Advertisement

ಹಂಪ್‌ಗಳಲ್ಲಿ ಬಣ್ಣವಿಲ್ಲದೆ ಅಪಾಯದ ಸ್ಥಿತಿ

09:20 AM May 25, 2022 | Team Udayavani |

ಬಂಟ್ವಾಳ: ವಾಹನಗಳ ವೇಗ ತಗ್ಗಿಸುವ ಜತೆಗೆ ಅಪಘಾತಗಳನ್ನು ತಪ್ಪಿಸುವ ದೃಷ್ಟಿಯಿಂದ ಸಾಮಾನ್ಯವಾಗಿ ರಸ್ತೆಗಳಲ್ಲಿ ಹಂಪ್‌ಗಳನ್ನು ಹಾಕಿ ವಾಹನ ನಿಯಂತ್ರಣ ಮಾಡಲಾಗುತ್ತದೆ. ಆದರೆ ಹಲವು ಭಾಗಗಳಲ್ಲಿ ಅವೈಜ್ಞಾನಿಕ ಹಂಪ್‌ಗಳ ರಚನೆಯ ಜತೆಗೆ ನಿರ್ವಹಣೆಯಿಲ್ಲದೆ ಹಂಪ್‌ಗಳೇ ಅಪಘಾತಗಳಿಗೆ ಕಾರಣವಾಗುತ್ತಿವೆ. ಬಂಟ್ವಾಳ ನಗರವೂ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಇಂತಹ ಹಂಪ್‌ಗಳು ಅಪಾಯಕಾರಿಯಾಗಿವೆ.

Advertisement

ನಗರ ಪ್ರದೇಶಗಳಾಗ ಬಂಟ್ವಾಳ ಪೇಟೆಯ ರಸ್ತೆ, ಬೈಪಾಸ್‌ನಿಂದ ಮೂಡುಬಿದಿರೆ ರಸ್ತೆ, ಗೂಡಿನಬಳಿಯಿಂದ ಪಾಣೆಮಂಗಳೂರು ರಸ್ತೆ ಮೊದಲಾದ ಭಾಗಗಳಲ್ಲಿ ಹಲವು ಕಡೆ ಹಂಪ್‌ಗಳಿದ್ದು, ಕೆಲವೆಡೆ ಹಂಪ್‌ಗಳಿಂದ ಯಾವುದೇ ಅಪಾಯದ ಸ್ಥಿತಿ ಇಲ್ಲ. ಬಂಟ್ವಾಳ ಪೇಟೆಯ ತ್ಯಾಗರಾಜ ರಸ್ತೆಯ ಪ್ರಾರಂಭದಲ್ಲಿ ಹೊಸದಾಗಿ ಡಾಮರು ಹಾಕಿ ಹಂಪ್ಸ್‌ ಹಾಕಲಾಗಿದ್ದು, ಅಲ್ಲಿ ಹಂಪ್ಸ್‌ ಇರುವ ಯಾವುದೇ ಸೂಚನೆಯೂ ಇಲ್ಲವಾಗಿದೆ.

ಬಿ.ಸಿ.ರೋಡ್‌ನಿಂದ ಸಾಗುವ ವೇಳೆ ಪಾಣೆಮಂಗಳೂರು ಹಳೆ ಸೇತುವೆಯ ಪ್ರಾರಂಭದ ಗೂಡಿನಬಳಿಯಲ್ಲಿ ಬಹಳ ಹಿಂದೆಯೇ ಹಾಕಿರುವ ಹಂಪ್ಸ್‌ ಇದ್ದು, ಅಲ್ಲಿ ಹಂಪ್ಸ್‌ಗೆ ಯಾವುದೇ ರೀತಿಯಲ್ಲಿ ಬಣ್ಣ ಹಚ್ಚಲಾಗಿಲ್ಲ. ಆದರೆ ಅದು ಬಹಳ ಹಳೆಯದಾದ ಹಂಪ್ಸ್‌ ಆಗಿದ್ದು, ಹೀಗಾಗಿ ನಿತ್ಯ ಓಡಾಡುವವರ ಗಮನಕ್ಕೆ ಬರುತ್ತದೆ. ಹೊಸದಾಗಿ ಬಂದವರು ಏಕಾಏಕಿ ಹಂಪ್ಸ್‌ ಕಂಡು ಗೊಂದಲಕ್ಕೆ ಒಳಗಾಗುತ್ತಾರೆ.

