Advertisement

ಹಾವೇರಿ: ಯುವ ಸಮೂಹ ಎಚ್ಚರಿಸುವ ವಿಚಾರ ಸಂಕಿರಣ ಅಗತ್ಯ

06:12 PM Feb 09, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ಇಲ್ಲಿಯ ಪಪೂ ಕಾಲೇಜುಗಳ ನೌಕರರ ಭವನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಜಿಲ್ಲಾ ಕಸಾಪ ಆಯೋಜಿಸಿದ್ದ ಸಮಕಾಲೀನ ಸಾಹಿತ್ಯದಲ್ಲಿ ಜೀವಪರ ನಿಲುವುಗಳು ಎಂಬ ವಿಚಾರ ಸಂಕಿರಣ ನಡೆಯಿತು.

Advertisement

ಸಮಾರೋಪ ನುಡಿಗಳನ್ನಾಡಿದ ಹಿರಿಯ ಲೇಖಕ ಮೀರಾಸಾಬಿಹಳ್ಳಿ ಶಿವಣ್ಣ, ಪ್ರತಿರೋಧಕ ದನಿಗಳು ದಮನವಾಗುತ್ತಿರುವಾಗ ಹೊಸ ಜನಾಂಗವನ್ನು ಎಚ್ಚರಿಸುವ ಇಂತಹ ವಿಚಾರ ಸಂಕಿರಣಗಳು ಆಗಾಗ ನಡೆಯಬೇಕು ಎಂದರು.

ಮೊದಲ ಗೋಷ್ಠಿಯ ವರ್ಣ, ವರ್ಗಗಳ ಮೀರುವ ಬಗೆ ಎಂಬ ವಿಷಯ ಕುರಿತು ವಿಚಾರ ಮಂಡಿಸಿದ ಕವಿ ವಿಜಯಕಾಂತ ಪಾಟೀಲ, ಸಂವಿಧಾನವೇ ನಮ್ಮ ಧರ್ಮ ಗ್ರಂಥ ಎಂದು ಒಪ್ಪಿಕೊಂಡರೆ ವರ್ಣ ವರ್ಗಗಳ ತಾರತಮ್ಯ ಸುಲಭವಾಗಿ ಮೀರಬಹುದು. ಅತಿಯಾದ ಮೌನ ಮತ್ತು ಮಾತು ಲೇಖಕರಿಗೆ ಬೇಡ. ಈ  ಸಮಾಜದಲ್ಲಿ ಇನ್ನೂ ಅಂತಃಕರಣಗಳ ಸೆಲೆಗಳು
ಬತ್ತಿಲ್ಲ. ಅವುಗಳನ್ನು ಹುಡುಕ ಬೇಕಷ್ಟೆ ಎಂದರು.

ಶಿವಮೊಗ್ಗ ಸೈಹ್ಯಾದ್ರಿ ಕಾಲೇಜಿನ ಡಾ| ಶೋಭಾ ಮರವಂತೆ ಮಾತನಾಡಿ, ಧರ್ಮ ಮತ್ತು ಅಧಿಕಾರದ ಮಾತುಗಳು ಬಂದಾಗ ನಾನು ಹೆಣ್ಣಾಗಿ ಹೆದರುತ್ತೇನೆ. ಗರ್ಭದಲ್ಲಿಯೇ ಕಟ್ಟಲ್ಪಟ್ಟ ಹೆಣ್ಣಿನ ಅವಮಾನ ಮತ್ತು ಅನುಮಾನಗಳು ಸದಾ ಚಾಲ್ತಿಯಲ್ಲಿರುತ್ತವೆ. ದೇವರಿಲ್ಲದ ಜಗತ್ತಿನಲ್ಲಿ ಪಾಪಿಗಳಿಲ್ಲ ಎಂಬ ಮಾತು ನನ್ನನ್ನು ಕಾಡಿದೆ ಎಂದರು.

ಅಕ್ಷತಾ ಕೆ.ಸಿ., ಜ್ಞಾನದ ಮಾತನಾಡಿದರು. ಗೋಷ್ಠಿಯನ್ನು ಶಿವಾನಂದ ಕ್ಯಾಲಕೊಂಡ ನಡೆಸಿದರು. ಎರಡನೆಯ ಗೋಷ್ಠಿಯಲ್ಲಿ
ಜಾಗತೀಕರಣದ ಸಾಮಾಜಿಕ ಪರಿಣಾಮಗಳ ವಿಷಯ ಕುರಿತು ಆನಂದ ಕುಂಚೂರ, ಸಾಫ್ಟವೇರ್‌ ಜಗತ್ತಿನಲ್ಲೂ ಭಾಷೆ, ಜಾತಿ, ಪ್ರಾದೇಶಿಕ ತಾರತಮ್ಯಗಳ ಮೇಲಾಟಗಳಿವೆ. ಜಾಗತೀಕರಣ ನಮ್ಮಂತಹ ಟೆಕ್ಕಿಗಳಿಗೆ ಅನ್ನ ನೀಡಿದರೂ ಸಣ್ಣತನಗಳನ್ನು ಮೀರಲಾಗುತ್ತಿಲ್ಲ. ಭ್ರಮಾತ್ಮಕವಾದ ಜೀವಪರತೆ ಬೇಡ ಎಂದರು.

Advertisement

ಪರಿಸರ ಕುರಿತಾದ ಸಂಗತಿಗಳು ಎಂಬ ವಿಷಯ ಕುರಿತು ಡಾ| ಮಲ್ಲಿಕಾರ್ಜುನಗೌಡ ತೂಲಹಳ್ಳಿ ಮಾತನಾಡಿದರು. ಗೋಷ್ಠಿಗೆ ಸ್ಪಂದನೆ ನೀಡಿದ ಕವಿ ರಂಜಾನ್‌ ಕಿಲ್ಲೇದಾರ, ಕಾವ್ಯ ಮುಖೇನ ಮಾತ್ರ ಜೀವಪರ ಚಿಂತನೆಗಳನ್ನು ನೀಡಬಹುದು ಎಂದರು.

ಗೋಷ್ಠಿಯನ್ನು ಪ್ರಥ್ವಿರಾಜ ಬೆಟಗೇರಿ ನಡೆಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕವಿ ಸತೀಶ ಕುಲಕರ್ಣಿ ವಹಿಸಿದ್ದರು. ಪ್ರಾಚಾರ್ಯ ಮಂಜುನಾಥ ವಡ್ಡರ, ಈರಣ್ಣ ಬೆಳವಡಿ, ಗಂಗಯ್ಯ ಕುಲಕರ್ಣಿ, ಲಿಂಗಯ್ಯ ಹಿರೇಮಠ, ವೀರೇಶ, ಬೇಬಿ ಲಮಾಣಿ ಇದ್ದರು. ಅಕಾಡೆಮಿಯ ಸದಸ್ಯ ಚೆನ್ನಪ್ಪ ಅಂಗಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next