ಗೊಬ್ಬರ ಗಲಾಟೆಯಿಂದ ಗೋಲಿಬಾರ್ ಕುಖ್ಯಾತಿಯ ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಮತ್ತೆ ‘ಯೂರಿಯಾ ಗೊಬ್ಬರ’ದ ಅಭಾವ ಸೃಷ್ಟಿಯಾಗಿದೆ. ಇದು ರೈತರ ನಿದ್ರೆಗೆಡಿಸಿದೆ. ಗೊಬ್ಬರಕ್ಕಾಗಿ 2008ರಲ್ಲಿ ಗಲಾಟೆಯಾಗಿ ಲಾಠಿ ಪ್ರಹಾರ ನಡೆದು ಇಬ್ಬರು ರೈತರು ಬಲಿಯಾಗಿದ್ದರು. ಇಷ್ಟೆಲ್ಲಾ ಆಗಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು, ಸಾಕಷ್ಟು ಮುಂಜಾಗ್ರತೆ ವಹಿಸಿ ಗೊಬ್ಬರ ದಾಸ್ತಾನು ಮಾಡುವಲ್ಲಿ ಮೈ ಮರೆತಿರುವುದು ಖೇದಕರ.
Advertisement
ಹಾವೇರಿ: ಜಿಲ್ಲೆಯಲ್ಲಿ ಕೃಷಿಗೆ ಅಗತ್ಯ ಯೂರಿಯಾ ಗೊಬ್ಬರ ಅಭಾವ ತಲೆದೋರಿದ್ದು ಗೊಬ್ಬರ ಸಿಗದೆ ರೈತರು ಪರದಾಡುವಂತಾಗಿದೆ.
Related Articles
Advertisement
ಹೇಳಿಕೆ ಅಷ್ಟೇ, ಶಿಸ್ತು ಕ್ರಮವಿಲ್ಲ: ಬೀಜ, ಗೊಬ್ಬರವನ್ನು ನಿಗದಿತ ದರದಲ್ಲಿಯೇ ಮಾರಾಟ ಮಾಡಬೇಕು. ಚೀಲದ ಮೇಲೆ ನಮೂದಿಸಿರುವ ಬೆಲೆಗೆ ಮಾರಾಟ ಮಾಡಿ, ರಸೀದಿ ಕೊಡಬೇಕು. ತಪ್ಪಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎನ್ನುವ ಹೇಳಿಕೆಯನ್ನು ಪ್ರತಿ ವರ್ಷ ಕೃಷಿ ಅಧಿಕಾರಿಗಳು ಸಂಪ್ರದಾಯದಂತೆ ಮಾಧ್ಯಮಗಳ ಮೂಲಕ ಕೊಡುತ್ತಲೇ ಬಂದಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸೂಚನೆ ಪಾಲನೆಯಾಗುತ್ತಲೇ ಇಲ್ಲ. ಕೆಲ ವರ್ತಕರು ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆಯುತ್ತಲೇ ಇದ್ದಾರೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿ ಬಂದಿದೆ.
ಕಾಳಸಂತೆಯಲ್ಲಿ ಮಾರಾಟ:ಯೂರಿಯಾ ಗೊಬ್ಬರ ಅಭಾವ ಪರಿಸ್ಥಿತಿಯನ್ನು ಮನಗಂಡ ಕೆಲ ಮಾರಾಟಗಾರರು ತಮ್ಮಲ್ಲಿರುವ ಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಯೂರಿಯಾ ಗೊಬ್ಬರ ಮಾರಲಾಗುತ್ತಿದೆ ಎಂಬ ವದಂತಿ ವ್ಯಾಪಕವಾಗಿ ಹಬ್ಬಿದೆ. ಇಷ್ಟಾದರೂ ಕೂಡ ಜಿಲ್ಲಾಡಳಿತ, ಕೃಷಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಅನ್ನದಾತರನ್ನು ಕೆರಳಿಸಿದೆ.
