ಬೆಂಗಳೂರು: ಐಎಂಎ ಬಹುಕೋಟಿ ಹಗರಣದ ತನಿಖೆ ಸಂಬಂಧ ಮಾಜಿ ಸಚಿವ ಮತ್ತು ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಸೋಮವಾರ ರಾತ್ರಿ ಎಸ್‌ಐಟಿ ವಶಕ್ಕೆ ತೆಗೆದುಕೊಂಡ ವಿಚಾರವಾಗಿ ಹೈಕೋರ್ಟ್, ರಾಜ್ಯ ಸರ್ಕಾರ ಮತ್ತು ಎಸ್‌ಐಟಿಗೆ ನೋಟಿಸ್ ನೀಡಿದೆ.
ತಮ್ಮ ವಿರುದ್ಧ ಯಾವುದೇ ರೀತಿ ಬಲವಂತದ ಕ್ರಮ ಕೈಗೊಳ್ಳಬಾರದು ಹಾಗೂ ತಮ್ಮ ಮುಕ್ತ ಓಡಾಟಕ್ಕೆ ಅಡ್ಡಿಪಡಿಸದಂತೆ “ವಿಶೇಷ ತನಿಖಾ ತಂಡ’ (ಎಸ್‌ಐಟಿ)ಕ್ಕೆ ನಿರ್ದೇಶನ ನೀಡುವಂತೆ ಕೋರಿ ರೋಷನ್‌ಬೇಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ನೀಡಿ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿದೆ.
ನ್ಯಾ. ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಮಂಗಳವಾರ ಈ ಅರ್ಜಿ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ರೋಷನ್‌ಬೇಗ್ ಪರ ವಕೀಲ ಶ್ಯಾಮಸುಂದರ್ ವಾದ ಮಂಡಿಸಿ, ತಮ್ಮ ಕಕ್ಷಿದಾರರು ಶಿವಾಜಿನಗರ ಕ್ಷೇತ್ರದ ಹಾಲಿ ಶಾಸಕರಾಗಿದ್ದು, ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಐಎಂಎ ವಂಚನೆ ಪ್ರಕರಣ ನಡೆದಿದೆ. ಈ ಬಗ್ಗೆ ತನಿಖಾ ಸಂಸ್ಥೆಗೆ ಸಹಕರಿಸಲು ಸಿದ್ಧ ಎಂದು ಶಾಸಕರು ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಅದರಂತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಜು.11ಕ್ಕೆ ನೋಟಿಸ್ ಜಾರಿಗೊಳಿಸಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಆ ದಿನ ಹಾಜರಾಗಲು ಸಾಧ್ಯವಾಗಿಲ್ಲ. ಪುನಃ 15ಕ್ಕೆ ಬರಲು ಹೇಳಲಾಗಿತ್ತು. ಆದರೆ, ಶಾಸಕರು ಕಾಲಾವಕಾಶ ಕೇಳಿಕೊಂಡಿದ್ದರು. ಜು.19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಕೊಟ್ಟಿದ್ದರಿಂದ ಬರಲು ಒಪ್ಪಿಕೊಂಡಿದ್ದರು. ಆದರೆ, ಏಕಾಏಕಿ ಜು.15ರ ರಾತ್ರಿ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಲವಂತವಾಗಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಎಸ್‌ಐಟಿಯ ಈ ಕ್ರಮವನ್ನು ಪ್ರಶ್ನಿಸಿ ಮಂಗಳವಾರ ಬೆಳಿಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತಿದ್ದಂತೆ, ಅದನ್ನು ಅರಿತ ಎಸ್‌ಐಟಿಯವರು ಮಧ್ಯಾಹ್ನದ ವೇಳೆಗೆ ಅವರು ವಾಪಸ್ ಕಳಿಸಿಕೊಟ್ಟಿದ್ದಾರೆ. ಎಸ್‌ಐಟಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಆದರೆ, ಎಸ್‌ಐಟಿಯ ಇಬ್ಬರು ಅಧಿಕಾರಿಗಳಾದ ರವಿಕಾಂತೇಗೌಡ ಹಾಗೂ ಗಿರೀಶ್ ಎಸ್‌ಐಟಿ ಅಧಿಕಾರಿಗಳಾಗದೇ ಸರ್ಕಾರದ ಅಡಿಯಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರೋಷನ್‌ಬೇಗ್ ಪರ ವಕೀಲರು ದೂರಿದರು.
“ನಿಮ್ಮ ಕಕ್ಷಿದಾರರನ್ನು ಎಸ್‌ಐಟಿಯವರು ಬಿಟ್ಟು ಕಳಿಸಿಕೊಟ್ಟಿದ್ದಾರಲ್ಲ, ನಿಮಗೆ ಇನ್ನೇನು ಬೇಕು’ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ರೋಷನ್‌ಬೇಗ್ ಪರ ವಕೀಲರು, “ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಅರ್ಜಿದಾರರ ವಿರುದ್ಧ ಎಸ್‌ಐಟಿ ಯಾವುದೇ ರೀತಿ ಬಲವಂತದ ಕ್ರಮ ಕೈಗೊಳ್ಳಬಾರದು. ಅಲ್ಲದೇ ಅವರ ಮುಕ್ತ ಓಡಾಟ ಹಾಗೂ ಪ್ರಯಾಣಕ್ಕೆ ಅಡ್ಡಿಪಡಿಸಬಾರದು ಎಂದು ಎಸ್‌ಐಟಿಗೆ ನಿರ್ದೇಶನ ನೀಡುವಂತೆ’ ಕೋರಿದರು.
ಈ ಕುರಿತು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಎಸ್‌ಐಟಿ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ಕೋರಿದರು. ನೋಟಿಸ್ ಜಾರಿಗೊಳಿಸಿ ನ್ಯಾಯಪೀಠ ವಿಚಾರಣೆ ಮುಂದೂಡಿತು.