ವರದಿ : ವೀರೇಶ ಮಡ್ಲೂರ
ಹಾವೇರಿ: ರಾಜ್ಯ ಚುನಾವಣಾ ಆಯೋಗ ಜಿಪಂ-ತಾಪಂ ಕ್ಷೇತ್ರಗಳಿಗೆ ಮೀಸಲಾತಿ ಕರಡು ಪಟ್ಟಿ ಸಿದ್ಧಪಡಿಸಿ ಅಧಿ ಸೂಚನೆ ಹೊರಡಿಸಿದ ಬೆನ್ನಲ್ಲೇ ಆಕಾಂಕ್ಷಿಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಸೆ ಚಿಗುರೊಡೆದಿದ್ದು, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಜಿಪಂ-ತಾಪಂ ಕ್ಷೇತ್ರಗಳಿಗೆ ಚುನಾವಣೆ ನಡೆಸಲು ತಯಾರಿ ನಡೆಸಿರುವ ರಾಜ್ಯ ಚುನಾವಣಾ ಆಯೋಗ ಕ್ಷೇತ್ರವಾರು ಮೀಸಲಾತಿ ಪ್ರಕಟಿಸುವ ಮೂಲಕ ಇದುವರೆಗಿದ್ದ ಕುತೂಹಲಕ್ಕೆ ತೆರೆ ಎಳೆದಿದೆ.
ಆಕ್ಷೇಪಣೆ ಸಲ್ಲಿಸಲು ಜು.8ರವರೆಗೆ ಕಾಲಾವಕಾಶ ನೀಡಲಾಗಿದ್ದು, ಆಕ್ಷೇಪಣೆ ಇಲ್ಲದಿದ್ದರೆ ಇದೇ ಮೀಸಲಾತಿ ಮುಂದುವರಿಯಲಿದೆ. ಹಾಗಾಗಿ ಆಕಾಂಕ್ಷಿಗಳು ಈಗಿನಿಂದಲೇ ರಾಜಕೀಯ ನಾಯಕರು, ಮುಖಂಡರ ಮನೆ ಕದ ತಟ್ಟುತ್ತಿದ್ದಾರೆ. ಜಿಲ್ಲಾ ಪಂಚಾಯಿತಿಗೆ ಕಳೆದ ಅವಧಿ ಗೆ 34 ಕ್ಷೇತ್ರಗಳಿದ್ದವು. ಆದರೆ ಚುನಾವಣಾ ಆಯೋಗ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದ ಬಳಿಕ ಕ್ಷೇತ್ರಗಳ ಸಂಖ್ಯೆ 34 ರಿಂದ 38ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮೊದಲು 128 ತಾಪಂ ಕ್ಷೇತ್ರಗಳಿದ್ದವು. ಕ್ಷೇತ್ರಗಳ ಪುನರ್ ವಿಂಗಡಣೆ ವೇಳೆ 24 ತಾಪಂ ಕ್ಷೇತ್ರಗಳನ್ನು ಕಡಿತಗೊಳಿಸಿದ್ದು, ಸದ್ಯ 104 ಕ್ಷೇತ್ರಗಳಿವೆ. ಈ ಎಲ್ಲ ಕ್ಷೇತ್ರಗಳಿಗೂ ಚುನಾವಣೆ ಆಯೋಗ ಮೀಸಲಾತಿ ಪ್ರಕಟಿಸಿದೆ. ಕಳೆದ ಮೇ 13ರಂದೇ ಜಿಪಂ ಆಡಳಿತಾವಧಿ ಮುಕ್ತಾಯಗೊಂಡಿತ್ತು.
ತಾಪಂಗಳ ಆಡಳಿತಾವಧಿಯೂ ಏಪ್ರಿಲ್ ಅಂತ್ಯಕ್ಕೆ ಕೊನೆಗೊಂಡಿತ್ತು. ಆದರೆ ಕೊರೊನಾ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿತ್ತು. ಆಯೋಗ ಮೀಸಲಾತಿ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಮೀಸಲಾತಿ ಬಗ್ಗೆ ಚರ್ಚೆ ಜೋರಾಗಿದೆ. ತಮ್ಮ ಬೆಂಬಲಿಗರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ಕೊಡಿಸಬೇಕು, ಎಲ್ಲಿ ಯಾರಿಗೆ ಅವಕಾಶ ಕೊಡಬಹುದೆಂಬ ಲೆಕ್ಕಾಚಾರ ಶುರುವಾಗಿದೆ. ಅಲ್ಲದೇ ಆಕಾಂಕ್ಷಿಗಳು ಶಾಸಕರು, ರಾಜಕೀಯ ಮುಖಂಡರ ಮೂಲಕ ಈಗಲೇ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ.