ಗಡ್ಡಕ್ಕೆ ಬೆಂಕಿ ಹತ್ತಿದಾಗ: ಒಂದು ಕಾರ್ಯಕ್ರಮ ಮಾಡಬೇಕಾದರೆ ಹತ್ತಾರು ಪೂರ್ವಭಾವಿ ಸಭೆ ಮಾಡಿ ಚರ್ಚಿಸುವ ಅಧಿಕಾರಿಗಳು, ಬಹುಸಂಖ್ಯಾತ ರೈತವರ್ಗದ ಕೃಷಿ ಚಟುವಟಿಕೆ ಆರಂಭವಾಗುವ ಮುಂಗಾರು ಪೂರ್ವ ರೈತರೊಂದಿಗೆ ಒಂದೇ ಒಂದು ಸಭೆ ನಡೆಸುವುದಿಲ್ಲ. ರೈತರ ಬೇಕು ಬೇಡಿಕೆಗಳನ್ನು ಕೇಳುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಕೃಷಿ ಪರಿಕರ, ಸೌಲಭ್ಯಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ಆಸಕ್ತಿ ವಹಿಸುವುದಿಲ್ಲ. ‘ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದರು’ ಎನ್ನುವಂತೆ ಮಳೆ ಬಿದ್ದ ಮೇಲೆಯೇ ಕೃಷಿ ಬಗ್ಗೆ ಕಣ್ಣು ಹಾಯಿಸುವ ಅಧಿಕಾರಿಗಳ ನಡೆ ರೈತರ ಕಣ್ಣು ಕೆಂಪಾಗಿಸಿದೆ.
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವ ಇಲ್ಲ. ಜಿಲ್ಲೆಗೆ 28000 ಟನ್ ಯೂರಿಯಾ ಗೊಬ್ಬರ ಅಗತ್ಯವಿದ್ದು 29500 ಟನ್ ಸರಬರಾಜಾಗಿದೆ. ಇದರಲ್ಲಿ 25000ಟನ್ ವಿತರಣೆಯಾಗಿದ್ದು ಇನ್ನೂ 4500ಟನ್ ದಾಸ್ತಾನು ಇದೆ. ಈ ಬಾರಿ ಮಳೆ ವಿಳಂಬವಾಗಿದ್ದರಿಂದ ಹೆಚ್ಚಿನ ರೈತರು ಮೆಕ್ಕೆಜೋಳದತ್ತ ವಾಲಿದ್ದಾರೆ. ಹೀಗಾಗಿ ಈ ಬಾರಿ ಇನ್ನಷ್ಟು ಯೂರಿಯಾ ಬೇಕಾಗುವ ಸಾಧ್ಯತೆ ಇರುವುದರಿಂದ ಬೇರೆ ಜಿಲ್ಲೆಯಿಂದ ತರಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಯೂರಿಯಾ ಅಭಾವ ಸೃಷ್ಟಿಸುವವರ ಬಗ್ಗೆ ರೈತರು ಮಾಹಿತಿ ನೀಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.•ಮಂಜುನಾಥ,
ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗಿದೆ. ಇದು ಕೃತಕ ಅಭಾವವೋ, ವಾಸ್ತವ ಸ್ಥಿತಿಯೋ ಗೊತ್ತಾಗುತ್ತಿಲ್ಲ. ಕೆಲ ಅಂಗಡಿಗಳಲ್ಲಿ ಯೂರಿಯಾ ಜತೆ ಬೇರೆ ಗೊಬ್ಬರ ಖರೀದಿಸಿದರಷ್ಟೇ ಯೂರಿಯಾ ಸಿಗುತ್ತಿದೆ. ಇನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಗೊಬ್ಬರಕ್ಕಾಗಿಯೇ ನಡೆದ ಹೋರಾಟದಲ್ಲಿ ಗೋಲಿಬಾರ್ ನಡೆದಿತ್ತು. ಈಗ ಮತ್ತೆ ರೈತರು ಯೂರಿಯಾ ಗೊಬ್ಬರಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ಖೇದಕರ.
•ಮಲ್ಲಿಕಾರ್ಜುನ ಬಳ್ಳಾರಿ,
ರೈತ ಮುಖಂಡ ಕೃತಕ ಅಭಾವ ಶಂಕೆ
ಕೃಷಿ ಇಲಾಖೆ ‘ಯೂರಿಯಾ ಗೊಬ್ಬರ ದಾಸ್ತಾನು ಇದೆ’ ಎಂದರೆ ರಸಗೊಬ್ಬರ ವ್ಯಾಪಾರಸ್ಥರು ಮಾತ್ರ ‘ಯೂರಿಯಾ ಗೊಬ್ಬರ ದಾಸ್ತಾನು ಇಲ್ಲ’ ಎನ್ನುತ್ತಿದ್ದಾರೆ. ಈ ದ್ವಂದ್ವ ಹೇಳಿಕೆಯಿಂದ ಮಾರುಕಟ್ಟೆಯಲ್ಲಿ ನಿಜವಾಗಿಯೂ ಯೂರಿಯಾ ಕೊರತೆ ಇದೆಯೋ ಅಥವಾ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆಯೋ ಎಂಬ ಶಂಕೆ ಮೂಡಿಸಿದೆ.