Advertisement

ದೂರಶಿಕ್ಷಣದ ಮಾನ್ಯತೆ ಗಿಟ್ಟಿಸಿಕೊಂಡ ವಿವಿ 

11:04 AM Jan 27, 2017 | Team Udayavani |

ಬೆಂಗಳೂರು: ದೂರ ಶಿಕ್ಷಣ ಮತ್ತು ಅಂಚೆ ತೆರಪು ಕೋರ್ಸುಗಳನ್ನು ನಡೆಸುವ ಮಾನ್ಯತೆ ಕಳೆದುಕೊಂಡಿದ್ದ ಬೆಂಗಳೂರು ವಿಶ್ವವಿದ್ಯಾಲಯ ಕಡೆಗೂ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.  

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೆಂಗಳೂರು ವಿವಿ ಕುಲಪತಿ ಡಾ.ಬಿ.ತಿಮ್ಮೇಗೌಡ , ” 2015-16ರಲ್ಲಿ ರದ್ದಾಗಿದ್ದ ದೂರ ಶಿಕ್ಷಣ ಕೋರ್ಸ್‌ಗಳ ಮಾನ್ಯತೆ ವಿಶ್ವವಿದ್ಯಾಲಯಕ್ಕೆ ಮತ್ತೆ ಸಿಕ್ಕಿದೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದಿಂದ (ಯುಜಿಸಿ) ಈ ಸಂಬಂಧ ಅಧಿಕೃತ ಸಂದೇಶ ಬಂದಿದ್ದು, 2016-17ಮತ್ತು 2017-18ನೇ ಶೈಕ್ಷಣಿಕ ಸಾಲಿನ ಎರಡು ವರ್ಷಗಳಿಗೆ ಯುಜಿಸಿ ಮಾನ್ಯತೆ ನವೀಕರಿಸಿದೆ,” ಎಂದು ತಿಳಿಸಿದರು.

ಪ್ರವೇಶ ಪ್ರಕ್ರಿಯೆ ಶೀಘ್ರ ಆರಂಭ: “ಯುಜಿಸಿ ಮಾನ್ಯತೆ ದೊರೆತಿರುವ ಹಿನ್ನೆಲೆಯಲ್ಲಿ ಬೆಂಗಳೂರು ವಿವಿ ಸದ್ಯದಲ್ಲೇ 2016-17ನೇ ಸಾಲಿನ ದೂರ ಶಿಕ್ಷಣ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಆರಂಭಿಸಲಿದೆ. ಪ್ರಸಕ್ತ ಸಾಲಿನ ಪ್ರವೇಶ ಪ್ರಕ್ರಿಯೆ ಸೆಪ್ಟೆಂಬರ್‌, ನವೆಂಬರ್‌ನಲ್ಲೇ ಆರಂಭವಾಗಬೇಕಿತ್ತು. ಮಾನ್ಯತೆ ಮರು ನವೀಕರಣ ತಡವಾಗಿ ಸಿಕ್ಕಿದೆ. ಆದರೂ, ಶೀಘ್ರದಲ್ಲೇ 2016-17ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗುವುದು,” ಎಂದು ತಿಮ್ಮೇಗೌಡ ಹೇಳಿದರು.

ಮಾನ್ಯತೆ ಏಕೆ ರದ್ದಾಗಿತ್ತು?: ತಜ್ಞರ ಸಮಿತಿಯ ಶಿಫಾರಸುಗಳನ್ನು ಅನುಸರಿಸಿಲ್ಲ ಎಂಬ ಕಾರಣಕ್ಕೆ 2015-16ನೇ ಸಾಲಿನಲ್ಲಿ ಯುಜಿಸಿ ಬೆಂಗಳೂರು ವಿವಿ, ಗುಲ್ಬರ್ಗಾ ವಿವಿ ಮತ್ತು ಧಾರವಾಡದ ಕರ್ನಾಟಕ ವಿವಿಗಳಿಗೆ ದೂರ ಶಿಕ್ಷಣ ಕೋರ್ಸ್‌ ನಡೆಸುವ ಮಾನ್ಯತೆಯನ್ನು ರದ್ದು ಮಾಡಿತ್ತು. ಇದು ಅಂದಿನ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮತಿ ಇರಾನಿ ರಾಜ್ಯಸಭಾ ಕಲಾಪದಲ್ಲಿ ಸದಸ್ಯರೊಬ್ಬರು ಪ್ರಶ್ನೆಗೆ ನೀಡಿದ್ದ ಲಿಖೀತ ಉತ್ತರದಲ್ಲಿ ಬಹಿರಂಗವಾಗಿತ್ತು. 

