ ಸೋಂಕಿತರಿಗೆ ಎಲ್ಲಾ ಮಾದರಿಯ ಚಿಕಿತ್ಸೆ ಲಭ್ಯವಾಗುವಂತಾಗಬೇಕು. ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡದಂತೆ ತಾಲೂಕಿನಲ್ಲೇ ಸಮರ್ಪಕ ಚಿಕಿತ್ಸೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೋವಿಡ್‌ದಿಂದ ತಾಲೂಕು ಆಸ್ಪತ್ರೆಗೆ ವೆಂಟಿಲೇಟರ್‌, ಐಸಿಯು ಬೆಡ್‌ ಸಿಕ್ತು:  ಕೋವಿಡ್‌ ಪಾದಾರ್ಪಣೆಯಿಂದ ಇದೇ ಮೊದಲ ಬಾರಿಗೆ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌, ಆಕ್ಸಿಜನ್‌ ಹಾಸಿಗೆಗಳನ್ನು ಕಾಣುವಂತಾಗಿದೆ. ಇನ್ನು ಮುಂದೆ ತುರ್ತು ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗಳಲ್ಲಿಯೇ ವೆಂಟಿಲೇಟರ್‌, ಆಕ್ಸಿಜನ್‌ ಚಿಕಿತ್ಸೆ ಲಭ್ಯವಾಗಲಿವೆ. ತಾಲೂಕು ಆಸ್ಪತ್ರೆಗಳು ನಿರ್ಮಾಣವಾಗಿ ಹಲವು ದಶಕಗಳು ಕಳೆದರೂ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಹಾಸಿಗೆಗಳಿಲ್ಲದೆ ರೋಗಿಗಳು ಪರದಾಡುವಂತಾಗಿತ್ತು. ಚಿಕಿತ್ಸೆಗಾಗಿ ಗಾಯಾಳು ಅಥವಾ ರೋಗಿಗಳು ಬಂದರೂ ವೆಂಟಿಲೇಟರ್‌, ಆಕ್ಸಿಜನ್‌ ಹಾಸಿಗೆ ಸೌಲಭ್ಯಗಳಿರಲಿಲ್ಲ. ಯಾವ ಸರ್ಕಾರಗಳೂ ಈವರೆಗೆ ಸೌಲಭ್ಯ ಕಲ್ಪಿಸಲು ಮುಂದಾಗಿರಲಿಲ್ಲ. ತಾಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಸೌಲಭ್ಯ ಸಿಗಲು ಕೋವಿಡ್‌ ವೈರಾಣು ಬರಬೇಕಾಯಿತು ಎಂಬಂತಾಗಿದೆ. ಕೋವಿಡ್‌ ಲಸಿಕೆ ಬಂದ ನಂತರವೂ ಇದೇ ವ್ಯವಸ್ಥೆ ಮುಂದುವರಿಸಿಕೊಂಡು ಹೋಗಬೇಕಿದೆ.

ಸರ್ಕಾರದ ಆದೇಶದಂತೆ ತಾಲೂಕು ಕೇಂದ್ರ ಸ್ಥಾನದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 50 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಚಿಕಿತ್ಸೆ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಒಂದು ವಾರದ ಅವಧಿಯಲ್ಲಿ ಸೋಂಕಿತರ ಸೇವೆಗೆ ಲಭ್ಯವಾಗಲಿದೆ.ಡಾ| ಭಾಸ್ಕರ್‌, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ

 

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next