ಹಾವೇರಿ: ‘ಊರ ಸುತ್ತ ಕಣ್ಣು ಹಾಯಿಸಿದಲ್ಲೆಲ್ಲ ನೀರೇ ನೀರು. ಆದರೆ, ಕುಡಿಯುಲು ಮಾತ್ರ ಒಂದು ಹನಿಯೂ ಶುದ್ಧ ನೀರಿಲ್ಲ. ಶುದ್ಧ ನೀರಿಲ್ಲದೇ ಜನ ಮಣ್ಣು ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ’ -ಇದು ತಾಲೂಕಿನಲ್ಲಿ ನೆರೆಗೊಳಗಾದ ಬೆಳವಿಗಿ ಹಾಗೂ ಗಳಗನಾಥ ಗ್ರಾಮಸ್ಥರ ದುಸ್ಥಿತಿ.
Advertisement
ಕಳೆದ ಒಂದು ವಾರದಿಂದ ಸುರಿದ ಮಳೆ ಹಾಗೂ ನೆರೆ ಸೃಷ್ಟಿಸಿದ ವರದಾ ಹಾಗೂ ತುಂಗಭದ್ರಾ ನದಿ ಪಾತ್ರದ ಈ ಎರಡೂ ಗ್ರಾಮಗಳ ಜನರು ಈಗ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು ಶುದ್ಧ ನೀರು ಇವರಿಗೆ ಮರೀಚಿಕೆಯಾಗಿದೆ.
Related Articles
Advertisement
ಬೆಳವಿಗಿ: ಬೆಳವಿಗಿಯಲ್ಲಿ ವರದಾ ನದಿಯ ನೆರೆ ಕಾರಣದಿಂದ 20-25 ಮನೆಗಳು ಜಲಾವೃತಗೊಂಡಿವೆ. ಈ ಕುಟುಂಬವರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಗ್ರಾಮಕ್ಕೆ ಹತ್ತಿಕೊಂಡು ವರದಾ ನದಿ ತುಂಬಿ ಹರಿಯುವ ಜತೆಗೆ ಊರೊಳಗೂ ದೊಡ್ಡ ಪ್ರಮಾಣದಲ್ಲಿ ನುಗ್ಗಿದೆ. ಶುದ್ಧ ಕುಡಿಯುವ ನೀರು ಪೂರೈಸುವ ಬೊರ್‌ವೆಲ್ ಮೊಟಾರು, ವಿದ್ಯುತ್ ಸ್ವಿಚ್ ಬೋರ್ಡ್, ವಿದ್ಯುತ್ ಕಂಬಗಳು ಎಲ್ಲವೂ ನೀರೊಳಗೆ ಮುಳುಗಿವೆ. ವಿದ್ಯುತ್ ಇಲ್ಲದೇ ಜನರಿಗೆ ಶುದ್ಧ ಕುಡಿಯುವ ನೀರಿನ ಅಭಾವ ಎದುರಾಗಿದೆ.
ಪರಿಹಾರ ಕೇಂದ್ರದಲ್ಲಿ ಅಡುಗೆಗೂ ನದಿಯ ನೀರನ್ನೇ ಬಳಸುವ ಜತೆಗೆ ಜನರು ಸಹ ಇದೇ ನೀರು ಕುಡಿಯುತ್ತಿದ್ದಾರೆ. ‘ನೀರನ್ನು ಸೋಸಿ, ಕಾಯಿಸಿ, ಉಪ್ಪು ಹಾಕಿ ಕುಡಿಯುರಿ’ ಎಂದು ಗ್ರಾಮ ಪಂಚಾಯಿತಿಯಿಂದ ರವಿವಾರದಿಂದ ಡಂಗೂರ ಸಾರುತ್ತಿದ್ದಾರೆ. ಆದರೆ, ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾತ್ರ ಅಧಿಕಾರಿ ವರ್ಗ ಮಾಡಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗಳಗನಾಥ: ಬೆಳವಿಗಿ ಗ್ರಾಮದ ಪಕ್ಕದಲ್ಲಿಯೇ ಇರುವ ಗಳಗನಾಥ ಗ್ರಾಮದಲ್ಲಿಯೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ ತುಂಗಭದ್ರಾ ನದಿ ಪ್ರವಾಹ ತುಸು ಹೆಚ್ಚಾಗಿಯೇ ಇರುವುದರಿಂದ ಬೋರ್‌ವೆಲ್ಲ ಮೋಟಾರ್, ವಿದ್ಯುತ್ ಸ್ವಿಚ್ಛಬೋರ್ಡ್, ವಿದ್ಯುತ್ ಕಂಬ ಎಲ್ಲವೂ ನಾಲ್ಕೈದು ಅಡಿಯಷ್ಟು ಎತ್ತರದ ನೀರಲ್ಲಿ ಮುಳುಗಿವೆ. ಹೀಗಾಗಿ ಇಲ್ಲಿಯೂ ಗ್ರಾಪಂ ವತಿಯಿಂದ ಪರಿಹಾರ ಕೇಂದ್ರಕ್ಕೆ ಮಣ್ಣು ಮಿಶ್ರಿತ ನೀರನ್ನೇ ಅಡುಗೆಗೆ ಬಳಸಲಾಗುತ್ತಿದೆ. ಜನರು ಸಹ ನೆರೆ ಬಂದಿರುವಲ್ಲಿಯೇ ಹೋಗಿ ಮಣ್ಣುಮಿಶ್ರಿತ ನೀರು ತಂದು ಕುಡಿಯುತ್ತಿದ್ದಾರೆ. ಒಟ್ಟಾರೆ ತಾಲೂಕಿನ ಬೆಳವಿಗಿ ಹಾಗೂ ಗಳಗನಾಥ ಗ್ರಾಮಗಳು ಜಲಾವೃತವಾಗಿದ್ದರೂ ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿರುವುದು ವಿಪರ್ಯಾಸ.