Advertisement
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೆಲವೆಡೆ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಮಾರಾಟಗಾರರು, ಬೀಜ ಉತ್ಪಾದನಾ ಕಂಪನಿಗಳು ಹಾಗೂ ಬೀಜವನ್ನು ಪ್ರಮಾಣಿಕರಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದರು.
Related Articles
Advertisement
ಕಾಲುವೆಯಲ್ಲಿ ನೀರು ಹರಿಸಿದಾಗ ಜನ ಜಾನುವಾರುಗಳು ಆಕಸ್ಮಿಕ ಕಾಲು ಜಾರುವಿಕೆಯಿಂದ ಕೊಚ್ಚಿಹೋಗಿ ಸಾವಿಗಿಡಾಗುತ್ತಿರುವ ಘಟನೆಗಳು ಈ ಭಾಗದಲ್ಲಿ ಪುನರಾವರ್ತನೆಯಾಗುತ್ತಿವೆ. ಕಾಲುಜಾರಿ ಬಿದ್ದಾಗ ಸಮೀಪದಲ್ಲೇ ವ್ಯಕ್ತಿ ಅಥವಾ ಜಾನುವಾರುಗಳ ಶೋಧನೆಗೆ ಅನುಕೂಲವಾಗಲು ಕಬ್ಬಿಣದ ತಡೆಗೋಡೆಗಳನ್ನು ಕಾಲುವೆ ಅಡ್ಡಲಾಗಿ ನಿರ್ಮಿಸಬೇಕು. ಬಟ್ಟೆ ತೊಳೆಯಲು, ಜಾನುವಾರು ನೀರು ಕುಡಿಯಲು ತೊಟ್ಟಿ ವ್ಯವಸ್ಥೆ ಮಾಡಬೇಕು. ಕಾಲುವೆಯ ಬದುಗಳಲ್ಲಿ ಬೆಳೆದಿರುವ ಜಾಲಿ ಇತರ ಗಿಡಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಗ್ರಾಮ ವಿಕಾಸ ಯೋಜನೆಯಡಿ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗ ಹಾಗೂ ಕೆಆರ್‌ಐಡಿಎಲ್ ವತಿಯಿಂದ ಕೈಗೊಂಡಿರುವ ಕಾಮಗಾರಿಗಳ ವಿವರ ಪಡೆದ ಅವರು ಆಯ್ಕೆಯಾದ ಕೆಲ ಗ್ರಾಮಗಳಲ್ಲಿ ಇನ್ನೂ ಕಾಮಗಾರಿ ಆರಂಭಿಸದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಭರಡಿ ಹಾಗೂ ಹುರಳಿಹಾಳ ಗ್ರಾಮಗಳಲ್ಲಿ ಗ್ರಾಮ ವಿಕಾಸ ಯೋಜನೆ ಆರಂಭಿಸಲು ಸಹಕರಿಸದ ಪಿಡಿಒಗೆ ನೋಟಿಸ್ ಜಾರಿಮಾಡಲು ಸೂಚಿಸಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶ ಪೂರ್ಣಗೊಂಡನಂತರ ಯಾವ ಯಾವ ತಾಲೂಕಿನ ಕಾಲೇಜು ವಿದ್ಯಾರ್ಥಿ ನಿಲಯಗಳ ಪ್ರವೇಶ ಸಂಖ್ಯೆ ನಿಗದಿತ ಪ್ರಮಾಣದಲ್ಲಿ ಆಗದಿದ್ದರೆ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ ಜಿಲ್ಲಾ ಕೇಂದ್ರಕ್ಕೆ ಈ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ ಒಳಗೊಂಡಂತೆ ವಿವಿಧ ವರ್ಗಗಳಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಸಕಾಲಕ್ಕೆ ಆಯಾ ವರ್ಗದ ಜನರಿಗೆ ತಲುಪಬೇಕು. ಆಯಾ ವರ್ಷವೇ ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಬೇಕು. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಈ ಕುರಿತಂತೆ ತ್ವರಿತವಾಗಿ ಕ್ರಮವಹಿಸಬೇಕು. ಜನಪ್ರತಿನಿಧಿಗಳ ನೇತೃತ್ವದಲ್ಲಿ ಫಲಾನುಭವಿಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ನಿರಂತರ ಸಂಪರ್ಕದೊಂದಿಗೆ ತ್ವರಿತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೇಂದ್ರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಿ ಅನುದಾನ ಬಿಡುಗಡೆ ಕ್ರಮವಹಿಸಬೇಕು ಎಂದರು.
ಸಭೆಯಲ್ಲಿ ವಿವಿಧ ಇಲಾಖೆ 2018-19 ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿ, ಅನುದಾನ ಬಳಕೆ ಕುರಿತಂತೆ ವಿವರವಾಗಿ ಪರಿಶೀಲನೆ ನಡೆಸಿದರು. ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಾರುತಿ ರಾಠೊಡ, ಜಿಪಂ ಕೃಷಿ ಹಾಗೂ ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲೀಲಾವತಿ ಚವ್ಹಾಣ, ಜಿಪಂ ಉಪಕಾರ್ಯದರ್ಶಿ ಗೋವಿಂದಸ್ವಾಮಿ, ಸಿಪಿಒ ಕುಮಾರ ಮಣ್ಣವಡ್ಡರ ಇದ್ದರು.