ಹಾವೇರಿ: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ವಿರೋಧಿ ಸಿ, ಪಶುವೈದ್ಯೆ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಡೆದ ಎಂಟು ವರ್ಷದ ಬಾಲಕಿ ಮೇಲಿನ ಹತ್ಯಾಚಾರ ಖಂಡಿಸಿ ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಜಿ.ಎಚ್. ಕಾಲೇಜು ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯರು-ಮಹಿಳೆಯರಿಗೆ ಸೂಕ್ತ ಭದ್ರತೆ ನೀಡಲು ಆಗ್ರಹಿಸಿ, ಕಾಮುಕ ಹಂತಕರಿಗೆ ಕಠಿಣ ಶಿಕ್ಷೆಗೆ ನೀಡಲು ಒತ್ತಾಯಿಸಿ ಘೋಷಣೆ ಕೂಗಿದರು. ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ವಿದ್ಯಾರ್ಥಿನಿಯರ ಮತ್ತು ಮಹಿಳೆಯರ ಮೇಲೆ ದಿನನಿತ್ಯ ದೌರ್ಜನ್ಯ, ದಬ್ಟಾಳಿಕೆ ಮತ್ತು ಅತ್ಯಾಚಾರಗಳು ಹೆಚ್ಚಾಗುತ್ತಲೇ ಇವೆ. ಆದರೂ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕಾದರೆ ಕಾನೂನುಗಳು ಇನ್ನಷ್ಟು ಬಿಗಿಯಾಗಬೇಕು. ಆ ಮೂಲಕ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಉಗ್ರಪ್ಪ ವರದಿ ಶಿಫಾರಸ್ಸುಗಳನ್ನು ಮತ್ತು ಕೇಂದ್ರದಲ್ಲಿ ಜಸ್ಟಿಸ್ ವರ್ಮಾ ವರದಿಯು ನೀಡಿರುವ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು. ರಾಜ್ಯದ ಎಲ್ಲ ಶಾಲಾ ಕಾಲೇಜು ಮತ್ತು ಮಹಿಳೆಯರು ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ಯನ್ನು ರಚಿಸಬೇಕು. ಜತೆಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಬೇಕು ಎಂದರು.
ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಅತ್ಯಾಚಾರಗಳನ್ನು ತಡೆಗಟ್ಟಲು ಸಮಾಜ ಮತ್ತು ಕುಟುಂಬಗಳು ಕೂಡ ಮುತುವರ್ಜಿ ವಹಿಸಬೇಕಿದೆ. ಮನೆಗಳಲ್ಲಿ ಹೆಣ್ಣು ಅಬಲೆ, ನಿಸ್ಸಹಾಯಕ ಎಂಬುವ ಮನೋಭಾವ ತೊಡೆದು ಹಾಕಿ, ಮಾನಸಿಕವಾಗಿ ದಿಟ್ಟತನದ ಪೋಷಣೆ ಹಾಗೂ ದೈಹಿಕ ಸ್ವರಕ್ಷಣಾ ತರಬೇತಿಗಳನ್ನು ನೀಡಬೇಕು. ಇರುವ ಕಾನೂನುಗಳ ಜಾರಿಗಾಗಿ ನಿರಂತರ ಒತ್ತಾಯ ಮಾಡಬೇಕಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಜ್ಯೋತಿ ಪೊಲೀಸಗೌಡ್ರ, ಖುಷಿ, ಕೃಷ್ಣ ಕಡಕೋಳ, ಶ್ರೇಯಾಗೌಡ, ರಕ್ಷಿತಾ, ಪ್ರೀತಿ, ಅಭಿಷೇಕ ಲಮಾಣಿ, ರಾಜು ಲಮಾಣಿ, ಹನುಮಂತ ಎಚ್., ಕನ್ನಪ್ಪ ಬ್ಯಾಡಗಿ, ನೇಹಾ, ಅರ್ಪಿತಾ, ಐಶ್ವರ್ಯ, ವೇಗಾನಂದ, ವೆಂಕಟೇಶ ಅಕ್ಕಸಾಲಿ, ಗಣೇಶ ಛತ್ರದ ಇತರರಿದ್ದರು.