ಹಾವೇರಿ: ಜಿಲ್ಲೆಯಲ್ಲಿ ಬೇಡಿಕೆ ಇಲ್ಲದ, ಉತ್ತಮ ಬೆಲೆಯೂ ಇಲ್ಲದ ಮಾಲ್ದಂಡಿ ಬಿಳಿಜೋಳ ಬೆಂಬಲಬೆಲೆ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ ಆರಂಭವಾಗಿ 20 ದಿನಗಳು ಕಳೆದರೂ ಒಂದು ಚೀಲವೂ ಜೋಳ ಖರೀದಿಸಲಾಗದೆ ಕಾಟಾಚಾರದ ಕೇಂದ್ರಗಳಾಗಿ ಪರಿಣಮಿಸಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಹಾವೇರಿ ಮತ್ತು ಶಿಗ್ಗಾವಿಯಲ್ಲಿ ಮಾಲ್ದಂಡಿ ಬಿಳಿ ಜೋಳ ಖರೀದಿ ಕೇಂದ್ರಗಳನ್ನು 20 ದಿನಗಳ ಹಿಂದೆಯೇ ಆರಂಭಿಸಲಾಗಿದ್ದು, ಈ ವರೆಗೆ ಒಂದು ಚೀಲ ಜೋಳವೂ ಖರೀದಿ ಕೇಂದ್ರದಲ್ಲಿ ಖರೀದಿಯಾಗಿಲ್ಲ.
ಬಿಳಿ ಜೋಳ ಕ್ವಿಂಟಲ್‌ಗೆ 2450 ರೂ. ಬೆಂಬಲಬೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಖರೀದಿಸಲಾಗುತ್ತಿದೆ. ಸಾಮಾನ್ಯವಾಗಿ ರೈತರು ಬೆಳೆದ ಬೆಳೆ ಬೆಲೆ ಕುಸಿತ ಕಂಡಾಗ ಸರ್ಕಾರ ಮಧ್ಯ ಪ್ರವೇಶಿಸಿ ಬೆಂಬಲಬೆಲೆಯಲ್ಲಿ ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತದೆ. ಆದರೆ, ಮಾಲ್ದಂಡಿ ಜೋಳಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 2900 ರಿಂದ 3,000 ರೂ. ದರವಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತ ಹೆಚ್ಚು ದರ ಇರುವುದರಿಂದ ರೈತರು ಮಾರುಕಟ್ಟೆಯಲ್ಲಿಯೇ ಜೋಳ ಮಾರಾಟ ಮಾಡುತ್ತಿದ್ದು, ಖರೀದಿ ಕೇಂದ್ರದತ್ತ ಧಾವಿಸುತ್ತಿಲ್ಲ.
ಮಾಲ್ದಂಡಿ ಬಿಳಿಜೋಳ ಖರೀದಿ ಕೇಂದ್ರದಲ್ಲಿ ಫೆ. 28ರ ವರೆಗೆ ರೈತರ ಹೆಸರು ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಮಾ. 31ರ ವರೆಗೆ ಖರೀದಿಗೆ ಅವಕಾಶವಿದೆ. ಪ್ರತಿ ಕ್ವಿಂಟಾಲ್ ಗೆ 2,450 ರೂ. ದರ ನಿಗದಿಯಾಗಿದೆ. ಜೋಳವು ಸರ್ಕಾರದಿಂದ ನಿಗದಿಪಡಿಸಿದ ಗುಣಮಟ್ಟ ಹೊಂದಿರಬೇಕು. ರೈತರು ನೋಂದಣಿ ಮಾಡಿಸಲು ಆಧಾರ್ ಕಾರ್ಡ್, ಪ್ರಸಕ್ತ ಸಾಲಿನ ಉತಾರ್ ಅದರಲ್ಲಿ ಮಾಲ್ದಂಡಿ ಬಿಳಿಜೋಳ ಬೆಳೆ ಇರಬೇಕು. ಬ್ಯಾಂಕ್ ಪಾಸ್‌ಬುಕ್, ಕಂದಾಯ ಇಲಾಖೆಯಿಂದ ಬೆಳೆಯ ಪ್ರಮಾಣಪತ್ರ ಫೋಟೋ ಲಗತ್ತಿಸಬೇಕು), ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಹೊರೆ ಹೊರಲು ಸಹ ರೈತರು ಸಿದ್ಧರಿಲ್ಲ. ಹೀಗಾಗಿ ಖರೀದಿ ಕೇಂದ್ರಗಳತ್ತ ರೈತರು ನಿರಾಸಕ್ತಿ ತೋರುತ್ತಿದ್ದಾರೆ.
ಹೈಬ್ರೀಡ್ ಖರೀದಿ ಇಲ್ಲ: ಜಿಲ್ಲೆಯಲ್ಲಿ ಬೆಳೆಯದ ಮಾಲ್ದಂಡಿ ಬಿಳಿ ಜೋಳದ ಖರೀದಿ ಕೇಂದ್ರ ಆರಂಭಿಸಲಾಗಿರುವುದರಿಂದ ಇದು ಅಕ್ಷರಶಃ ಕಾಟಾಚಾರದ ಕೇಂದ್ರವಾಗಿದೆ. ಇನ್ನು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಹೈಬ್ರೀಡ್ ಜೋಳ ಬೆಳೆಯುತ್ತಿದ್ದು ಅವುಗಳನ್ನು ಖರೀದಿ ಕೇಂದ್ರಕ್ಕೆ ತಂದರೆ ಖರೀದಿಸುತ್ತಿಲ್ಲ. ಹೈಬ್ರಿಡ್ ಜೋಳ ಬೆಂಬಲ ಬೆಲೆಯಲ್ಲಿ ಖರೀದಿಸಲು ಸಾಧ್ಯವಿಲ್ಲ ಎಂದು ನಿಗಮದ ಸಿಬ್ಬಂದಿ ಹೇಳಿ ಕಳುಹಿಸುತ್ತಿರುವುದರಿಂದ ಈವರೆಗೆ ಒಂದು ಚೀಲ ಜೋಳವೂ ಖರೀದಿಯಾಗಿಲ್ಲ.
