ಹೊಸದಿಲ್ಲಿ : ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ಗೈದ ಆರೋಪದ ಮೇಲೆ ಜೈಲುಪಾಲಾಗಿದ್ದ ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರಿಗೆ ದಿಲ್ಲಿ ಹೈಕೋರ್ಟ್ ಇಂದು ಜಾಮೀನು ಬಿಡುಗಡೆಯನ್ನು ಮಂಜೂರು ಮಾಡಿದೆ.
ಓಖ್‌ಲಾ ಶಾಸಕ ಅಮಾನತುಲ್ಲ ಖಾನ್ ಅವರನ್ನು ಕಳೆದ ಫೆ.21ರಂದು ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಬಂಧನಕ್ಕೆ ಗುರಿಯಾಗಿದ್ದ ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರ ಜಾಮೀನು ಬಿಡುಗಡೆಗೆ ವಿಧಿಸಲ್ಪಟ್ಟಿದ್ದ ಶರ್ತಗಳನ್ನೇ ಅಮಾನತುಲ್ಲ ಖಾನ್ ಅವರ ಜಾಮೀನಿಗೂ ಅನ್ವಯಿಸಿ ಜಸ್ಟಿಸ್ ಮುಕ್ತಾ ಗುಪ್ತಾ ಅವರು ರೀಲೀಫ್ ನೀಡಿದರು.
ಅಮಾನತುಲ್ಲ ಖಾನ್ ಅವರು ಈಗಾಗಲೇ 20ಕ್ಕೂ ಹೆಚ್ಚು ದಿನಗಳ ಕಸ್ಟಡಿ ತನಿಖೆಯನ್ನು ಪೂರೈಸಿದ್ದು ಇನ್ನು ಅವರನ್ನು ಕಸ್ಟಡಿಯಲ್ಲಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಆದುದರಿಂದ ಅವರನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೋರ್ಟ್ ಹೇಳಿತು.
ಕೋರ್ಟ್ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ದಿಲ್ಲಿ ಪೊಲೀಸ್ ವಕೀಲರು, “ಆರೋಪಿ ಖಾನ್ ಅವರು ಇನ್ನೂ 12 ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲ್ಪಟ್ಟಿದ್ದಾರೆ. ಈ ಪೈಕಿ ಮೂರರಲ್ಲಿ ಮಾತ್ರವೇ ಅವರು ಆರೋಪ-ಮುಕ್ತಗೊಂಡಿದ್ದಾರೆ’ ಎಂದು ಹೇಳಿದರು.
ಅಂಶು ಪ್ರಕಾಶ್ ಹಲ್ಲೆ ಪ್ರಕರಣದ ಆರೋಪಿಯಾಗಿ ಬಂಧಿತರಾಗಿ ಕಳೆದ ಮಾರ್ಚ್ 9ರಂದು ಜಾಮೀನು ಪಡೆದಿದ್ದ ಆಪ್ ಶಾಸಕ ಪ್ರಕಾಶ್ ಜರ್ವಾಲ್ ಅವರಿಗೆ “ಇನ್ನು ಮುಂದೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗೆಳಲ್ಲಿ ತೊಡಗಿ ಕೊಂಡಲ್ಲಿ ಜಾಮಿನು ರದ್ದು ಮಾಡಲಾಗುವುದು’ ಎಂಬ ಎಚ್ಚರಿಕೆಯನ್ನು ನೀಡಲಾಗಿತ್ತು. ಇದೇ ಎಚ್ಚರಿಕೆಯನ್ನು ಅಮಾನತುಲ್ಲ ಖಾನ್ ಅವರಿಗೂ ನೀಡಲಾಗಿದೆ.