ಬೆಂಗಳೂರು: ಆಸ್ತಿ ಹಾಗೂ ಸಾಲದ ವಿವರಗಳನ್ನು ಒದಗಿಸದ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯ 34 ಮಂದಿ ಸದಸ್ಯರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಅನಿಲ್ ಕುಮಾರ್ ಶೆಟ್ಟಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರು ಹಾಗೂ ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿರುವ 34 ಬಿಬಿಎಂಪಿ ಸದಸ್ಯರಿಗೆ ನೋಟಿಸ್ ಜಾರಿಗೆ ಆದೇಶಿಸಿತು.
ಕರ್ನಾಟಕ ಪೌರನಿಗಮ ಕಾಯ್ದೆ-1979ರ ಪ್ರಕಾರ ಆಸ್ತಿ ವಿವರಗಳನ್ನು ಘೋಷಿಸದ ಮತ್ತು ಕಾಲ ಕಾಲಕ್ಕೆ ಅದನ್ನು ಸಲ್ಲಿಸದ 34 ಮಂದಿ ಬಿಬಿಎಂಪಿ ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಅನಿಲ್ ಕುಮಾರ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕರ್ನಾಟಕ ಪೌರನಿಗಮ ಕಾಯ್ದೆ-1979ರ ಸೆಕ್ಷನ್ 19(1)ರ ಅನ್ವಯ ಬಿಬಿಎಂಪಿ ಕೌನ್ಸಿಲರ್ ಆಗಿ ಆಯ್ಕೆಯಾದವರು ಒಂದು ತಿಂಗಳಲ್ಲಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿಯ ಹಾಗೂ ಸಾಲದ ವಿವರಗಳನ್ನು ಮೇಯರ್‌ಗೆ ನೀಡಬೇಕು. ಅಲ್ಲದೆ, ಪ್ರತಿ ವರ್ಷವೂ ಆಸ್ತಿ ಹಾಗೂ ಸಾಲದ ವಿವರ ಘೋಷಿಸಬೇಕು.
ಆದರೆ, ಬಿಬಿಎಂಪಿಯ ಹಾಲಿ ಕೌನ್ಸಿಲರ್‌ಗಳು 2015ರ ಸೆ.11ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಅದರಂತೆ ಅವರೆಲ್ಲರೂ 2015ರ ಅಕ್ಟೋಬರ್‌ದೊಳಗೆ ಸಾಲದ ವಿವರ ನೀಡಬೇಕಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ ಬಿಬಿಎಂಪಿಯ ಸುಮಾರು 34 ಕೌನ್ಸಿಲರ್‌ಗಳು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಹಾಗೂ ಸಾಲದ ವಿವರಗಳನ್ನು ಮೇಯರ್‌ಗೆ ಒದಗಿಸಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಹಾಗಾಗಿ, ಈ ನಿಯಮ ಪಾಲಿಸದ ಸದಸ್ಯರು ಆ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗುತ್ತಾರೆ. ಆಸ್ತಿ ವಿವರ ಸಲ್ಲಿಸದ ಸದಸ್ಯರನ್ನು ಅವರ ಸ್ಥಾನದಲ್ಲಿ ಮುಂದುವರಿಸದಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಪ್ರಾದೇಶಿಕ ಆಯುಕ್ತರು ಪರಿಗಣಿಸಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.