Advertisement

ಬರಿದಾದ  ವರದೆ 

10:14 AM Mar 22, 2019 | Team Udayavani |

ಹಾವೇರಿ: ಕುಡಿಯುವುದಕ್ಕಾಗಿ, ಕೃಷಿಗಾಗಿ ಯಥೇತ್ಛವಾಗಿ ನೀರುಣಿಸುತ್ತ ಬಂದಿರುವ ವರದೆ ಈ ಬಾರಿ ತನ್ನ ಒಡಲನ್ನು ಸಂಪೂರ್ಣವಾಗಿ ಬರಿದಾಗಿಸಿಕೊಂಡಿದೆ. ಹೀಗಾಗಿ ವರದೆಯ ಒಡಲ ಮಕ್ಕಳು ಹನಿ ನೀರಿಗೂ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಹರಿದಿರುವ ವರದಾ ನದಿ ಸಾವಿರಾರು ರೈತರಿಗೆ ನೀರುಣಿಸುತ್ತ ಬಂದಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ಈ ನದಿ, ಬೇಸಿಗೆಯಲ್ಲಿ ತನ್ನೊಡಲೊಳಗಿಟ್ಟುಕೊಂಡಿರುವ ನೀರನ್ನು ಜನರ ಕೃಷಿಗೆ, ಕುಡಿಯಲು ಕೊಡುತ್ತ ಬಂದಿದೆ. ಆದರೆ, ಈ ಬಾರಿ ಹಿಂಗಾರು-ಮುಂಗಾರು ಎರಡೂ ಮಳೆ ಸಮರ್ಪಕವಾಗಿ ಬಾರದೆ ಇರುವುದರಿಂದ ನದಿಯಲ್ಲಿ ನೀರಿನ ಹರಿವು ನಿಂತು ವರದೆಯ ಒಡಲು ಒಣಗಿ ಬಾಯ್ತೆರೆದಿದೆ.

Advertisement

ಪ್ರತಿ ಬೇಸಿಗೆಯಲ್ಲಿ ನದಿಯ ಹರಿವು ಕಡಿಮೆಯಾದರೂ ನದಿ ಒಡಲಲ್ಲಿ ಒಂದಿಷ್ಟು ನೀರು ಸಂಗ್ರಹ ಇದ್ದೇ ಇರುತ್ತಿತ್ತು. ಕೆಲವು ಪ್ರದೇಶಗಳಲ್ಲಿ ನದಿ ಒಡಲು ತೇವಾಂಶದಿಂದ ಕೂಡಿದ್ದು ಸ್ವಲ್ಪ ಅಗೆದಾಗ ವರತೆ ನೀರಾದರೂ ಬರುತ್ತಿತ್ತು. ಈ ಬಾರಿ ನದಿ ಸಂಪೂರ್ಣ ಬತ್ತಿ ಕುಡಿಯಲು ವರತೆ ನೀರೂ ಸಿಗದ ಪರಿಸ್ಥಿತಿ ಇದೆ.

ಮಳೆಗಾಲದಲ್ಲಿ ಮೈದುಂಬಿ ಹರಿಯುವ ವರದಾ ನದಿ, ಬೇಸಿಗೆ ಕಾಲದಲ್ಲಿ ತನ್ನ ಒಡಲನ್ನು ಬರಿದಾಗಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಬೇಸಿಗೆ ಕಾಲದಲ್ಲೂ ನದಿಯಲ್ಲಿ ಸಮರ್ಪಕ ನೀರು ಹರಿಸಬೇಕೆಂಬ ಉದ್ದೇಶದಿಂದ ನದಿಗೆ ಅಡ್ಡಲಾಗಿ 10ಕ್ಕೂ ಹೆಚ್ಚು ಬ್ಯಾರೇಜ್‌ಗಳನ್ನು ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಆದರೆ, ಜನಪ್ರತಿನಿಧಿಗಳ ಹಾಗೂ ಜಿಲ್ಲಾಡಳಿತದ ದೂರದೃಷ್ಟಿಯ ಕೊರತೆಯಿಂದ ಸಮಯಕ್ಕೆ ಸರಿಯಾಗಿ ಬ್ಯಾರೇಜ್‌ಗಳನ್ನು ಬಂದ್‌ ಮಾಡದ ಪರಿಣಾಮ ಇಂದು ಬ್ಯಾರೇಜ್‌ಗಳಲ್ಲೂ ಹನಿ ನೀರು ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.

