Advertisement

ಉಸ್ತುವಾರಿ ಜಿಲ್ಲೆ ಮರೆತ ಜಮೀರ್‌!

01:33 PM Jun 27, 2019 | Naveen |

ಎಚ್.ಕೆ.ನಟರಾಜ
ಹಾವೇರಿ:
ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಜಮೀರ್‌ ಅಹ್ಮದ್‌ ಜಿಲ್ಲೆಗೆ ಸಮರ್ಪಕ ಭೇಟಿ ನೀಡದೆ ಇರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಭಾರಿ ಹಿನ್ನಡೆಯಾಗಿದೆ. ಜಿಲ್ಲೆಯ ಸಮಸ್ಯೆ, ಬೇಡಿಕೆಗಳ ಬಗ್ಗೆ ಸರ್ಕಾರದ ಗಮನಸೆಳೆಯುವ ನಾಯಕ ಇಲ್ಲದೇ ಅಭಿವೃದ್ಧಿ ಅಕ್ಷರಶಃ ಮರೀಚಿಕೆಯಾಗಿದೆ.

Advertisement

ಸಚಿವ ಜಮೀರ್‌ ಅಹ್ಮದ್‌ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಆರಂಭದಲ್ಲಿ ಜಿಲ್ಲೆಗೆ ಭೇಟಿ ನೀಡಿದಾಗ, ತಾವು ಆಯ್ಕೆಯಾದ ಸ್ವಕ್ಷೇತ್ರ ಹಾಗೂ ಜವಾಬ್ದಾರಿ ವಹಿಸಿರುವ ಹಾವೇರಿ ಜಿಲ್ಲೆ ಎರಡೂ ನನ್ನ ಕಣ್ಣುಗಳಿಂದಂತೆ. ಯಾವ ಕಡೆಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ವಾರ-15 ದಿನಕ್ಕೊಮ್ಮೆ ಭೇಟಿ ನೀಡಿ ಒಂದೆರಡು ದಿನ ಉಳಿದು ಜಿಲ್ಲೆಯ ಸಮಸ್ಯೆ, ಬೇಡಿಕೆಗಳನ್ನು ಅರಿತು ಸರ್ಕಾರದ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಿಕೊಂಡು ಬರುತ್ತೇನೆ ಎಂದೆಲ್ಲ ಹೇಳಿದ್ದರು. ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಚೇರಿಯನ್ನೂ ಉದ್ಘಾಟಿಸಿದ್ದರು. ಆದರೆ, ಅವರು ತಾವಾಡಿದ ಒಂದು ಮಾತನ್ನೂ ಅನುಷ್ಠಾನಗೊಳಿಸದೆ ಇರುವುದು ಜಿಲ್ಲೆಯ ಜನರ ಆಕ್ರೋಶ ಹೆಚ್ಚಿಸಿದೆ.

ಜಮೀರ್‌ ಅಹ್ಮದ್‌ ಅವರು ತಿಂಗಳು, ಎರಡು ತಿಂಗಳಾದರೂ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಕಳೆದ ಲೋಕಸಭೆ ಚುನಾವಣೆ ಪ್ರಚಾರ ವೇಳೆ ಒಮ್ಮೆ ಬಂದು ಹೋದವರು ಈವರೆಗೆ ಬಂದಿಲ್ಲ. ಉಸ್ತುವಾರಿ ಸಚಿವರ ಜನಸಂಪರ್ಕ ಕಚೇರಿಗೂ ಬಾಗಿಲು ಹಾಕಲಾಗಿದೆ. ಹೀಗಾದರೆ ಸಮಸ್ಯೆ, ಬೇಡಿಕೆಗಳ ಬಗ್ಗೆ ತಾವು ಯಾರಲ್ಲಿ ಹೇಳಿಕೊಳ್ಳಬೇಕು. ಶಾಸಕರು ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಇಡೀ ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿ ಜನರ ಕೈಗೆ ಸಿಗದೆ ಇರುವುದನ್ನು ಖಂಡಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ‘ಉಸ್ತುವಾರಿ ಸಚಿವರು ಕಾಣೆಯಾಗಿದ್ದಾರೆ’ ಎಂದು ಪೋಸ್ಟ್‌ ಮಾಡುವ ಮೂಲಕ ತಮ್ಮ ಕೋಪ ಹೊರಹಾಕುತ್ತಿದ್ದಾರೆ.