ಬಂಟ್ವಾಳ ಬೈಪಾಸ್‌ ಬಳಿ ಮೂಡುಬಿದಿರೆ ರಸ್ತೆಯಲ್ಲಿ ಹೊಸ ಹಂಪ್ಸ್‌ ಹಾಕಲಾಗಿದ್ದು, ಬಣ್ಣ ಬಳಿದು ಸುಸಜ್ಜಿತವಾಗಿದೆ. ಬಂಟ್ವಾಳ ಕೆಳಗಿನ ಪೇಟೆಯ ಮಸೀದಿ ಹಾಗೂ ಶಾಲೆಯ ಬಳಿ ಹಂಪ್ಸ್‌ ಇದೆ. ಒಂದರ ಬಣ್ಣ ಮಾಸಿ ಹೋಗಿದೆ. ಆದರೆ ವೈಜ್ಞಾನಿಕ ರೀತಿಯಲ್ಲಿ ಹೆಚ್ಚು ಎತ್ತರವಿಲ್ಲದೆ ಅಗಲದಲ್ಲಿರುವ ಕಾರಣದಿಂದ ಹೆಚ್ಚಿನ ಅಪಾಯವಿಲ್ಲವಾಗಿದೆ.

ಗ್ರಾಮೀಣ ಭಾಗದ ಹಂಪ್‌ಗಳು

Advertisement

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವ ಮಾರ್ನಬೈಲು-ಸಾಲೆತ್ತೂರು ರಸ್ತೆ, ಸೊರ್ನಾಡು- ಮೂರಲಪಟ್ಣ ರಸ್ತೆಯಲ್ಲಿ ಹಲವು ಕಡೆ ಹಂಪ್‌ ಗಳಿದ್ದು, ಕಳೆದ ಕೆಲವು ತಿಂಗಳ ಹಿಂದೆ ಎಲ್ಲ ಹಂಪ್‌ ಗಳನ್ನು ತೆಗೆಯಲಾಗಿತ್ತು. ಅಂದರೆ ಈ  ಹಂಪ್‌ಗಳು ಅವೈಜ್ಞಾನಿಕವಾಗಿದ್ದು, ಅಂತಹ ಹಂಪ್‌ಗಳನ್ನು ತೆಗೆಯುವಂತೆ ಸರಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ತೆಗೆಯಲಾಗಿತ್ತು. ಪ್ರಸ್ತುತ ಈ ರಸ್ತೆಯಲ್ಲಿ ಮತ್ತೆ ಬಹುತೇಕ ಕಡೆ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್‌ ನಿರ್ಮಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬ್ರಹ್ಮರಕೂಟ್ಲು ಟೋಲ್‌ಪ್ಲಾಝಾದ ಸರ್ವಿಸ್‌ ರಸ್ತೆಯಲ್ಲಿ ಹಂಪ್‌ಗಳಿದ್ದು, ವಾಹನಗಳು ಅನಗತ್ಯವಾಗಿ ಟೋಲ್‌ ತಪ್ಪಿಸಿ ಹೋಗದಂತೆ ತಡೆಯುವ ದೃಷ್ಟಿಯಿಂದ ಈ ರೀತಿ ಹಂಪ್‌ಗಳನ್ನು ಹಾಕಲಾಗಿದೆ. ಆದರೆ ಎಲ್ಲಿಯೂ ಕೂಡ ಅದಕ್ಕೆ ಬಣ್ಣ ಬಳಿಯುವ ಕಾರ್ಯ ಮಾಡಿಲ್ಲ. ಇನ್ನು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಕಡೆ ಕಾಂಕ್ರೀಟ್‌ ರಸ್ತೆಗೆ ಹಂಪ್ಸ್‌ ಹಾಕಲಾಗಿದ್ದು, ಅವು ಎಲ್ಲವೂ ವೈಜ್ಞಾನಿಕವಿಲ್ಲದೆ ಅಪಾಯಕಾರಿ ಸ್ಥಿತಿಯಲ್ಲಿದೆ. ಸಜೀಪಮುನ್ನೂರಿನ ನಂದಾವರ, ಫರಂಗಿಪೇಟೆಯ ಒಳರಸ್ತೆಗಳಲ್ಲಿ ಸಾಕಷ್ಟು ಕಡೆ ಇಂತಹ ಸ್ಥಿತಿ ಇದೆ.

