ಹಾವೇರಿ: ಮಹಾತ್ಮರ ಸ್ಮರಣೆ ಮಾಡುವುದರಿಂದ ಪ್ರತ್ಯಕ್ಷ ಜ್ಯೋರ್ತಿಲಿಂಗ ಮಾಡಿದಷ್ಟು ಆತ್ಮ ಅನುಸಂಧಾನವಾಗುತ್ತದೆ. ಇಂಥ ಆತ್ಮ ಸಂತೋಷ ನಾಡಿನ ಮಠ ಮಾನ್ಯಗಳ ಆಧ್ಯಾತ್ಮಿಕ ಸಂಪತ್ತಿನಲ್ಲಿ ಅಡಗಿದೆ ಎಂದು ಶಿರಸಿ ಬಣ್ಣದಮಠದ ಶಿವಲಿಂಗ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ| ಶಿವಬಸವ ಸ್ವಾಮಿಗಳ 73ನೇ ಮತ್ತು ಲಿಂ| ಶಿವಲಿಂಗ ಶ್ರೀಗಳ 10ನೇ ಪುಣ್ಯ ಸ್ಮರಣೋತ್ಸವದ ‘ನಮ್ಮೂರ ಜಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಮೀಜಿ ಮಾತನಾಡಿದರು.
ಈಗ ಮಾನವನ ಬದುಕಿನಲ್ಲಿ ಭೌತಿಕ ಸಂಪತ್ತು ಹೆಚ್ಚಾಗಿದೆ. ಆದರೆ, ಅಂತರಂಗದ ಆಧ್ಮಾತ್ಮಿಕ ಸಂಪತ್ತು ಕಡಿಮೆಯಾಗಿದೆ. ನೈತಿಕ ಮೌಲ್ಯಗಳ ಕೊರತೆಯೇ ಇದಕ್ಕೆ ಕಾರಣವಾಗಿದೆ. ಧಾರ್ಮಿಕ ಆಚರಣೆಗಳಾದ ಪಂಚಾಚಾರಗಳು, ಅಷ್ಟಾವರಣಗಳು ಮನುಷ್ಯನಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚುಸುತ್ತವೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಜಡೆಯ ಸಂಸ್ಥಾನಮಠದ ಡಾ| ಮಹಾಂತ ಸ್ವಾಮೀಜಿ ಮಾತನಾಡಿ, ಜಾತ್ರೆ ಎಂದರೆ ಅದು ಬೆಂಡು ಬತ್ತಾಸಗಳ ಮಾರಾಟವಲ್ಲ. ಮನದ ಮಲಿನತೆ ತೊಡೆದು ಹಾಕುವ, ಕಲೆಗೆ ಬೆಲೆ ಹಾಗೂ ಬದುಕಿನ ಸಾರ್ಥಕತೆ ಜೀವನ ನಡೆಸುವುದಕ್ಕಾಗಿ ಇರುವ ಮಾರ್ಗವಾಗಿದೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಕೂಡಲದ ಗುರುಮಹೇಶ್ವರ ಸ್ವಾಮೀಜಿ ಮಾತನಾಡಿ, ಕನ್ನಡ ನಾಡಿನಲ್ಲಿ ಪುಣ್ಯಕ್ಷೇತ್ರಗಳು ಹಲವು. ತಪೋಕ್ಷೇತ್ರಗಳು ಕೆಲವೇ ಕೆಲವು. ಅಂತಹ ತಪೋಕ್ಷೇತ್ರಗಳಲ್ಲಿ ಹುಕ್ಕೇರಿಮಠವೂ ಒಂದಾಗಿದೆ. ಸಮಾಜಮುಖೀ ಚಿಂತನೆಗಳ ಮೂಲಕ ಭಕ್ತರ ಬದುಕಿನ ತಲ್ಲಣ, ಚಂಚಲತೆ, ವಿಪ್ಲವಗಳನ್ನು ನಿವಾರಿಸಿ ಸನ್ಮಾರ್ಗದಲ್ಲಿ ನಡೆಯಲು ಇಲ್ಲಿನ ಧರ್ಮ ಸಂಸ್ಕಾರ ಕಾರಣವಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹುಕ್ಕೇರಿಮಠ ಕಬಡ್ಡಿ ಚಾಂಪಿಯನ್ ಟ್ರೋಫಿ ಗೆದ್ದ ತಂಡಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ ಅವರಿಗೆ ಶ್ರೀಮಠದಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಖ್ಯಾತ ವ್ಯಂಗಚಿತ್ರಕಾರ ನಾಮದೇವ ಕಾಗದಗಾರ ಮತ್ತು ಹಿರಿಯ ಕ್ರೀಡಾಪಟು ಚಂದ್ರಶೇಖರ ಕೋಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಕಲಬುರ್ಗಿ ಸಂಗಮೇಶ ಪಾಟೀಲ ಸುಗಮ ಸಂಗೀತ ಪ್ರಸ್ತುತ ಪಡಿಸಿದರು.
ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಶಿವಣ್ಣ ಶಿರೂರ, ತಮ್ಮಣ್ಣ ಮುದ್ದಿ, ಪಿ.ಡಿ. ಶಿರೂರ, ಆರ್.ಡಿ. ಹಾವನೂರ, ಸಿ.ವೈ. ಅಂತರವಳ್ಳಿ, ಎಸ್.ಎಸ್. ಮುಷ್ಠಿ, ಜಗದೀಶ ತುಪ್ಪದ, ವೀರಣ್ಣ ಅಂಗಡಿ, ಬಿ.ಬಸವರಾಜ, ರಾಚಣ್ಣ ಲಂಬಿ, ಮಹೇಶ ಚಿನ್ನಿಕಟ್ಟಿ ಇದ್ದರು. ರಾಜಣ್ಣ ಮಾಗನೂರ ಸ್ವಾಗತಿಸಿದರು. ಎಸ್.ಎನ್. ಮಳೆಪ್ಪನವರ ಮತ್ತು ಶಿವಬಸವ ಮರಳಿಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಎಸ್. ಶಿವಣ್ಣ ವಂದಿಸಿದರು.