ಸುಳ್ಳು ಹೇಳಿದರು: ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಅವರು ಜಿಲ್ಲೆಗೆ ಆಗಾಗ ಭೇಟಿ ನೀಡುವುದನ್ನು ಮರೆತಿರುವ ಜತೆಗೆ ಅವರು ಆಡಿದ ಅನೇಕ ಮಾತುಗಳು ಸುಳ್ಳಾಗಿರುವುದು ಸಹ ಜಿಲ್ಲೆಯ ಜನರ ಕಣ್ಣು ಕೆಂಪಾಗಿಸಿದೆ. ಸಚಿವ ಜಮೀರ್‌ ಅಹ್ಮದ್‌ ಅವರು ಈ ಹಿಂದೆ ಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಮೆಡಿಕಲ್ ಕಾಲೇಜು ಹಾವೇರಿ ಜಿಲ್ಲೆಗೆ ಮಂಜೂರಾಗಿದ್ದು, ಸಿಎಂ ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಹಣ ಘೋಷಿಸುತ್ತಾರೆ. ಬಜೆಟ್‌ಗೂ ಮುನ್ನ ಉನ್ನತ ಶಿಕ್ಷಣ ಸಚಿವರು ಮೆಡಿಕಲ್ ಕಾಲೇಜು ತುರ್ತು ಆರಂಭಕ್ಕೆ ಐದು ಕೋಟಿ ರೂ. ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿಕೆ ಕೊಟ್ಟರು. ಆದರೆ, ಅವರ ಹೇಳಿಕೆಯಂತೆ ಉನ್ನತ ಶಿಕ್ಷಣ ಸಚಿವರು ಅಧಿಕೃತವಾಗಿ ಐದು ಕೋಟಿ ರೂ. ಮಂಜೂರಿ ಮಾಡಿಲ್ಲ. ಸಿಎಂ ಕುಮಾರಸ್ವಾಮಿಯವರು ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜಿಗೆ ಹಣವೂ ನಿಗದಿಪಡಿಸಲಿಲ್ಲ. ಇದರ ಜತೆಗೆ ಲೋಕಸಭೆ ಚುನಾವಣೆಗೂ ಮುನ್ನ ಬ್ಯಾಡಗಿ ತಾಲೂಕು ಆಣೂರು ಕೆರೆ ತುಂಬಿಸುವ ಯೋಜನೆಗೆ ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದ್ದರು. ಆದರೆ, ಅದರ ಬಗ್ಗೆ ಈವರೆಗೂ ಅಧಿಕೃತ ಮಾಹಿತಿ ನೀಡಿಯೇ ಇಲ್ಲ. ಹೀಗಾಗಿ ಸಚಿವ ಜಮೀರ್‌ ಅಹ್ಮದ್‌ ಪದೇ ಪದೆ ಸುಳ್ಳು ಹೇಳಿ ಜನರ ವಿಶ್ವಾಸವನ್ನೂ ಕಳೆದುಕೊಳ್ಳುವಂತಾಗಿದೆ.

