ಹಾವೇರಿ: ಸೂರ್ಯ ಬೇಸಿಗೆ ಆರಂಭದಲ್ಲಿಯೇ ಜನರಿಗೆ ‘ಚುರುಕು’ ಮುಟ್ಟಿಸಿದ್ದಾನೆ. ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಲು ಶುರುವಾಗಿದ್ದು, ಜನರು ‘ಉಸ್ಸಪ್ಪಾ.. ಏನಿದು ಬಿಸಿಲು’ ಎಂದು ಬೆವರು ಸುರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಈಗ ಸೂರ್ಯ 35ರಿಂದ 38 ಡಿಗ್ರಿ ಸೆಲ್ಸಿಯಸ್‌ವರೆಗೂ ತನ್ನ ಪ್ರತಾಪ ತೋರುತ್ತಿದ್ದು, ಜನಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಬೆಳಗ್ಗೆ 9ರಿಂದಲೇ ರವಿ ತನ್ನ ಪ್ರಖರತೆ ತೋರಲು ಪ್ರಾರಂಭಿಸಿದ್ದು, ಸಂಜೆ 5ರ ವರೆಗೂ ಬಿಸಿಲಿನ ಶಾಖ ಬೆವರಿಳಿಸುತ್ತದೆ. ಮಧ್ಯಾಹ್ನ 1ರಿಂದ 4ಗಂಟೆ ವರೆಗಿನ ಸಮಯವಂತೂ ಕಾದ ಹೆಂಚಿನಂತೆ ಭೂಮಿ ಸುಡುತ್ತಿರುತ್ತದೆ. ಮಣ್ಣಿನ ರಸ್ತೆಗಳಲ್ಲಿ ಧೂಳು ಇನ್ನಷ್ಟು ಒಣಗಿ ಮೇಲೆದ್ದರೆ, ಡಾಂಬರು ರಸ್ತೆಗಳು ಶಾಖವನ್ನು ಪ್ರತಿಫಲಿಸಿ, ಇಡೀ ವಾತಾವರಣವನ್ನು ಇನ್ನಷ್ಟು ಸುಡುಬೆಂಕಿಯನ್ನಾಗಿಸುತ್ತಿವೆ.
ಮಹಿಳೆಯರು, ಮಕ್ಕಳು ಹಾಗೂ ಹಿರಿಯರಿಗೆ ಮಧ್ಯಾಹ್ನ 12 ಗಂಟೆಯ ನಂತರದ ಸಂಚಾರ
ಸಂಕಟಮಯವಾಗುತ್ತಿದೆ. ಆಸ್ಪತ್ರೆ, ಕಚೇರಿ ಓಡಾಟ ಅನಿವಾರ್ಯವಾದವರಿಗೆ ಈ ಸುಡುಬಿಸಿಲಿನ ತೀವ್ರತೆ ತುಸು ಹೆಚ್ಚೇ ತನ್ನ ‘ಬಿಸಿ’ಮೂಡಿಸುತ್ತಿದೆ. ಮನೆಗಳಲ್ಲಿ, ಕಚೇರಿಗಳಲ್ಲಿ ಬೆಳಗ್ಗೆಯಿಂದಲೇ ಫ್ಯಾನ್ ಗಳು ತಿರುಗಲು ಪ್ರಾರಂಭಿಸುತ್ತಿವೆ. ಬಿಸಿಲಿನ ತೀವ್ರತೆ ಹೆಚ್ಚಾದಂತೆ ಫ್ಯಾನ್‌ನ ಗಾಳಿಯೂ ಬಿಸಿಯಾದಾಗ ಬದುಕು ಬಹಳ ಸಂಕಷ್ಟಮಯ ಎನಿಸುತ್ತದೆ.
ನೀರಿಗಾಗಿ ಹಾಹಾಕಾರ: ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯದ ಪಾಳಿಯೂ ಬಂದೇ ಬಿಟ್ಟಿದೆ. ವಿದ್ಯುತ್ ಎಷ್ಟೊತ್ತಿಗೆ ಇರುತ್ತದೆ, ಎಷ್ಟೋತ್ತಿಗೆ ಇರುವುದಿಲ್ಲ ಎಂಬುದು ತಿಳಿಯದ ರೀತಿಯಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ವಿದ್ಯುತ್ ಹೋದ ಮೇಲಂತೂ ಫ್ಯಾನಿನ ಬಿಸಿಗಾಳಿಯೂ ಮಾಯವಾಗಿ ಮನೆ, ಕಚೇರಿಗಳು ಮಂಡಕ್ಕಿ ಭಟ್ಟಿ ಎಂತಾಗುತ್ತಿವೆ. ಕುಡಿಯುವ ನೀರಿನ ಸಮಸ್ಯೆಗೂ ಹಾವೇರಿಗೂ ‘ಬಿಡದ’ ನಂಟು. ಜಿಲ್ಲೆಯಲ್ಲಿ ನೀರಿನ ಬವಣೆ ಶುರುವಾಗಿದೆ. ಜನರು ಶುದ್ಧ ನೀರಿನ ಘಟಕ, ಸಾರ್ವಜನಿಕ ಕೊಳವೆ ಬಾವಿ ಹುಡುಕಿ ಅಲೆದಾಡುವಂತಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಿದೆ.