ನೂತನ 4 ಜಿಪಂ ಕ್ಷೇತ್ರಗಳ ರಚನೆ: ಕಳೆದ ಅವಧಿಯಲ್ಲಿ ಜಿಪಂನ 34 ಕ್ಷೇತ್ರಗಳಿದ್ದವು. ಆದರೆ ಚುನಾವಣಾ ಆಯೋಗ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದ ಬಳಿಕ ಕ್ಷೇತ್ರಗಳ ಸಂಖ್ಯೆ 34 ರಿಂದ 38ಕ್ಕೆ ಏರಿಕೆಯಾಗಿವೆ. ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು, ಹಾನಗಲ್ಲ ತಾಲೂಕುಗಳಲ್ಲಿ ತಲಾ ಒಂದು ಜಿಪಂ ಕ್ಷೇತ್ರಗಳನ್ನು ಹೆಚ್ಚಿಸಲಾಗಿದೆ. ಹಾವೇರಿ ತಾಲೂಕಿನ ಕರ್ಜಗಿ, ಹಾನಗಲ್ಲ ತಾಲೂಕಿನ ಕುಸನೂರು, ರಾಣಿಬೆನ್ನೂರು ತಾಲೂಕಿನ ಕೋಡಿಯಾಲ, ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಹೊಸದಾಗಿ ರಚನೆಯಾದ ಜಿಪಂ ಕ್ಷೇತ್ರಗಳಾಗಿವೆ.
24 ತಾಪಂ ಕ್ಷೇತ್ರಗಳ ಕಡಿತ: ಜಿಲ್ಲೆಯ ತಾಪಂ ಕ್ಷೇತ್ರಗಳನ್ನೂ ಪುನರ್ ವಿಂಗಡಿಸಲಾಗಿದ್ದು, ಕಳೆದ ಸಲಕ್ಕಿಂತ 24 ಕ್ಷೇತ್ರಗಳನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯ 8 ತಾಲೂಕು ಸೇರಿ ಈ ಹಿಂದೆ 128 ಕ್ಷೇತ್ರಗಳಿದ್ದವು. ಈ ಬಾರಿ ಅವುಗಳಲ್ಲಿ 24 ಕ್ಷೇತ್ರಗಳನ್ನು ಕಡಿತಗೊಳಿಸಿ 104 ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಹಾವೇರಿ ತಾಲೂಕಿನಲ್ಲಿ ಇದುವರೆಗಿದ್ದ 20 ಕ್ಷೇತ್ರಗಳಲ್ಲಿ 4 ಕಡಿತಗೊಳಿಸಿ, 16 ಕ್ಷೇತ್ರ ರಚಿಸಲಾಗಿದೆ. ಬ್ಯಾಡಗಿಯಲ್ಲಿ 3 ಕ್ಷೇತ್ರ ಕಡಿಮೆ ಮಾಡಿ 9ಕ್ಕೆ ಸೀಮಿತಗೊಳಿಸಲಾಗಿದೆ. 23 ಕ್ಷೇತ್ರಗಳನ್ನು ಹೊಂದಿದ್ದ ರಾಣಿಬೆನ್ನೂರಿನಲ್ಲಿ ಇನ್ನು 19 ಕ್ಷೇತ್ರಗಳು ಇರಲಿವೆ. ಹಿರೇಕೆರೂರು ತಾಲೂಕಿನಲ್ಲಿದ್ದ 22 ಕ್ಷೇತ್ರಗಳು ಹೊಸದಾಗಿ ರಚನೆಯಾಗಿರುವ ರಟ್ಟಿàಹಳ್ಳಿ ತಾಲೂಕಿಗೆ ಹಂಚಿ ಹೋಗಿವೆ. ಇದರಿಂದ ಹಿರೇಕೆರೂರು 9, ರಟ್ಟಿಹಳ್ಳಿ ತಾಲೂಕಿಗೆ 11 ಕ್ಷೇತ್ರ, ಶಿಗ್ಗಾವಿ ತಾಲೂಕಿನಲ್ಲಿ 19 ತಾಪಂ ಕ್ಷೇತ್ರ, ಹಾನಗಲ್ಲ 19 ಕ್ಷೇತ್ರ, ಸವಣೂರು 10 ಕ್ಷೇತ್ರ ಸೇರಿದಂತೆ 104 ಕ್ಷೇತ್ರಗಳಾಗಿವೆ.