ಪಕ್ಷಕ್ಕೂ ಸಹಕಾರಿಯಾಗಿಲ್ಲ: ಸಚಿವ ಜಮೀರ್‌ ಅಹ್ಮದ್‌ ಅವರಿಂದ ಜಿಲ್ಲೆಯ ಅಭಿವೃದ್ಧಿಗಂತೂ ಅನುಕೂಲವಾಗಲಿಲ್ಲ. ಅವರ ರಾಜಕೀಯ ಪಕ್ಷ ಸಂಘಟನೆಗಾದರೂ ಅನುಕೂಲವಾಯಿತೇ ಎಂದು ನೋಡಿದರೆ ಅಲ್ಲಿಯೂ ಜಮೀರ್‌ ಅವರಿಂದ ಯಾವುದೇ ಲಾಭ ಆಗಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಅವಶ್ಯ ಎಂಬ ಕೂಗು ಸಹ ಅವರದೇ ಪಕ್ಷದಿಂದ ಕೇಳಿಬರುತ್ತಿದೆ.

Advertisement

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವು ಹಾವೇರಿ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯನ್ನು ಜಮೀರ್‌ ಅಹ್ಮದ್‌ ಅವರಿಗೆ ವಹಿಸಿದ್ದರ ಹಿಂದೆ ಅಭಿವೃದ್ಧಿಗಿಂತ ಲೋಕಸಭೆ ಚುನಾವಣೆಯ ಲೆಕ್ಕಾಚಾರ ಅಡಗಿತ್ತು. ಜಮೀರ್‌ ಅಹ್ಮದ್‌ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದರ ಹಿಂದೆ ಲೋಕಸಭೆ ಚುನಾವಣೆಯ ತಂತ್ರಗಾರಿಕೆ ಇಲ್ಲದೇ ಹೋಗಿದ್ದರೆ ಅಂದು ಪಕ್ಷೇತರ ಅಭ್ಯರ್ಥಿಯಾಗಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದ ಆರ್‌. ಶಂಕರ್‌ ಅವರಿಗೇ ಜಿಲ್ಲೆಯ ಉಸ್ತುವಾರಿ ಸ್ಥಾನ ನೀಡಲಾಗುತ್ತಿತ್ತು. ಆದರೆ, ಜಮೀರ್‌ ಅವರಿಂದ ಪಕ್ಷ ಬಲಿಷ್ಠಗೊಳಿಸುವ ಕಾರ್ಯವೂ ನಡೆಯಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಬೇಕಾಯಿತು.

ಇನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಬಾರಿ ಪ್ರಥಮ ಬಾರಿಗೆ ಮುಸ್ಲಿಮೇತರರಿಗೆ ಟಿಕೆಟ್ ನೀಡಿದಾಗ ಜಿಲ್ಲೆಯ ಮುಸ್ಲಿಂ ಅಲ್ಪಸಂಖ್ಯಾತರು ಪಕ್ಷದ ವಿರುದ್ಧ ಆಕ್ರೋಶ ಹೊರ ಹಾಕಿ ಭಿನ್ನಮತ ಸ್ಫೋಟಿಸಿದ್ದರು. ಈ ಭಿನ್ನಮತ ಶಮನಗೊಳಿಸುವಲ್ಲಿಯೂ ಸಹ ಜಮೀರ್‌ ಅಹ್ಮದ್‌ ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂಬ ಆರೋಪ ಕಾಂಗ್ರೆಸ್‌ ಕಾರ್ಯಕರ್ತರಿಂದಲೇ ಕೇಳಿ ಬಂದಿದೆ.

ಒಟ್ಟಾರೆ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಜಮೀರ್‌ ಅಹ್ಮದ್‌ ಜಿಲ್ಲೆಯ ಅಭಿವೃದ್ಧಿ, ಪಕ್ಷದ ಸಂಘಟನೆ ಎರಡರಲ್ಲಿಯೂ ವಿಫಲರಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂಬ ಕೂಗು ಎದ್ದಿದೆ.

