ಚಿಕ್ಕಬಳ್ಳಾಪುರ: ದೇಶದ ರಾಜಕೀಯ ಪರಿಸ್ಥಿತಿ ಇಂದು ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ. ಬಿಜೆಪಿ ಆಡಳಿತಕ್ಕೆ ಸುಪ್ರೀಂಕೋರ್ಟ್ ಜಡ್ಜ್ ಗಳು ಸಹ ಹೆದರುವಂತಾಗಿದೆಯೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಟೀಕಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಎ.ರಾಮಕೃಷ್ಣ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಬಲ ಆಗಬೇಕು. ಆಂದ್ರ, ತಮಿಳುನಾಡು, ತೆಲಂಗಾಣ ನೋಡಿ ಈ ರಾಜ್ಯದ ಕನ್ನಡಿಗರು ಕಲಿಯಬೇಕಿದೆ. ಪ್ರಾದೇಶಿಕ ಪಕ್ಷಗಳು ಬಲಯುತವಾಗಿದ್ದರೆ ಮನೆ ಬಾಗಿಲಿಗೆ ಅಧಿಕಾರ ಹುಡುಕಿ ಬರುತ್ತದೆ ಎಂದರು. ಶಿವಸೇನೆ ಹೆಚ್ಚು ಸ್ಥಾನ ಪಡೆದ್ದಿದ್ದಕ್ಕೆ ಸೋನಿಯಾಗಾಂಧಿ, ಶರದ್ ಪವರ್ ಶಿವಸೇನೆ ನಾಯಕರ ಮನೆ ಬಾಗಿಗೆ ಹೋಗಿ ಸಿಎಂ ಸ್ಥಾನ ಅವರಿಗೆ ಬಿಟ್ಟು ಕೊಟ್ಟರು. ರಾಜ್ಯ ಅಭಿವೃದ್ಧಿ ಆಗಬೇಕಾದರೆ ಪ್ರಾದೇಶಿಕ ಪಕ್ಷಕ್ಕೆ ರಾಜ್ಯದ ಜನ ಬಲ ತುಂಬಬೇಕು. ಆಂದ್ರ, ತಮಿಳುನಾಡಿನ ಜನ ಅಲ್ಲಿ ಕಾಂಗ್ರೆಸ್, ಬಿಜೆಪಿ ತಲೆ ಎತ್ತಲು ಬಿಟ್ಟಿಲ್ಲ ಎಂದರು.
ಇವತ್ತು ಕಾಶ್ಮೀರದ ಪರಿಸ್ಥಿತಿ ಏನಾಗಿದೆ. ನಾನು ಪ್ರಧಾನಿ ಆಗಿದ್ದಾಗ ಒಂದು ಸಾವು ಆಗಿಲ್ಲ. ಇವತ್ತು ದಿನ ಬೆಳಗಾದರೆ ಸಾವು ನೋವು ನೋಡುವಂತಾಗಿದೆ. ಸಾವಿರಾರು ಜನರನ್ನು ಜೈಲಿನಲ್ಲಿಟ್ಟಿದ್ದಾರೆಂದರು. ನಾನು ಪ್ರಧಾನಿ ಆದಾಗ ನಮ್ಮ ಅಧಿಕಾರಿಗಳು ಹೋಗುವುದು ಬೇಡ ಅಂದರು. ಆದರೆ ನಾನು ಹತ್ತಾರು ಬಾರಿ ಹೋಗಿ ಬಂದೆ ಏನು ಆಗಲಿಲ್ಲ ಎಂದರು.
ರಾಜ್ಯಕ್ಕೆ ಆನ್ಯಾಯ…
ರಾಜ್ಯದ ಮೇಕೆದಾಟು ಯೋಜನೆಯನ್ನು ಕೇಂದ್ರ ಸಚಿವ ಗಡ್ಕರಿ ರದ್ದುಗೊಳಿಸಿದರು. ಇದರಿಂದ ರಾಜ್ಯಕ್ಕೆ ಸಾಕಷ್ಡು ನಷ್ಡವಾಗಿದೆ. ಪ್ರಾಂತೀಯ ಪಕ್ಷಗಳು ಗಟ್ಟಿಯಾಗಿ ಇದ್ದರೆ ಮಾತ್ರ ರಾಜ್ಯಕ್ಕೆ ಹೆಚ್ವು ಅನುಕೂಲವಾಗುತ್ತದೆ ಎಂದರು.
ಇವತ್ತು ಸಂಸತ್ತುನಲ್ಲಿ ನಾನು ಇದ್ದಿದ್ದರೆ ರಾಜ್ಯದ ಪರ ಮಾತನಾಡುತ್ತಿದ್ದರು. ಆದರೆ ನನ್ನನ್ನೇ ತುಮಕೂರಿನಲ್ಲಿ ಸೋಲಿಸಿದರು. ಇವತ್ತು ನನಗೆ ಅಧಿಕಾರ ಬೇಕಿಲ್ಲ, ರಾಜ್ಯದ ಅಭಿವೃದ್ಧಿ ಆಗಬೇಕು. ನಾನು ಮತ್ತೆ ಪ್ರಧಾನಿ ಆಗಬೇಕೆಂದು ಈ ಚುನಾವಣೆ ಪ್ರಚಾರಕ್ಕೆ ಬಂದಿಲ್ಲ ಎಂದರು.