ಸಂಭಾಷಣೆಗಳನ್ನು ಆರಂಭಿಸುವ ವಿಚಾರದಲ್ಲಿ ದೇಶಭಾಷೆಗಳ ಹಂಗಿಲ್ಲದೆ ಅತ್ಯಧಿಕ ಶ್ರೇಯಸ್ಸು ಸಲ್ಲಬೇಕಾಗಿರುವ ಅಂಶವೇನಾದರೂ ಇದ್ದರೆ ಅದು ಹವಾಮಾನವೇ ಸರಿ. ಈಗಲೂ ನಮ್ಮ ಬಹುತೇಕ ಸಂಭಾಷಣೆಗಳು “”ಎಂಥಾ ಧಗೆ ಕಣ್ರೀ… ಅದೇನು ಜಡಿಮಳೆ ಮಾರಾಯ್ರೆ…”, ಇಂಥಾ ಮಾತುಗಳಿಂದಲೇ ಶುರುವಾಗುವುದು. ಹೀಗಾಗಿ ನಮ್ಮ ಬದುಕಿಗೂ, ಹವಾಮಾನಕ್ಕೂ ಇರುವ ನಂಟು ಬಲು ಹತ್ತಿರದ್ದು.
Advertisement
ದಿಲ್ಲಿಯ ಮಟ್ಟಿಗೆ ಹೇಳುವುದಾದರೆ ಇಲ್ಲಿ ವಾತಾವರಣ ಓಲಾಡುತ್ತಿರುತ್ತದೆ. ಇಲ್ಲಿ ಋತುಗಳೇನೋ ನಿಯಮಿತವಾಗಿರಬಹುದು. ಆದರೆ, ಅದರ ಹಾವಭಾವಗಳು ಮಾತ್ರ ಕೆಲವೊಮ್ಮೆ ಕಲ್ಪನೆಗೂ ನಿಲುಕದ್ದು ಅನ್ನಿಸಿಬಿಡುವುದುಂಟು. ಧಗೆಯು ಹೆಚ್ಚಾಗಿ ಅಗ್ನಿಕುಂಡದಂತಾಗಿರುವ ಶಹರಕ್ಕೆ ಎಲ್ಲಿಂದಲೋ “ಧೋ’ ಎಂದು ಬಂದೆರಗುವ ಜಡಿಮಳೆ, ಬರಲಿರುವ ಮಳೆಯ ಕಿಂಚಿತ್ತೂ ನಿರೀಕ್ಷೆಯಿಲ್ಲದೆ ಏಕಾಏಕಿ ಗೊಂದಲಕ್ಕೀಡಾಗಿ ತಲೆಯ ಮೇಲೊಂದು ಸೂರಿಗಾಗಿ ತಡಕಾಡುವ ಜನಸಮೂಹ, ಒಂದಷ್ಟು ಮಳೆ ಬಂದರೂ ಪುಟ್ಟ ಕೊಳಗಳಂತಾಗಿ ಉಸಿರುಗಟ್ಟಿಸುವಂತಾಗುವ ಅಸ್ತವ್ಯಸ್ತ ಮಹಾನಗರಿ… ಹೀಗೆ ಏಕಾಏಕಿ ಬಂದು ವಕ್ಕರಿಸುವ ಮಳೆಯು ದಿಲ್ಲಿಯನ್ನು ಅರೆಕ್ಷಣ ತಲ್ಲಣಗೊಳಿಸುತ್ತದೆ. ಮಹಾ ಗೊಂದಲಕ್ಕೆ ದೂಡುತ್ತದೆ. ಧಗೆಗೆ ಕ್ಷಣಮಾತ್ರ ಹಾಯೆನಿಸಿದರೂ ಬಹುತೇಕರಿಗದು ಆಹ್ವಾನವಿಲ್ಲದೆ ಬರುವ ಕಿರಿಕಿರಿಯ ಅತಿಥಿಯೇ ಸರಿ.
