ಹಾವೇರಿ: ಕರ್ನಾಟಕ ಸರ್ಕಾರದ ‘ಎ’ ವೃಂದದ ಅಧಿಕಾರಿಗಳಿಗೆ ವಿದ್ಯುನ್ಮಾನ ವಾರ್ಷಿಕ ಕಾರ್ಯನಿರ್ವಹಣಾ ವರದಿ (ಇ ಪಿಆರ್‌ಎಸ್ ಅಪ್ಲಿಕೇಷನ್) ಹಾಗೂ ಇ ಆಫೀಸ್ ಬಳಕೆ ಕುರಿತಂತೆ ತರಬೇತಿ ಕಾರ್ಯಾಗಾರ ನಗರದ ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
ಜಿಲ್ಲಾಡಳಿತ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಜಿ.ಎಚ್. ಕಾಲೇಜಿನ ಪದವಿ ವಿಭಾಗದ ಪ್ರಾಚಾರ್ಯ ಡಾ| ಎಂ.ಎಸ್.ಯರಿಕೊಪ್ಪ ಉದ್ಘಾಟಿಸಿದರು.
ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಸಿ.ಎಸ್. ಭಂಗಿ ಮಾತನಾಡಿ, ಎ ವೃಂದದ ಅಧಿಕಾರಿಗಳು 2018-19ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಮ್ಯಾನುವಲ್ ಬದಲಾಗಿ ಆನ್‌ಲೈನ್ ಮೂಲಕ ವರದಿ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮ್ಯಾನುವಲ್ ವಾರ್ಷಿಕ ವರದಿಯನ್ನು ಸ್ವೀಕರಿಸುವುದಿಲ್ಲ. ಈ ಕಾರಣಕ್ಕಾಗಿ ಕರ್ನಾಟಕ ಸರ್ಕಾರದ ಎ ವೃಂದದ ಸೇವೆಯಲ್ಲಿರುವ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮಾರ್ಗಸೂಚಿಯಂತೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ವಾರ್ಷಿಕ ಕಾರ್ಯನಿರ್ವಹಣೆಯ ವರದಿ ಜೊತೆಗೆ ಜುಲೈನಿಂದಲೇ ಜಿಲ್ಲಾಮಟ್ಟದ ಎಲ್ಲ ಕಚೇರಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಇ ಆಡಳಿತ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಇ ಆಡಳಿತ ವ್ಯವಸ್ಥೆ ಆರಂಭಗೊಂಡಿದ್ದು, ಪೂರ್ಣ ಪ್ರಮಾಣದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲು ಆಡಳಿತ ಮತ್ತು ಸುಧಾರಣೆ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ತರಬೇತಿ ಆಯೋಜಿಸಲಾಗಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಡಳಿತ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಅಳವಡಿಕೆಗೆ ರಾಜ್ಯ ಸರ್ಕಾರದ ಇ ಆಡಳಿತ ಇಲಾಖೆ ಹೊಸ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಕೇಂದ್ರ ನಾಗರಿಕ ಸೇವೆಗಳ ಐಎಎಸ್, ಐಪಿಎಸ್ ಅಧಿಕಾರಿಗಳು ಈಗಾಗಲೇ ತಮ್ಮ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ಇಪಿಆರ್‌ಎಸ್ ಮೂಲಕ ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಎ ವೃಂದದ ಅಧಿಕಾರಿಗಳಿಗೂ 2018-19ನೇ ಸಾಲಿನಿಂದ ಈ ಪದ್ಧತಿ ಜಾರಿಯಾಗುತ್ತಿದೆ. ಅಧಿಕಾರಿಗಳು ಇದನ್ನು ಸರಿಯಾಗಿ ಅರಿತುಕೊಂಡರೆ ಅಳವಡಿಕೆ ಕಾರ್ಯ ಮತ್ತು ವಾರ್ಷಿಕ ಕಾರ್ಯನಿರ್ವಹಣೆ ವರದಿಗಳ ದಾಖಲೆ ಕಾರ್ಯ ಸುಲಭವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ವೀರೇಶ ಹಾಗೂ ವಿದ್ಯಾ ಅಧಿಕಾರಿಗಳಿಗೆ ಪ್ರಾಯೋಗಿಕವಾಗಿ ವಿದ್ಯುನ್ಮಾನ ವಾರ್ಷಿಕ ಕಾರ್ಯನಿರ್ವಹಣಾ ವ್ಯವಸ್ಥೆಯ ಕುರಿತಂತೆ ಮಾಹಿತಿ ನೀಡಿ, ಮ್ಯಾನುವೆಲ್ ನಮೂನೆಯಲ್ಲಿರುವ ಎಲ್ಲ ಅಂಶಗಳು ವಿದ್ಯುನ್ಮಾನ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಪ್ರತಿ ಇಲಾಖೆಯ ಅಧಿಕಾರಿಗೆ ಯುಜರ್ ಐಡಿ ಹಾಗೂ ಪಾಸ್‌ವರ್ಡ್ ನೀಡಲಾಗುವುದು. ವಿದ್ಯುನ್ಮಾನ ಸಹಿ ಬಳಸಿ ಎನ್‌ಎಸ್‌ಐ ವೆಬ್‌ಸೈಟ್‌ನಲ್ಲಿ ಪಿಎಆರ್ ತಮ್ಮ ವಾರ್ಷಿಕ ವರದಿ ಆಸ್ತಿ ವಿವರಗಳನ್ನು ದಾಖಲಿಸಬೇಕು. ವರದಿ ಪ್ರಾಧಿಕಾರ, ಪರಿಶೀಲನಾ ಪ್ರಾಧಿಕಾರ ಹಾಗೂ ಸ್ವೀಕಾರ ವರದಿಗಳಿಗೆ ಪ್ರತಿ ಹಂತದಲ್ಲಿ 30 ದಿವಸ ಕಾಲಾವಕಾಶವಿದೆ. ಈ ಕಾಲಾವಧಿಯಲ್ಲಿ ವರದಿ ಕಳುಹಿಸಬೇಕಾಗುತ್ತದೆ ಹಾಗೂ ಅಂಗೀಕರಿಸಬೇಕಾಗುತ್ತದೆ ಎಂದರು. ವಿವಿಧ ಹಂತದ ಪರಿಶೀಲನೆ, ವರದಿಯ ಕ್ರಮ ಕುರಿತಂತೆ ವಿವರಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಜಿ.ಎಚ್. ಕಾಲೇಜಿನ ಪ್ರಾಧ್ಯಾಪಕ ಪ್ರೊ| ವೆಂಕಟೇಶ್, ಪ್ರೊ| ದೀಪಕ ಕೊಲ್ಲಾಪುರೆ ಇದ್ದರು. ತರಬೇತಿಗೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಎ ವೃಂದದ ಅಧಿಕಾರಿಗಳು ಭಾಗವಹಿಸಿದ್ದರು.