ಗಮನಕ್ಕೆ ಬಾರದೆ ಅಪಘಾತ

ವಾಹನಗಳು ವೇಗವಾಗಿ ಸಾಗುವ ಸಂದರ್ಭದಲ್ಲಿ ಮುಂದಿನಿಂದ ಹಂಪ್ಸ್‌ ಕಂಡಾಗ ವಾಹನದವರು ವೇಗವನ್ನು ಕಡಿಮೆ ಮಾಡಿ ವಾಹನ ನಿಯಂತ್ರಣಕ್ಕೆ ತರುತ್ತಾರೆ. ಆದರೆ ಹೆಚ್ಚಿನ ಭಾಗಗಳಲ್ಲಿ ಹಂಪ್ಸ್‌ಗಳಿಗೆ ಬಣ್ಣ ಬಳಿಯದೇ ಇರುವುದು, ಹಲವು ವರ್ಷಗಳ ಹಿಂದೆ ಹಾಕಿರುವ ಹಂಪ್‌ಗಳಿಗೆ ಮತ್ತೆ ಬಣ್ಣ ಬಳಿಯದೇ ಇರುವುದು ಕೂಡ ಅಪಘಾತಕ್ಕೆ ಕಾರಣವಾಗುತ್ತಿದೆ. ಮುಖ್ಯವಾಗಿ ದ್ವಿಚಕ್ರ ವಾಹನಗಳಿಗೆ ಹಂಪ್‌ಗಳು ಮಾರಕವಾಗಿದ್ದು, ದೂರದಿಂದಲೇ ಹಂಪ್‌ಗಳು ಇರುವುದು ಗಮನಕ್ಕೆ ಬರುವ ರೀತಿ ಬಿಳಿ ಬಣ್ಣ ಬಳಿಯುವ ಕಾರ್ಯ ಮಾಡಬೇಕಿದೆ. ಕಾಂಕ್ರೀಟ್‌ ರಸ್ತೆಗಳಿಗೆ ಪೈಬರ್‌ ಹಂಪ್ಸ್‌ಗಳನ್ನು ಹಾಕಬೇಕಿದ್ದು, ಬಹುತೇಕ ಕಡೆ ಕಾಂಕ್ರೀಟ್‌ನಿಂದಲೇ ಹಂಪ್ಸ್‌ ಮಾಡಿರುವುದಿರಿಂದ ಹೆಚ್ಚಿನ ಅಪಾಯ ಉಂಟಾಗುತ್ತಿದೆ.

ವೈಜ್ಞಾನಿಕ ರೀತಿಯ ಹಂಪ್‌ಗಳು

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ ರಸ್ತೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಇಲ್ಲದೇ ಇದ್ದ ಹಂಪ್ಸ್‌ಗಳನ್ನು ತೆಗೆದು ಪೊಲೀಸರ ಮಾರ್ಗದರ್ಶನದಂತೆ ಅಗತ್ಯ ಸ್ಥಳಗಳಲ್ಲಿ ವೈಜ್ಞಾನಿಕ ಹಂಪ್ಸ್‌ಗಳನ್ನು ಮಾಡಲಾಗಿದೆ. ಜತೆಗೆ ಅವುಗಳಿಗೆ ಬಣ್ಣ ಬಳಿಯುವ ಕಾರ್ಯವನ್ನೂ ಮಾಡಿದ್ದೇವೆ. – ಷಣ್ಮುಗಂ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಬಂಟ್ವಾಳ

ಕಿರಣ್‌ ಸರಪಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next