Related Articles
Advertisement
ಇಂದು ಹವಾಮಾನ ವೈಪರೀತ್ಯ, ಮಾಲಿನ್ಯ ಎಂದೆಲ್ಲ ದಿಲ್ಲಿಯು ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದರೆ, ಬಗಲಲ್ಲೇ ಇರುವ ಗುರುಗ್ರಾಮವು ತಾನೂ ಸ್ಪರ್ಧೆಯೊಡ್ಡುವಂತೆ ಮುನ್ನಡೆಯುತ್ತಿದೆ. ಗಾಜಿನ ದಿರಿಸು ತೊಟ್ಟ ಗಗನಚುಂಬಿ ಕಟ್ಟಡಗಳಿಂದ, ಲೆಕ್ಕವಿಲ್ಲದಷ್ಟು ದೈತ್ಯ ಶಾಪಿಂಗ್‌ಗಳಿಂದ, ಕಣ್ಣೆತ್ತಿದರೆ ಕಾಣಸಿಗುವ ಫ್ಲೈ ಓವರ್- ಸಬ್‌ವೇಗಳಿಂದ ಜೀವನ ನೀರಸವಾದಾಗಲೆಲ್ಲ ಗುರುಗ್ರಾಮದ ನಿವಾಸಿಗಳಿಗೆ ದಿಲ್ಲಿಯ ಹಸಿರೇ ಸಂಜೀವಿನಿ, ವಾರಾಂತ್ಯದ ಸ್ವರ್ಗ. “”ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ಬಂಜರುಭೂಮಿಯಂತಿದ್ದ ಗುರ್ಗಾಂವ್ ಈಗ ಹೇಗೆ ಬೆಳೆದುಬಿಟ್ಟಿದೆ ನೋಡಿ”, ಎಂದು ಇಲ್ಲಿಯ ಸ್ಥಳೀಯರು ಕಣ್ಣರಳಿಸುತ್ತ ಹೇಳುವಾಗ ಈಗಲೂ ತಕ್ಕಮಟ್ಟಿನ ಬಂಜರಿನಂತಿರುವ ಮನೇಸರ್ ಪ್ರದೇಶ ಮತ್ತು ಇನ್ನೊಂದೆಡೆ ರಾಕ್ಷಸ ವೇಗದಲ್ಲಿ ಬೆಳೆಯುತ್ತಿರುವ ನೋಯ್ಡಾ ಮಹಾನಗರಿಗಳು ನಾವೂ ಕೂಡ ಇಂಥಾ¨ªೊಂದು ಬದಲಾವಣೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಹೇಳುತ್ತಿರುವಂತೆ ಭಾಸವಾಗುತ್ತದೆ.
ನಗರೀಕರಣವೆನ್ನುವುದು ಈ ಮಟ್ಟಿನ ವೇಗವನ್ನು ಪಡೆಯುತ್ತಿರುವಾಗ ಹವಾಮಾನ ವೈಪರೀತ್ಯಗಳು ಹೆಚ್ಚಾಗುವುದು ಹೊಸತೇನಲ್ಲ. ಈಗಂತೂ ಪಕ್ಷಭೇದಗಳಿಲ್ಲದೆ ಪ್ರಣಾಳಿಕೆಗಳಿಂದ ಹಿಡಿದು ಭಾಷಣಗಳವರೆಗೂ ಎಲ್ಲರಿಗೂ ಸ್ಮಾರ್ಟ್‌ಸಿಟಿಗಳದ್ದೇ ಧ್ಯಾನ. ದಿಲ್ಲಿಯಲ್ಲಿ ದಶಕಗಳಿಂದ ಬೇರೂರಿರುವ ಹಲವರ ಪ್ರಕಾರ ದಿಲ್ಲಿಯ ಚಳಿಗಾಲದ ಚಳಿಯ ತೀವ್ರತೆಯು ಈಗ ಹಿಂದೆ ಇದ್ದಷ್ಟಿಲ್ಲ. ಹಸಿರು ಕಮ್ಮಿಯಾದ ಪರಿಣಾಮವಾಗಿ ಧಗೆಯ ತೀಕ್ಷ್ಣತೆಯೂ ಹಲವು ಪಟ್ಟು ಹೆಚ್ಚಾಗಿದೆ. ಜನಸಂಖ್ಯೆಯೂ, ವಾಹನಗಳ ಸಂಖ್ಯೆಯೂ ಮಿತಿಮೀರಿ ಮಹಾನಗರಿಯೂ ಜನತೆಯೂ ಇಷ್ಟಿಷ್ಟೇ ಒದ್ದಾಡುತ್ತಿದೆ. ಇರಲೂ ಆಗದೆ, ಎದ್ದು ಹೋಗಲೂ ಆಗದ ದ್ವಂದ್ವದಲ್ಲಿ ತೊಳಲಾಡುತ್ತಿದೆ.
ಶಹರದಷ್ಟೇ ವೇಗದಲ್ಲಿ ಹವಾಮಾನವೂ ಬದಲಾದ ಪರಿಣಾಮವಾಗಿ ಮಹಾನಗರಿಯ ಚಾಂಚಲ್ಯವೇ ಇಲ್ಲಿಯ ಹವೆಗೂ ಬಂದಿರಬಹುದೇನೋ. ಕಾರಣಗಳೇನೇ ಇರಲಿ, ಗುರುಗ್ರಾಮದ ವೈಭವವು ಕ್ಷಣಮಾತ್ರಕ್ಕೆ ಕಣ್ಣು ಕುಕ್ಕಬಹುದು. ನೋಯ್ಡಾ ಬೆಳೆಯುತ್ತಿರುವ ವೇಗವು ಅಭಿವೃದ್ಧಿಯ ಅಸ್ಪಷ್ಟ ಭ್ರಮೆಯೊಂದನ್ನೂ ತರಬಹುದು. ಆದರೆ, ನಿರಾಳತೆಯಿರುವುದು ಮಾತ್ರ ದಿಲ್ಲಿಯಲ್ಲಿ ಉಳಿದಿರುವ ಒಂದಿಷ್ಟು ಹಸಿರಿನಲ್ಲೇ. ದಿಲ್ಲಿಯು ತನ್ನಲ್ಲಿನ್ನೂ ಉಳಿಸಿಕೊಂಡಿರುವ ಆಕರ್ಷಣೆಯ ಹಿಂದಿರುವ ರಹಸ್ಯಗಳಲ್ಲಿ ಇದೂ ಒಂದು!
ಪ್ರಸಾದ್ ನಾೖಕ್