ಬೆಂಗಳೂರು: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿಕೆ ಶಿವಕುಮಾರ್ ಮೇಲ್ಮನವಿ ಅರ್ಜಿಯನ್ನು ತಾಂತ್ರಿಕ ಕಾರಣ ನೀಡಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ಪೀಠವು ಜಾರಿ ನಿರ್ದೇಶನಾಲಯದ ಸಮನ್ಸ್ ರದ್ದುಗೊಳಿಸಲು ನಿರಾಕರಿಸಿ ನೀಡಿದ್ದ ಆದೇಶ ಪ್ರಶ್ನಿಸಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಅರ್ಹವಾಗಿಲ್ಲ ಎಂದು ತಿರಸ್ಕರಿಸಿದೆ.
ಇ.ಡಿ.ಸಮನ್ಸ್ ಹಾಗೂ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠ, ಸಿಆರ್ ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಏಕಸದಸ್ಯ ಪೀಠ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮೇಲ್ಮನವಿ ವಿಚಾರಣೆಗೆ ಅರ್ಹವಲ್ಲ ಎಂದು ತಿಳಿಸಿದೆ. ಅಲ್ಲದೇ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ್, ಸುನೀಲ್ ನಾರಾಯಣ್ ಹಾಗೂ ಆಂಜನೇಯಗೆ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್ ನಾಲ್ಕು ವಾರಗಳವರೆಗೆ ಬಂಧಿಸದಂತೆ ಇ.ಡಿ.ಗೆ ನಿರ್ದೇಶನ ನೀಡಿದೆ.
ಇ.ಡಿ.ಸಮನ್ಸ್ ನೀಡಿದರೆ ವಿಚಾರಣೆಗೆ ಹಾಜರಾಗಬೇಕು, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿದ ಹೈಕೋರ್ಟ್ ಆಂಜನೇಯ, ಸುನೀಲ್ ಶರ್ಮಾ ಹಾಗೂ ಸಚಿನ್ ನಾರಾಯಣ್ ಸಲ್ಲಿಸಿದ್ದ ಮೇಲ್ಮನವಿಗಳನ್ನೂ ವಜಾಗೊಳಿಸಿದೆ.
ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಪೀಠ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.