Advertisement

ಸಿರಿಧಾನ್ಯ ಉತ್ತೇಜನೆಗೆ ರೈತಸಿರಿ ಅನುಷ್ಠಾನ

01:23 PM Jul 18, 2019 | Naveen |

ಹಾವೇರಿ: ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಿರಿಧಾನ್ಯಗಳನ್ನು ಉತ್ತೇಜಿಸಲು ‘ರೈತಸಿರಿ’ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲಿ ಸಿರಿಧಾನ್ಯಗಳ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವುದು ರೈತಸಿರಿ ಯೋಜನೆ ಮುಖ್ಯ ಉದ್ದೇಶವಾಗಿದ್ದು, ವಿವಿಧ ಸೌಲಭ್ಯ, ಪ್ರೋತ್ಸಾಹಧನ ನೀಡಲಾಗುತ್ತಿದೆ.

ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನ: ರೈತಸಿರಿ ಯೋಜನೆಯಡಿ ಜಿಲ್ಲೆಗೆ 1110 ಹೆಕ್ಟೇರ್‌ ಭೌತಿಕ ಗುರಿ ನಿಗದಿಪಡಿಸಲಾಗಿದೆ. ರೈತಸಿರಿ ಯೋಜನೆಯಡಿ ಫಲಾನುಭವಿ ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು. ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಹತ್ತು ಸಾವಿರ ರೂ. ನಗದು ಪ್ರೋತ್ಸಾಹಧನವನ್ನು ಎರಡು ಕಂತುಗಳಲ್ಲಿ ನೇರ ಸೌಲಭ್ಯ ವರ್ಗಾವಣೆ ಮೂಲಕ (Direct Benefit Transfe) ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡಲಾಗುವುದು. ರೈತರು ಆಗಸ್ಟ್‌ 10ರೊಳಗೆ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ರೈತ ಸಂಪರ್ಕ ಕೇಂದ್ರಗಳಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸಿರಿಧಾನ್ಯಗಳ ಸಂಸ್ಕರಣೆಗೆ ಪ್ರೋತ್ಸಾಹಧನ: ಸಿರಿಧಾನ್ಯಗಳ ಕ್ಷೇತ್ರದಲ್ಲಿ ಸಂಸ್ಕರಣೆಯ ಅತೀ ಹೆಚ್ಚು ಸಮಸ್ಯಾತ್ಮಕ ವಿಷಯವಾಗಿರುವ ಹಿನ್ನೆಲೆಯಲ್ಲಿ ಸಿರಿಧಾನ್ಯಗಳ ಸಂಸ್ಕರಣಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು, ರೈತರು ಬೆಳೆದ ಸಿರಿಧಾನ್ಯಗಳಿಗೆ ಉತ್ತಮ ಬೆಲೆ ದೊರಕಿಸಿಕೊಡಲು ಹಾಗೂ ಸಿರಿಧಾನ್ಯಗಳ ಪೋಲಾಗುವುದನ್ನು ತಡೆಯಲು ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್‌ ಮತ್ತು ಬ್ರಾಂಡಿಂಗ್‌ ಘಟಕಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಸಿರಿಧಾನ್ಯಗಳ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಪ್ರತಿ ಘಟಕಕ್ಕೆ ಶೇ. 50 ಸಹಾಯಧನ ಗರಿಷ್ಠ 10ಲಕ್ಷ ರೂ. ರಂತೆ ಎರಡು ಕಂತುಗಳಲ್ಲಿ ಪ್ರೋತ್ಸಾಹಧನ ನೀಡಲಾಗುವುದು. ಅರ್ಹ ರೈತರು, ನವೋದ್ಯಮಿಗಳು, ರೈತ ಸಂಘಗಳು, ನೋಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು (FPOs), ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು, ಜಂಟಿ ವಲಯ ಘಟಕಗಳು ಮತ್ತು ಆಹಾರ ಘಟಕಗಳ ಸ್ಥಾಪನೆ ಅಥವಾ ವಿಸ್ತರಣೆ ಅಥವಾ ಆಧುನಿಕರಣ ಉದ್ದಿಮೆಯಲ್ಲಿ ಕಾರ್ಯನಿರತರು ಈ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ.

ದಿನಾಂಕ: 01-04-2019ರ ನಂತರದ ದಿನಾಂಕದಲ್ಲಿ ಖರೀದಿಸಿ ಅಳವಡಿಸಿದ ಘಟಕಗಳಿಗೆ ಮಾತ್ರ ಪ್ರೋತ್ಸಾಹಧನ ನೀಡಲಾಗುವುದು ಹಾಗೂ ಖರೀದಿಸಿದ ಘಟಕಗಳು ಕಡ್ಡಾಯವಾಗಿ ಐಎಸ್‌ಐ, ಬಿಐಎಸ್‌ ಮಾರ್ಕ್‌ ಹೊಂದಿರಬೇಕು. ಮೊದಲು ಸಲ್ಲಿಕೆಯಾಗುವ ಅರ್ಹ ಪ್ರಸ್ತಾವನೆಗಳಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next