ಮೆಕ್ಕೆಜೋಳ ಖರೀದಿ ಕೇಂದ್ರ ಬೇಕು: ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಭಾರಿ ಬೇಡಿಕೆ ಇದೆ. ಆದರೆ, ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿದ ಕೃಷಿ ಉತ್ಪನ್ನವನ್ನು ಪಡಿತರ ವ್ಯವಸ್ಥೆ ಮೂಲಕ ವಿತರಣೆಗೆ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಮೆಕ್ಕೆಜೋಳವನ್ನು ಆಹಾರವಾಗಿ ಬಳಕೆ ಮಾಡದ್ದರಿಂದ ರಾಜ್ಯ ಸರ್ಕಾರ ಖರೀದಿಸುತ್ತಿಲ್ಲ. ಇದರಿಂದ ರೈತರಿಗೆ ಯೋಗ್ಯ ಬೆಲೆಯಿಲ್ಲದೇ ಸಿಕ್ಕಷ್ಟಕ್ಕೆ ಮಾರಾಟ ಮಾಡುವಂತಾಗಿದೆ.
ಭತ್ತಕ್ಕೂ ಸಿಗದ ಸ್ಪಂದನೆ: ಜಿಲ್ಲೆಯ ಹಾನಗಲ್ಲ, ಶಿಗ್ಗಾವಿ ಮತ್ತು ಹಿರೇಕೆರೂರಿನಲ್ಲಿ ಭತ್ತ ಖರೀದಿ ಕೇಂದ್ರ ಸಹ ಆರಂಭಿಸಲಾಗಿದೆ. ಇದಕ್ಕೂ ರೈತರಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಇಲ್ಲಿಯೂ 20 ದಿನಗಳಲ್ಲಿ ಸುಮಾರು 450 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಕ್ವಿಂಟಲ್ ಭತ್ತವನ್ನು 1750 ರೂ. ದರದಲ್ಲಿ ಒಬ್ಬ ರೈತನಿಂದ ಗರಿಷ್ಠ 40 ಕ್ವಿಂಟಲ್‌ವರೆಗೆ ಖರೀದಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಭತ್ತಕ್ಕೆ ಇದಕ್ಕಿಂತ ಹೆಚ್ಚಿನ ದರವಿರುವುದರಿಂದ ರೈತರು ಖರೀದಿ ಕೇಂದ್ರದ ಮೂಲಕ ಮಾರಾಟ ಮಾಡಲು ಆಸಕ್ತಿ ತೋರುತ್ತಿಲ್ಲ. ಒಟ್ಟಾರೆ ಸರ್ಕಾರದ ಬೆಂಬಲಬೆಲೆ ಖರೀದಿ ಕೇಂದ್ರಗಳು ಕಾಟಾಚಾರದ ಕೇಂದ್ರಗಳಾಗಿದ್ದು ರೈತರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಾಗಿಲ್ಲ.
ಮಾಲ್ದಂಡಿ ಬಿಳಿ ಜೋಳ ಖರೀದಿ ಕೇಂದ್ರ ಆರಂಭಿಸಿ 20 ದಿನಗಳಾದರೂ ಈವರೆಗೆ ಯಾವ ರೈತರೂ ಹೆಸರು ನೋಂದಾಯಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಮಾಲ್ದಂಡಿ ಜೋಳ ಬೆಳೆಯದೇ ಇರುವುದರಿಂದ ಸಮಸ್ಯೆಯಾಗಿದೆ. ಹೈಬ್ರಿಡ್ ಬಿಳಿಜೋಳ ಖರೀದಿಗೆ ಅವಕಾಶವಿಲ್ಲ. ಭತ್ತ ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ.
ಮನೋಹರ ಬಾರ್ಕಿ,
ಸಹಾಯಕ ಕಾರ್ಯದರ್ಶಿ, ಎಪಿಎಂಸಿ
ಮಾಲ್ದಂಡಿ ಬಿಳಿಜೋಳಕ್ಕೆ ನಿಗದಿಪಡಿಸಿರುವ ಬೆಲೆ ಅವೈಜ್ಞಾನಿಕವಾಗಿದ್ದು ಮಾರುಕಟ್ಟೆ ದರಕ್ಕಿಂತ ಕಡಿಮೆ ಇದೆ. ಜಿಲ್ಲೆಗೆ ಮೆಕ್ಕೆಜೋಳ ಹಾಗೂ ಹತ್ತಿ ಖರೀದಿ ಕೇಂದ್ರದ ಅವಶ್ಯಕತೆಯಿತ್ತು. ಆದರೆ, ಸರ್ಕಾರ ಬಿಳಿಜೋಳ ಖರೀದಿ ಕೇಂದ್ರ ಸ್ಥಾಪಿಸಿದೆ. ಇನ್ನೂ ಕಾಲ ಮಿಂಚಿಲ್ಲ. ಈಗಲೂ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದರೆ ಅಲ್ಪಸ್ವಲ್ಪ ರೈತರಿಗಾದರೂ ಅನುಕೂಲವಾಗುತ್ತದೆ.
ನೆಹರು ಓಲೇಕಾರ, ಶಾಸಕರು