ಚೆನ್ನೈ: ಬಹುಭಾಷಾ ನಟಿ ಜಯಪ್ರದಾ ಒಡೆತನದ ಥಿಯೇಟರ್ ನೌಕರರ ಇಎಸ್‌ಐಸಿ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಪ್ರದಾಗೆ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಕೋರ್ಟ್ ದೋಷಿ ಎಂದು ತೀರ್ಪು ನೀಡಿ ಆರು ತಿಂಗಳ ಸಾದಾ ಶಿಕ್ಷೆ ವಿಧಿಸಿರುವ ಆದೇಶವನ್ನು ಮದ್ರಾಸ್ ಹೈಕೋರ್ಟ್ ಶನಿವಾರ (ಅಕ್ಟೋಬರ್ 21) ಎತ್ತಿಹಿಡಿಯುವ ಮೂಲಕ ಜೈಲುಶಿಕ್ಷೆ ರದ್ದುಪಡಿಸಲು ನಿರಾಕರಿಸಿದೆ.
ಇದನ್ನೂ ಓದಿ:Akasa Air: ವಿಮಾನ ಹಾರಾಟದ ವೇಳೆ ‘ನನ್ನ ಬ್ಯಾಗ್ ನಲ್ಲಿ ಬಾಂಬ್ ಇದೆ’ ಎಂದ ಪ್ರಯಾಣಿಕ…
“ಜಯಪ್ರದಾ 15 ದಿನದೊಳಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಶರಣಾಗಿ, 20 ಲಕ್ಷ ರೂಪಾಯಿ ಠೇವಣಿ ಇಟ್ಟರೆ ಜಾಮೀನು ನೀಡಬಹುದಾಗಿದೆ” ಎಂದು ಜಸ್ಟೀಸ್ ಜಿ.ಜಯಚಂದ್ರನ್ ಆದೇಶದಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳಾದ ರಾಮ್ ಕುಮಾರ್ ಮತ್ತು ರಾಜಾ ಬಾಬು ಶಿಕ್ಷೆಯನ್ನೂ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಆಗಸ್ಟ್ 10ರಂದು ತೀರ್ಪು ನೀಡುವ ದಿನದಂದು ಗೈರುಹಾಜರಾಗಿದ್ದ ನಟಿ ಜಯಪ್ರದಾ ವಿರುದ್ಧ ಮ್ಯಾಜಿಸ್ಟ್ರೇಟ್ ಜಾಮೀನು ರಹಿತ ವಾರಂಟ್ ಅನ್ನು ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ.
ಏನಿದು ಪ್ರಕರಣ:
1985ರಲ್ಲಿ ಜಯಪ್ರದಾ ಸೇರಿದಂತೆ ಮೂವರ ಪಾಲುದಾರಿಕೆಯಲ್ಲಿ ಚೆನ್ನೈನಲ್ಲಿ ಜಯಪ್ರದಾ ಸಿನಿ ಥಿಯೇಟರ್ ಅನ್ನು ಪ್ರಾರಂಭಿಸಿದ್ದರು. ಆದರೆ ಥಿಯೇಟರ್ ನಷ್ಟ ಅನುಭವಿಸಿದ್ದರಿಂದ ಮುಚ್ಚಲಾಗಿತ್ತು. 2008ರಲ್ಲಿ 20 ಲಕ್ಷ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ಚೆನ್ನೈ ಕಾರ್ಪೋರೇಶನ್ ಥಿಯೇಟರ್ ಅನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಥಿಯೇಟರ್ ನ ನೌಕರರು ತಮಗೆ ಇಎಸ್ ಐ ಪಾವತಿಸಿಲ್ಲ ಎಂದು ಆರೋಪಿಸಿ ಜಯಪ್ರದಾ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
1985ರಿಂದ 2006ರವರೆಗೆ ಜಯಪ್ರದಾ ಥಿಯೇಟರ್ ನೌಕರರ ಒಟ್ಟು 37,68,977 ರೂಪಾಯಿ ಇಎಸ್ ಐ ಪಾವತಿ ಬಾಕಿ ಉಳಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.