ಹಾನಗಲ್ಲ: ಲೋಕಸಭೆ ಚುನಾವಣೆ ಮತದಾನಕ್ಕಾಗಿ ಪ್ರಥಮ ಬಾರಿಗೆ ಮತದಾನ ಮಾಡುತ್ತಿರುವ ಯುವ ಸಮೂಹ, ವೃದ್ಧರು, ವಿಕಲಚೇತನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ತಮಗೆ ಯೋಗ್ಯವೆನಿಸಿದ ಅಭ್ಯರ್ಥಿಗೆ ಮತ ನೀಡಿ ಸಂಭ್ರಮಿಸಿದರು.
ಮಂಗಳವಾರ ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ ಮಧ್ಯಾಹ್ನ ತುಸು ನಿಧಾನ ಗತಿಯಲ್ಲೇ ಸಾಗಿತ್ತು. ಮಧ್ಯಾಹ್ನ 2ಗಂಟೆ ಹೊತ್ತಿಗೆ ಶೇ.50 ಮತದಾನವಾಗಿತ್ತು. ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಮತದಾನ ನಡೆದಿರುವುದು ಕಂಡು ಬಂದಿತು. ಸಂಜೆ ಹೊತ್ತಿಗೆ ಶೇ.60 ರಷ್ಟಾಗಿತ್ತು.
ತಾಲೂಕಿನಾದ್ಯಂತ ಪೊಲೀಸ್ ಇಲಾಖೆ ಭದ್ರತೆ ಕಲ್ಪಿಸಿತ್ತು. ಎಲ್ಲಿಯೂ ಮತಯಂತ್ರಗಳು ಕೈಕೊಡದೇ ಮತದಾನ ಸುಗಮವಾಗಿ ಸಾಗಿತು. ವಿಕಲಚೇತನರಿಗೆ ವ್ಯವಸ್ಥೆಗೊಳಿಸಿದ್ದ ಸೌಲಭ್ಯಗಳನ್ನು ಸ್ಕೌಟ್-ಗೈಡ್ಸ್‌ಗಳ ಸಹಾಯಕರಿಂದ ವ್ಹೀಲ್ ಚೇರ್‌ಗಳಲ್ಲಿ ಆಗಮಿಸಿ ಮತದಾನ ಮಾಡಿದರು.
ಮಾತಿನ ಚಕಮಕಿ: ಪಟ್ಟಣದ ಜನತಾ ಬಾಲಕಿಯರ ಪ್ರೌಢಶಾಲೆ ಮತಗಟ್ಟೆಗೆ ಶಾಸಕ ಸಿ.ಎಂ. ಉದಾಸಿ ಮತದಾನ ಮಾಡಲು ಆಗಮಿಸಿದ್ದ ಸಂದರ್ಭದಲ್ಲಿ, ವ್ಯಕ್ತಿಯೋರ್ವ ಗುರುತಿನ ಚೀಟಿ ತರಲಿಲ್ಲವಾದ್ದರಿಂದ ಮತಗಟ್ಟೆ ಅಧಿಕಾರಿ ಮತ ನೀಡಲು ನಿರಾಕರಿಸಿದರು. ಮಧ್ಯೆ ಪ್ರವೇಶಿಸಿದ ಸಿ.ಎಂ. ಉದಾಸಿ ಅಧಿಕಾರಿಗಳಿಗೆ ಚುನಾವಣೆ ಆಯೋಗ ನೀಡಿರುವ ಮತದಾರರ ಮಾಹಿತಿ ಚೀಟಿ ಪರಿಗಣಿಸುವಂತೆ ಮನವಿ ಮಾಡಿದರು.
ಇದಕ್ಕೊಪ್ಪದ ಮತಗಟ್ಟೆ ಅಧಿಕಾರಿ ಯಾವುದಾದರೂ ಗುರುತಿನ ಚೀಟಿ ತರಲೇಬೇಕೆಂದು ಪಟ್ಟು ಹಿಡಿದರು. ಈ ಸಮಯದಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಶಾಸಕರು ತಮ್ಮ ಗುರುತಿನ ಚೀಟಿ ತೋರಿಸಿ ಮತದಾನ ಮಾಡಿ, ಉಳಿದ ಕೆಲವು ಮತದಾರರಿಗೂ ಚುನಾವಣೆ ಆಯೋಗ ನೀಡಿರುವ ಚೀಟಿ ಪರಿಗಣಿಸುವಂತೆ ಆಗ್ರಹಿಸಿದರು.