ಆನಂತರ ಬೆಂ.ವಿವಿಯ ಕುಲಪತಿ ಡಾ.ಬಿ.ತಿಮ್ಮೇಗೌಡ ನಿರಂತರವಾಗಿ ಯುಜಿಸಿ ಅಧಿಕಾರಿಗಳ ಸಂಪರ್ಕ ಹಾಗೂ ಸಭೆಗಳಲ್ಲಿ ಪಾಲ್ಗೊಂಡು ಯುಜಿಸಿ ಕೇಳಿದ ಎಲ್ಲಾ ಮಾಹಿತಿ, ವರದಿಗಳನ್ನು ಸಲ್ಲಿಸಿ ಒಂದು ವರ್ಷದ ಬಳಿಕ ಮತ್ತೆ ವಿವಿಗೆ ದೂರ ಶಿಕ್ಷಣ ಮಾನ್ಯತೆ ಮರು ಪಡೆಯುವಲ್ಲಿ ಸಫ‌ಲರಾಗಿದ್ದಾರೆ.

Advertisement

ಶುಲ್ಕ ಹೆಚ್ಚಿಸುವ ಮಾತಿಲ್ಲ 
ದೂರಶಿಕ್ಷಣದ ಮಾನ್ಯತೆ ಒಂದು ವರ್ಷದಿಂದ ಇಲ್ಲದಿದ್ದರಿಂದ ವಿವಿಗೆ 1.5 ಕೋಟಿ ರೂ. ಆದಾಯ ನಷ್ಟವಾಗಿದೆ ಎಂದು ತಿಳಿದು ಬಂದಿದೆ. 2013-14ನೇ ಸಾಲಿನಲ್ಲಿ ವಿವಿಯ ದೂರ ಶಿಕ್ಷಣದ ವಿವಿಧ ಕೋರ್ಸು ಗಳಿಗೆ 3222 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆಗ ತಲಾ 5 ಸಾವಿರ ರೂ.ನಿಂದ 6 ಸಾವಿರ ರೂ. ಪ್ರವೇಶ ಶುಲ್ಕ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ “ಕಳೆದ ಒಂದು ವರ್ಷ ದೂರ ಶಿಕ್ಷಣ ಮಾನ್ಯತೆ ಇಲ್ಲದ್ದರಿಂದ ವಿವಿಗೆ ಕೋಟ್ಯಂತರ ರೂ.ನಷ್ಟವಾಗಿದೆ.

ಹಾಗಾಗಿ ಈ ಬಾರಿ ಪ್ರವೇಶ ಶುಲ್ಕ ಏರಿಕೆಯಾಗಲಿದೆಯೇ?” ಎಂದು ಸುದ್ದಿಗಾರರು ತಿಮ್ಮೇಗೌಡ ಅವರಿಗೆ ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಅವರು, “ಆದಾಯ ಮುಖ್ಯವಲ್ಲ. ಕಾಲೇಜಿಗೆ ಬಂದು ಉನ್ನತ ಶಿಕ್ಷಣ ಪೂರೈಸಲಾಗದ ಮಕ್ಕಳಿಗೆ ದೂರ ಶಿಕ್ಷಣದ ಮೂಲಕ ಅವಕಾಶ ಕೊಡುವುದು ನಮ್ಮ ಗುರಿ. ಶುಲ್ಕ ಹೆಚ್ಚಿಸುವ ಯೋಚನೆ ಸದ್ಯಕ್ಕಿಲ್ಲ,” ಎಂದು ಕುಲಪತಿ ತಿಮ್ಮೇಗೌಡ ಸ್ಪಷ್ಟಪಡಿಸಿದ್ದಾರೆ.

2015-16ರ ಸಾಲಿನಲ್ಲಿ ರದ್ದಾಗಿದ್ದ ದೂರ ಶಿಕ್ಷಣ ಕೋರ್ಸ್‌ಗಳ ಮಾನ್ಯತೆಯನ್ನು ಬೆಂಗಳೂರು ವಿಶ್ವವಿದ್ಯಾಲಯ ಮರಳಿ ಪಡೆದಿದೆ. ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದಿಂದ ಈ ಸಂಬಂಧ ಅಧಿಕೃತ ಸಂದೇಶ ಬಂದಿದೆ. ಶೀಘ್ರದಲ್ಲೇ ಪ್ರವೇಶ ಅರ್ಜಿ ಆಹ್ವಾನಿಸಲಾಗುವುದು.
-ಡಾ.ಬಿ.ತಿಮ್ಮೇಗೌಡ, ಬೆಂಗಳೂರು ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next