Advertisement

ಹಾವೇರಿಯಲ್ಲಿ ‘ಸ್ವಚ್ಛತೆ’ಮರೀಚಿಕೆ

06:35 PM Sep 12, 2019 | Team Udayavani |

ಎಚ್.ಕೆ. ನಟರಾಜ
ಹಾವೇರಿ:
ಹಾವೇರಿಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ. ಸ್ವಚ್ಛ ಭಾರತದ ಕಲ್ಪನೆ, ಯೋಜನೆ ಅನುಷ್ಠಾನವಂತೂ ಇಲ್ಲಿ ಇಲ್ಲವೇ ಇಲ್ಲ.

Advertisement

ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಒಮ್ಮೆ ಸುತ್ತು ಹಾಕಿದರೆ ಈ ಮಾತು ಅಕ್ಷರಶಃ ಸತ್ಯವೆಂಬುದು ಸಾಬೀತಾಗುತ್ತದೆ. ಕಸದಿಂದ ತುಂಬಿ ತುಳುಕುತ್ತಿರುವ ಕಸದ ತೊಟ್ಟಿಗಳು, ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆಯಿಂದ ಹಾವೇರಿ ನಗರ ಸಂಪೂರ್ಣ ಹದಗೆಟ್ಟಿದ್ದು, ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.

ಕೊಳಚೆ, ಕಸ ರಾಶಿ ರಾಶಿಯಾಗಿ ಬಿದ್ದಿದ್ದರೂ ಅದನ್ನು ತೆಗೆಯುವ ಗೋಜಿಗೆ ನಗರಸಭೆ ಮುಂದಾಗಿಲ್ಲ. ಇದೆಲ್ಲ ಮಾಮೂಲು ಎನ್ನುವ ರೀತಿಯಲ್ಲಿ ಇಲ್ಲಿಯ ಜನಪ್ರತಿನಿಧಿಗಳು, ಜನರು ಮೂಗು ಮುಚ್ಚಿಕೊಂಡೇ ಸಾಗುತ್ತಿರುವುದು ಸತ್ಯ. ನಗರದ ಯಾವುದೇ ವಾರ್ಡ್‌ಗೆ ಭೇಟಿ ನೀಡಿದರೂ ಅಲ್ಲಿ ಅನೈರ್ಮಲ್ಯ ಎದ್ದು ಗೋಚರಿಸುತ್ತದೆ. ಕಾಲುವೆಗಳು ತುಂಬಿ ಕೊಳಚೆ ರಸ್ತೆ ಮೇಲೆ ಹರಿಯುತ್ತಿರುತ್ತದೆ. ಈ ಕೊಳಚೆಯನ್ನು ದಾಟಿಕೊಂಡೇ ಜನರು ಹೋಬೇಕಾದ ದುಃಸ್ಥಿತಿ ಇದೆ.

ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ ಕಸದ ತೊಟ್ಟಿಗಳು ತುಂಬಿ ಅಪಾರ ಪ್ರಮಾಣದ ಕಸ ಹೊರಗೆ ಬಿದ್ದಿರುತ್ತದೆ. ಹೊರ ಚೆಲ್ಲಿದ ಕಸದ ರಾಶಿಯಲ್ಲಿ ಹಂದಿ, ನಾಯಿಗಳು ಹುಡುಕಾಟ ನಡೆಸಿರುವ ದೃಶ್ಯ ಕಾಣಿಸುತ್ತದೆ. ತರಕಾರಿ ಮಾರುಕಟ್ಟೆ ಪ್ರದೇಶ, ಜಯನಗರ, ರೈಲ್ವೆ ನಿಲ್ದಾಣ ರಸ್ತೆ ಸೇರಿದಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಕಸ-ಕೊಳಚೆಯ ರೌದ್ರನರ್ತನ ಕಣ್ಣಿಗೆ ರಾಚುತ್ತದೆ. ಇದೆಲ್ಲ ನೋಡಿದರೆ ಇಲ್ಲಿ ನಗರಸಭೆ ಇದೆಯೋ, ಇಲ್ಲವೋ, ಇದ್ದರೆ ಅದು ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಕೊಳಚೆಯಲ್ಲೇ ಆಹಾರ: ನಗರದ ಅನೇಕ ಕಡೆಗಳಲ್ಲಿ ರಸ್ತೆ ಬದಿಯೇ ಗೂಡಂಗಡಿಗಳನ್ನಿಟ್ಟುಕೊಂಡು ಸಿದ್ಧ ಆಹಾರಗಳನ್ನು ಮಾರಲಾಗುತ್ತಿದೆ. ಈ ಗೂಡಂಗಡಿಗಳು ಕೊಳಚೆ ತುಂಬಿರುವ ಗಟಾರ ಮೇಲೆಯೇ ಇದ್ದು, ಅಲ್ಲಿಯೇ ಎಗ್‌ರೈಸ್‌, ಮಿರ್ಚಿ ಸೇರಿದಂತೆ ಇತರೆ ಆಹಾರ ತಯಾರಿಸಿ ಮಾರಲಾಗುತ್ತದೆ. ಇಲ್ಲಿ ಕೊಳಚೆ ತುಂಬಿರುವ ರಸ್ತೆಯಲ್ಲೇ ನಿಂತು ಜನರು ತಿನ್ನುತ್ತಾರೆ. ನಗರಸಭೆ ಮಾತ್ರ ಜನರ ಆರೋಗ್ಯ, ನಗರದ ನೈರ್ಮಲ್ಯ ತಮ್ಮ ಜವಾಬ್ದಾರಿಯೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ.

Advertisement

ಸೊಳ್ಳೆಗಳ ಕಾಟ: ಎಲ್ಲೆಂದರಲ್ಲಿ ಕಸದ ರಾಶಿ, ಕಾಲುವೆಗಳನ್ನು ತುಂಬಿದ ಕೊಳಚೆಯ ಕಾರಣದಿಂದ ಇಡೀ ನಗರವೇ ಸೊಳ್ಳೆಗಳ ಉತ್ಪತ್ತಿ ತಾಣದಂತಾಗಿದೆ. ಕೊಳೆತ ಕಸ, ಕಾಲುವೆಗಳಲ್ಲಿ ನಿಂತ ಕೊಳಚೆಯಿಂದ ಸೊಳ್ಳೆ, ನೋಣಗಳ ಸಮೃದ್ಧ ಸಂತತಿ ಇಲ್ಲಿ ಗೋಚರಿಸುತ್ತದೆ. ಇದರಿಂದಾಗಿ ಡೆಂಘೀ, ಮಲೇರಿಯಾ, ಚಿಕೂನ್‌ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಜನ ದಿನ ಕಳೆಯುವಂತಾಗಿದೆ.

ಹಂದಿಗಳ ಕಾಟ: ಕಾಲುವೆಗಳಲ್ಲಿನ ಕೊಳಚೆಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸದೇ ಇರುವುದರಿಂದ ಹಾಗೂ ಕಸದ ತೊಟ್ಟಿಗಳಲ್ಲಿನ ಕಸವನ್ನು ಸಕಾಲಕ್ಕೆ ಸಾಗಿಸದೆ ಇರುವುದರಿಂದ ಹಂದಿಗಳ ಹಿಂಡೇ ಇಲ್ಲಿ ಓಡಾಡುತ್ತಿರುತ್ತದೆ. ಹಂದಿಗಳು ನಗರದಲ್ಲಿ ಹೆಚ್ಚಾಗಿದ್ದು, ಅವುಗಳಿಂದ ಸಂಚರಿಸುತ್ತಿರುವವರಿಗೆ ಭಾರೀ ತೊಂದರೆಯಾಗುತ್ತಿದೆ.

ನಗರದ ಸ್ವಚ್ಛತೆಗಾಗಿ ನಗರಸಭೆ ಪ್ರತಿ ತಿಂಗಳು ಅಂದಾಜು 10 ಲಕ್ಷ ರೂ.ಗಳಷ್ಟು ಖರ್ಚು ಮಾಡುತ್ತಿದೆ. ಆದರೆ, ನೈರ್ಮಲ್ಯ ಮಾತ್ರ ನಗರದಿಂದ ಬಹಳ ದೂರವೇ ಉಳಿದಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next