ನೀರು ವ್ಯಾಪಾರ: ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿರುವ ಜಿಲ್ಲೆಯಲ್ಲಿ ನೀರಿನ ವ್ಯಾಪಾರ ಬೇಸಿಗೆಯಲ್ಲಿ ಬಲು ಜೋರಾಗಿಯೇ ನಡೆಯುತ್ತದೆ. ವಿಶೇಷವಾಗಿ ನಗರ ಪ್ರದೇಶದ ಜನರಿಗೆ ನೀರುಣಿಸಲು ಕೆಲವರು ದೂರದ ಪ್ರದೇಶಗಳಿಂದ ಕುಡಿಯುವ ನೀರನ್ನು ಟ್ಯಾಂಕರ್‌ನಲ್ಲಿ ತಂದು ಮಾರುತ್ತಾರೆ. ಒಂದು ಕೊಡ ನೀರಿಗೆ 1ರಿಂದ 5-10 ರೂ.ವರೆಗೂ ಮಾರುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 400-600 ರೂ. ನಿಗದಿ ಮಾಡಿದ್ದಾರೆ. ನೀರಿನ
ತುಟಾಗ್ರತೆ ಹೆಚ್ಚಿದಂತೆ ನೀರಿನ ದರವೂ ಏರುವುದು ಇಲ್ಲಿ ಮಾಮೂಲು ಆಗಿದೆ.
ಹಣ್ಣು, ತಂಪು ಪಾನೀಯ: ಬೇಸಿಗೆಯ ಬಿರುಬಿಸಿಲಲ್ಲಿ ಬೆಂದಾದ ಮೈ ಮನ ತಂಪಿಗಾಗಿ ಹಾತೊರೆಯುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ತಂಪು ಪಾನೀಯ ಅಂಗಡಿಗಳಿಗೆ, ಹಣ್ಣಿನ ಅಂಗಡಿಗಳಿಗೆ ವ್ಯಾಪಾರ ಬಲು ಜೋರು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಈ ಬೇಸಿಗೆ ದಿನಗಳಲ್ಲಿ ಅಲ್ಲಲ್ಲಿ ತಂಪು ಪಾನೀಯಗಳ ಅಂಗಡಿಗಳು ತಲೆ ಎತ್ತುತ್ತಿವೆ. ಐಸ್ ಕ್ರೀಮ್ ಅಂಗಡಿಗಳಲ್ಲೂ ಜನ ಕೂಲ್ ಕೂಲ್ ಆಗುತ್ತಿದ್ದಾರೆ. ಬೇಸಿಗೆ ಬಿಸಿಲಿನ ತಾಪ ಹೇಗೆ ಆರಂಭದಲ್ಲಿಯೇ ಚುರುಕು ಮೂಡಿಸಿದೆಯೋ ಹಾಗೇ ಐಸ್ ಕ್ಯಾಂಡಿಗಳ ಮಾರಾಟಕ್ಕೂ ಜಬರದಸ್ತ್ ಆರಂಭ ಸಿಕ್ಕಿದೆ.
ಜಿಲ್ಲೆಯಲ್ಲಿ ಬೇಸಿಗೆ ತನ್ನ ಆರಂಭದ ಈ ದಿನಗಳಲ್ಲೇ ತನ್ನ ಉಗ್ರ ಪ್ರತಾಪವನ್ನು ಸೂರ್ಯ ಪ್ರಖರತೆ ಜಾಸ್ತಿ ಮಾಡುವ ಮೂಲಕ ಪ್ರದರ್ಶಿಸುತ್ತಿದ್ದು, ಏಪ್ರಿಲ್-ಮೇ ಹೊತ್ತಿಗೆ ಇದು ಇಮ್ಮಡಿಯಾಗುವ ಸಾಧ್ಯತೆ ಇದೆ.
ಡಿಸೆಂಬರ್ ತಿಂಗಳಲ್ಲಿ ದಿನಕ್ಕೆ 200-250 ರೂ. ವ್ಯಾಪಾರ ಮಾಡ್ತಿದ್ವಿ. ಈಗ ಬೇಸಿಗೆ ಬಿಸ್ಲು ಅಲ್ರಿ ವ್ಯಾಪಾರ ಜಾಸ್ತಿ ಆಗ್ತಾ ಐತ್ರಿ. ಈಗ ದಿನಕ್ಕೆ ಸಾವಿರ ರೂ. ತನಕ ವ್ಯಾಪಾರ ಮಾಡ್ತೇವಿ’.
ಮೊಹಮ್ಮದ್,
ಕಬ್ಬಿನ ಹಾಲು ವ್ಯಾಪಾರಿ
ಮೊಹಮ್ಮದ್,
ಕಬ್ಬಿನ ಹಾಲು ವ್ಯಾಪಾರಿ
ಎಚ್.ಕೆ. ನಟರಾಜ