ಅಹ್ಮದ್‌ನಗರ : ಲೋಕಪಾಲ, ಲೋಕಾಯುಕ್ತ ನೇಮಕಾತಿಯನ್ನು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ 81ರ ಹರೆಯದ ಹಿರಿಯ ಸಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನಿರಶನ ಇಂದು ಶುಕ್ರವಾರ ಮೂರನೇ ದಿನಕ್ಕೆ ತಲುಪಿದೆ. ಅಂತೆಯೇ ಅವರ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಗಮನಾರ್ಹವಾಗಿ ಏರಿದೆ ಎಂದು ವೈದ್ಯರು ಹೇಳಿದ್ದಾರೆ.
ಅಹ್ಮದ್‌ನಗರ ಜಿಲ್ಲೆಯ ರಾಳೇಗಣ ಸಿದ್ದಿಯಲ್ಲಿ ಕಳೆದ ಬುಧವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಜಾರೆ, ಕೇಂದ್ರ ಮತ್ತು ರಾಜ್ಯದಲ್ಲಿ (ವಿಶೇಷವಾಗಿ ಮಹಾರಾಷ್ಟ್ರದಲ್ಲಿ) ಅನುಕ್ರಮವಾಗಿ ಲೋಕಪಾಲ ಮತ್ತು ಲೋಕಾಯುಕ್ತರ ನೇಮಕಾತಿ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ.
ಮಾತ್ರವಲ್ಲದೆ ದೇಶದಲ್ಲಿನ ಕೃಷಿ ಬಿಕ್ಕಟ್ಟನ್ನು ನಿವಾರಿಸಲು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಸರಕಾರ ಜಾರಿಗೆ ತರಬೇಕು, ಚುನಾವಣಾ ಸುಧಾರಣೆ ಆಗಬೇಕು ಎಂದು ಕೂಡ ಆಗ್ರಹಿಸುತ್ತಿದ್ದಾರೆ.
ಅಪಾರ ಸಂಖ್ಯೆಯ ಸ್ಥಳೀಯರು ಅಣ್ಣಾ ಹಜಾರೆ ಅವರ ಸತ್ಯಾಗ್ರಹಕ್ಕೆ ಬೆಂಬಲ ನೀಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಹಜಾರೆ ಅವರ ಬೇಡಿಕೆಗಳನ್ನು ಅಲಕ್ಷಿಸುತ್ತಿವೆ ಎಂದು ಬೆಂಬಲಿಗರು ಆರೋಪಿಸಿದ್ದಾರೆ.
ಇಂದು ಶುಕ್ರವಾರ ಹಜಾರೆ ಅವರ ಅನೇಕ ಬೆಂಬಲಿಗರು ಜಿಲ್ಲಾ ಉಸ್ತುವಾರಿ ಸಚಿವ ರಾಮ ಶಿಂಧೆ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.