ಹಾವೇರಿ: ಕಾಯಂ ಸಿಬ್ಬಂದಿಗಳಿಲ್ಲ. ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಜನರು ಸರ್ಕಾರಿ ಕೆಲಸಗಳಿಗೆ ಹಳೆ ತಾಲೂಕು ಕೇಂದ್ರಕ್ಕೆ ಅಲೆದಾಡುವುದು ತಪ್ಪಿಲ್ಲ-ಇದು ಜಿಲ್ಲೆಯಲ್ಲಿ ರಚನೆಯಾದ ಹೊಸ ತಾಲೂಕು ರಟ್ಟಿಹಳ್ಳಿಯ ದುಸ್ಥಿತಿ. ರಟ್ಟಿಹಳ್ಳಿ ತಾಲೂಕು ರಚನೆಯಾಗಿ ಒಂದೂವರೆ ವರ್ಷ ಕಳೆದರೂ ಜನರು ಮಾತ್ರ ಇನ್ನೂ ಹಳೆ ತಾಲೂಕು ಕೇಂದ್ರ ಹಿರೇಕೆರೂರಿಗೆ ಅಲೆದಾಡುತ್ತಲೇ ಇದ್ದಾರೆ.
Advertisement
ಕಂದಾಯ ಇಲಾಖೆ ಕೆಲಸ ಹೊರತುಪಡಿಸಿದರೆ ಉಳಿದೆಲ್ಲ ಕಾರ್ಯಗಳಿಗೆ ಜನರು ಹಿರೇಕೆರೂರನ್ನೇ ಅವಲಂಬಿಸಿದ್ದು ಹೊಸ ತಾಲೂಕು ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿಲ್ಲ. ಹೊಸ ತಾಲೂಕು ಘೋಷಣೆಯಾದ ಆರಂಭದಲ್ಲಿ ತಾಲೂಕು ಕೇಂದ್ರದ ಕಚೇರಿಗಳಿಗೆ ರಟ್ಟಿಹಳ್ಳಿಯ ತುಂಗಾ ಮೇಲ್ದಂಡೆ ಯೋಜನೆಯ 36 ಕಟ್ಟಡಗಳನ್ನು ತಾತ್ಕಾಲಿಕವಾಗಿ ಗುರುತಿಸಿ ಇಲ್ಲಿ ಇಲಾಖಾ ಕಾರ್ಯಾ ಆರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಇಲ್ಲಿ ತಹಸೀಲ್ದಾರ್ ಕಚೇರಿ ಹಾಗೂ ಹೆಸ್ಕಾಂ ಕಚೇರಿ ಮಾತ್ರ ಕಾರ್ಯಾರಂಭಿಸಿದ್ದು ಉಳಿದ ಯಾವುದೇ ಕಚೇರಿ ತನ್ನ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಿಲ್ಲ. ಕೆಲವು ಕಟ್ಟಡಗಳಿಗೆ ಕಚೇರಿಯ ನಾಮಫಲಕಗಳನ್ನು ಬರೆಸಲಾಗಿದೆಯಾದರೂ ಅಲ್ಲಿ ಯಾವುದೇ ಸಿಬ್ಬಂದಿ ನೇಮಕವಾಗದೆ ಕಚೇರಿ ಕಾರ್ಯಗಳು ಶುರುವಾಗಿಲ್ಲ. ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಸಮಾಜ ಕಲ್ಯಾಣ ಇಲಾಖೆ, ಉಪನೋಂದಣಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾ ಧಿಕಾರಿ ಕಚೇರಿ ಸೇರಿದಂತೆ ಇನ್ನಿತರ ಕಚೇರಿ ಹೆಸರಿನ ಫಲಕಗಳನ್ನು ಕಟ್ಟಡಗಳಿಗೆ ಬರೆಯಿಸಲಾಗಿದೆ. ಆದರೆ, ಆ ಕಟ್ಟಡಗಳಿಗೆ ಯಾವ ಅಧಿಕಾರಿ, ಸಿಬ್ಬಂದಿಯೂ ಬಂದಿಲ್ಲ; ಕೆಲಸವೂಆರಂಭಿಸಿಲ್ಲ.
Related Articles
Advertisement
ತಹಸೀಲ್ದಾರ್ ಕಚೇರಿಗೆ ಒಟ್ಟು 17 ಹುದ್ದೆಗಳು ಮಂಜೂರಾಗಿದ್ದು, ಇದರಲ್ಲಿ ಎರಡು ಶಿರಸ್ತೇದಾರ್ ಹುದ್ದೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲವೂ ತಾತ್ಕಾಲಿಕವಾಗಿವೆ. ಇರುವ ಎರಡು ಶಿರಸ್ತೇದಾರ್ ಹುದ್ದೆಗಳಲ್ಲಿ ಎರಡೂ ಖಾಲಿಯಿದ್ದು, ಒಬ್ಬರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಉಪತಹಸೀಲ್ದಾರ್ ಹುದ್ದೆ, ಮೂರು ಪ್ರಥಮದರ್ಜೆ ಸಹಾಯಕ ಹುದ್ದೆ, ಒಂದು ಆಹಾರ ನಿರೀಕ್ಷಕರ ಹುದ್ದೆ ಪ್ರಭಾರ ಇದೆ. ದ್ವಿತೀಯ ದರ್ಜೆ ಸಹಾಯಕ ಹುದ್ದೆ ನಾಲ್ಕು ಇದ್ದು ಇದರಲ್ಲಿ ಒಬ್ಬರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಾರೆ ಹೊಸ ತಾಲೂಕು ಘೋಷಿಸಿದ ಬಳಿಕ ಸರ್ಕಾರ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಿಲ್ಲ. ಹೀಗಾಗಿ ರಟ್ಟಿಹಳ್ಳಿ ಪೂರ್ಣ ಪ್ರಮಾಣದಲ್ಲಿ ತಾಲೂಕಾಗಿ ಕಾರ್ಯನಿರ್ವಹಿಸುವಲ್ಲಿ ಹಿಂದೆ ಬಿದ್ದಿದೆ.