ಸಂಶಯ ಸತ್ಯವಾಯಿತು
ಜಿಲ್ಲಾ ಉಸ್ತುವಾರಿಯನ್ನು ಜಮೀರ್‌ ಅಹ್ಮದ್‌ ಅವರಿಗೆ ವಹಿಸಿದಾಗ ಜಿಲ್ಲೆಯಲ್ಲಿ ‘ಸ್ಥಳೀಯ’ ಹಾಗೂ ‘ಹೊರಗಿನವರು’ ಎಂಬ ಚರ್ಚೆಗೂ ಇಂಬು ನೀಡಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ಉಸ್ತುವಾರಿಯನ್ನು ಹೊರ ಜಿಲ್ಲೆಯ ಪ್ರಕಾಶ್‌ ಹುಕ್ಕೇರಿ, ದಿ. ಮಹದೇವಪ್ರಸಾದ್‌ ಅವರಿಗೆ ವಹಿಸಲಾಗಿತ್ತು. ಆಗ ಅವರಿಂದ ಜಿಲ್ಲೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಿಯೇ ಇಲ್ಲ. ಈ ಬಾರಿಯೂ ಹೊರಗಿನವರಿಗೇ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ಕೊಟ್ಟಿರುವುದರಿಂದ ಜನತೆ ಮತ್ತೆ ಅಭಿವೃದ್ಧಿಯನ್ನು ಸಂಶದೃಷ್ಟಿಯಲ್ಲೇ ನೋಡಿದ್ದರು. ಜನರ ಆ ಸಂಶಯ ಈಗ ಸತ್ಯವಾದಂತಾಗಿದೆ.
ಉಸ್ತುವಾರಿ ಬದಲಾಯಿಸಿ
ಜಿಲ್ಲೆಯ ಏಕೖಕ ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿ ಸಚಿವ ಸಂಪುಟ ಸೇರಿಕೊಂಡ ರಾಣಿಬೆನ್ನೂರಿನ ಶಾಸಕ ಆರ್‌. ಶಂಕರ್‌ ಅವರಿಗೇ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ಜಿಲ್ಲೆಯ ಬೇಡಿಕೆ, ಸಮಸ್ಯೆಗಳ ಬಗ್ಗೆ ಮುತುವರ್ಜಿ ವಹಿಸುವ ನಿರೀಕ್ಷೆ ಇದೆ. ಹೊರಗಿನವರಿಗೆ ಜಿಲ್ಲೆಯ ಉಸ್ತುವಾರಿ ಕೊಟ್ಟರೆ ಅವರು ತಿಂಗಳಿಗೊಮ್ಮೆ, ತಿಳಿದಾಗೊಮ್ಮೆ ಜಿಲ್ಲೆಗೆ ಭೇಟಿ ನೀಡುವ, ಹೆಸರಿಗಷ್ಟೇ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂಬ ಅಭಿಪ್ರಾಯ ಜಿಲ್ಲೆಯಲ್ಲಿ ಕೇಳಿಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಯಾರು ಬಂದರೂ ಅಷ್ಟೇ. ವೈಯಕ್ತಿಕ ಲಾಭದ ದೃಷ್ಟಿಯಲ್ಲಿ ಆಲೋಚಿಸುತ್ತಾರೆಯೇ ವಿನಃ ನಿಜವಾದ ಕಾಳಜಿಯಿಂದ ಅಭಿವೃದ್ಧಿ ಬಗ್ಗೆ ಆಲೋಚಿಸುವವರ ಸಂಖ್ಯೆ ವಿರಳ. ಹೀಗಾಗಿ ಉಸ್ತುವಾರಿ ಸಚಿವರು ಜಿಲ್ಲೆಯ ಹೊರಗಿನವರಾದರೂ ಅಷ್ಟೇ. ಜಿಲ್ಲೆಯವರಾದರೂ ಅಷ್ಟೇ.
ಶಿವಾನಂದ ಗುರುಮಠ, ರೈತ ಮುಖಂಡ
Advertisement

Udayavani is now on Telegram. Click here to join our channel and stay updated with the latest news.

Next