ನವದೆಹಲಿ: ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ವಿರುದ್ಧದ ಪ್ರಕರಣದ ವಿಚಾರಣೆಯಿಂದ ಜಸ್ಟೀಸ್ ಕೌಶಿಕ್ ಚಂದಾ ಅವರನ್ನು ವಜಾಗೊಳಿಸುವಂತೆ ಮನವಿ ಮಾಡಿಕೊಂಡ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೋಲ್ಕತಾ ಹೈಕೋರ್ಟ್ ಬುಧವಾರ(ಜುಲೈ 07) ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ:ಶಾಪ್ಸಿ ಮೂಲಕ ಬೇರೆಯವರಿಗೆ ವಸ್ತುಗಳನ್ನು ಬುಕ್ ಮಾಡಿಕೊಡಿ, ನೀವು ಕಮಿಷನ್ ಪಡೆಯಿರಿ!
ಜಸ್ಟೀಸ್ ಚಂದಾ ಅವರನ್ನು ಬಿಜೆಪಿ ನಾಯಕರ ಜತೆ ಹೆಚ್ಚಾಗಿ ಗುರುತಿಸಿಕೊಂಡಿರುವುದಾಗಿ ಮಮತಾ ಬ್ಯಾನರ್ಜಿ ಪರ ವಕೀಲರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷಪಾತವನ್ನು ತಪ್ಪಿಸಲು ಜಸ್ಟೀಸ್ ಕೌಶಿಕ್ ಚಂದಾ ಅವರ ನ್ಯಾಯಪೀಠದಿಂದ ಪ್ರಕರಣವನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ನಂದಿಗ್ರಾಮ ವಿಧಾನಸಭಾ ಚುನಾವಣಾ ಗೆಲುವಿನ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿರುವುದಾಗಿ ಕೋಲ್ಕತಾ ಹೈಕೋರ್ಟ್ ಜಸ್ಟೀಸ್ ಕೌಶಿಕ್ ಚಂದಾ ತಿಳಿಸಿದ್ದು, ಈ ಸಂದರ್ಭದಲ್ಲಿ ಅರ್ಜಿದಾರರಿಗೆ ಐದು ಲಕ್ಷ ರೂಪಾಯಿ ದಂಡವನ್ನು ವಿಧಿಸಿರುವುದಾಗಿ ವರದಿ ವಿವರಿಸಿದೆ.
ಒಂದು ವೇಳೆ ವ್ಯಕ್ತಿ ರಾಜಕೀಯ ಪಕ್ಷದಿಂದ ಹಾಜರಾಗಿದ್ದರೆ, ಅದು ಸಾಮಾನ್ಯವಾದದ್ದು, ಆದರೆ ಪ್ರಕರಣದ ವಿಚಾರಣೆ ವೇಳೆ ಇಂತಹ ಆರೋಪ ಸರಿಯಲ್ಲ. ಈ ಪ್ರಕರಣದ ಸಂದರ್ಭದಲ್ಲಿ ಹಣಕಾಸಿನ ವಿಚಾರ ಉದ್ಭವಿಸುವುದಿಲ್ಲ ಎಂದು ಜಸ್ಟೀಸ್ ಕೌಶಿಕ್ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.