ಹಾವೇರಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ವಲಯಲ್ಲಿ ನಾನಾ ಮುಖಂಡರು ಅಖಾಡಕ್ಕಿಳಿಯುವ ತಯಾರಿಯನ್ನು ತೆರೆಮರೆಯಲ್ಲೇ ನಡೆಸುತ್ತಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ತಯಾರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತೊಡಗಿಕೊಂಡಿದ್ದಾರೆ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಹರಿದಾಡಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಹಾನಗಲ್ ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ಅವರು ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದರು. ಬಸವರಾಜ್ ಬೊಮ್ಮಾಯಿ ಮನೋಹರ್ ತಹಶೀಲ್ದಾರ್ ರನ್ನು ಬಿಜೆಪಿಗೆ ಕರೆ ತಂದಿದ್ದಾರೆ.
ಮನೋಹರ್ ತಹಶೀಲ್ದಾರ್ ಬಳಿಕ ಮತ್ತೋರ್ವ ಪ್ರಭಾವಿ ಪಂಚಮಸಾಲಿ ಮಖಂಡನನ್ನು ಬೊಮ್ಮಾಯಿ ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆಸಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಶಶಿಧರ ಯಲಿಗಾರ್ ಅವರನ್ನು ಬಿಜೆಪಿಗೆ ಕರೆ ತರಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಬೊಮ್ಮಾಯಿ ವಿರುದ್ದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶಶಿಧರ ಯಲಿಗಾರ್ ಸ್ಪರ್ಧಿಸಿದ್ದರು. ಯಲಿಗಾರ್ ಕಾಂಗ್ರೆಸ್ ಟಿಕೆಟ್ ಸಿಗದೆ ಜೆಡಿಎಸ್ ನಿಂದ ಕಣಕ್ಕಿಳಿದಿದ್ದರು.
ಯಲಿಗಾರ್ ಲೋಕಸಭಾ ಚುನಾವಣಾ ಹೊತ್ತಲ್ಲಿ ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯಲಿಗಾರ್ ಬೊಮ್ಮಾಯಿ ಮೂಲಕ ಯಡಿಯೂರಪ್ಪರನ್ನ ಭೇಟಿ ಮಾಡಿದ್ದಾರೆ. ಎರಡ್ಮೂರು ದಿನಗಳಲ್ಲಿ ಅಧಿಕೃತವಾಗಿ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
ಹಾವೇರಿ ಕ್ಷೇತ್ರದಿಂದ ಬೊಮ್ಮಾಯಿ ಕಣಕ್ಕಿಳಿಯುವುದು ಎಂದು ಅವರ ಬೆಂಬಲಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ಅನ್ಯ ಪಕ್ಷದ ಮುಖಂಡರನ್ನು ಬಿಜೆಪಿಗೆ ಬೊಮ್ಮಾಯಿ ಕರೆ ತರುತ್ತಿದ್ದಾರೆ ಎನ್ನಲಾಗಿದೆ.