Advertisement
ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆರೋಪಕ್ಕೆ ಶುಕ್ರವಾರ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡುವ ಮೂಲಕ ವಾಗ್ದಾಳಿ ನಡೆಸಿದರು.
ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ ಈ ಸರಕಾರ ಪತನವಾಗುತ್ತಿರಲಿಲ್ಲ. ಈಗ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗೆ ಆರೋಪ ಮಾಡುವ ಮೂಲಕ ದೇವೇಗೌಡರು ಯಾರನ್ನು ಮೆಚ್ಚಿಸಲು ಹೊರಟಿದ್ದಾರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅಧಿಕಾರಕ್ಕಾಗಿ ರಾತ್ರೋರಾತ್ರಿ ಬಿಜೆಪಿ ಜತೆ ಕೈಜೋಡಿಸಿದವರು ಯಾರು? 20;20 ತಿಂಗಳ ಅಧಿಕಾರದ ಹಂಚಿಕೆಯಲ್ಲಿ ದ್ರೋಹ ಎಸಗುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಲು ಅವಕಾಶ ಮಾಡಿಕೊಟ್ಟವರೇ ದೇವೇಗೌಡರು ಮತ್ತು ಕುಮಾರಸ್ವಾಮಿ ಎಂದು ಆರೋಪಿಸಿದರು. ರಾಜಕೀಯದಲ್ಲಿ ತಮ್ಮ ಮಕ್ಕಳು, ತಮ್ಮ ಕುಟುಂಬ ಬಿಟ್ಟು ಬೇರೆ ಯಾರನ್ನೂ ಬೆಳೆಯಲು ದೇವೇಗೌಡರು ಬಿಟ್ಟಿಲ್ಲ ಎಂದರು.
Related Articles
Advertisement
ನಾನು ಬಿಜೆಪಿಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದವನು. ಹೀಗಾಗಿಯೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರಕಾರ ರಚನೆಗೆ ಹೈಕಮಾಂಡ್ ಸೂಚನೆಯಂತೆ ಒಪ್ಪಿಗೆ ಸೂಚಿಸಿದ್ದೆ. ಅಲ್ಲದೇ 15 ತಿಂಗಳ ಕಾಲ ಕುಮಾರಸ್ವಾಮಿಗೆ ಸಂಪೂರ್ಣ ಸಹಕಾರ ಕೂಡಾ ನೀಡಿದ್ದೆ. ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಮೈತ್ರಿ ಸರಕಾರ ಬೀಳಿಸಿಲ್ಲ. ನನ್ನ ರಾಜಕೀಯ ಜೀವನದಲ್ಲಿ ನೀಚ ರಾಜಕಾರಣ ಮಾಡಿಲ್ಲ, ಅದನ್ನು ಮಾಡಿಕೊಂಡು ಬಂದವರು ದೇವೇಗೌಡರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.