ಇನ್ನು ವರದಾ ನದಿ ನೀರು ಆಧರಿಸಿ ಕೆಲವು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ನದಿಯಲ್ಲಿ ನೀರಿಲ್ಲದೇ ಇರುವುದರಿಂದ ಆ ಗ್ರಾಮಸ್ಥರೆಲ್ಲ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಅಂತರ್ಜಲಮಟ್ಟ ಕುಸಿತ: ನದಿ, ಕೆರೆ, ಹೊಳೆ ಸೇರಿದಂತೆ ನೀರಿನ ಮೂಲಗಳು ಒಣಗಿದ್ದರಿಂದ ಅಂತರ್ಜಲ ಮಟ್ಟವೂ ಕುಸಿದಿದೆ. ಗ್ರಾಮೀಣ ಪ್ರದೇಶದ ಕೊಳವೆ ಬಾವಿಗಳ ಮೂಲಕ ನೀರು ಹಿಡಿಯಲು 300ರಿಂದ 500 ಅಡಿವರೆಗೂ ಆಳಕ್ಕೆ ಹೋಗಬೇಕಿದೆ. ಹೀಗೆ ಸಿಕ್ಕ ನೀರು ಫ್ಲೋರೈಡ್‌ನಿಂದ ಕೂಡಿದ್ದು ಕುಡಿಯಲು ಅಯೋಗ್ಯವಾದರೂ ಇದನ್ನೇ ಕುಡಿಯುವುದು ಗ್ರಾಮಸ್ಥರಿಗೆ ಅನಿವಾರ್ಯವಾಗಿದೆ. ಕೊಳವೆಬಾವಿ ನೀರು ಕುಡಿಯಲು ಆಗದೆ ನದಿ ಪಾತ್ರದ ಜನರು ತಾಸುಗಟ್ಟಲೆ ನಿಂತು ಬತ್ತಿದ ನದಿಯ ಒಡಲನ್ನು ಬಗೆದು ವರತೆ ನೀರು (ಬೊಗಸೆ ನೀರು) ತುಂಬಿ ಸೈಕಲ್‌, ಚಕ್ಕಡಿ, ಬೈಕ್‌, ದೂಡುವ ಗಾಡಿ ಸೇರಿದಂತೆ ವಿವಿಧ ವಾಹನಗಳಲ್ಲಿ ಒಯ್ಯುವ ಪರಿಸ್ಥಿತಿ ಇದೆ.

ಜಾನುವಾರುಗಳಿಗೂ ತೊಂದರೆ: ವರದಾ ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಕೃಷಿ ಚಟುವಟಿಕೆ, ಜನರ ಕುಡಿಯುವ ನೀರಿಗೆ ಮಾತ್ರ ತೊಂದರೆಯಾಗಿಲ್ಲ. ಜಾನುವಾರುಗಳಿಗೆ ಕುಡಿಯಲು, ಮೈತೊಳೆಯಲು ಸಹ ನೀರಿನ ಸಮಸ್ಯೆ ಎದುರಾಗಿದೆ. ಹಳ್ಳಿಗಳಲ್ಲಿ ಈಗಾಗಲೇ ವಿದ್ಯುತ್‌ ಕಣ್ಣಾಮುಚ್ಚಾಲೇ ಆಟ ಈಗಲೇ ಆರಂಭವಾಗಿದ್ದು, ಕೊಳವೆ ಬಾವಿ ನೀರು ಸಹ
ಸಕಾಲಕ್ಕೆ ಸಮರ್ಪಕವಾಗಿ ಸಿಗುತ್ತಿಲ್ಲ. ಹೀಗಾಗಿ ರೈತರು ವಾರಕ್ಕೊಮ್ಮೆ ಮಾತ್ರ ಜಾನುವಾರುಗಳ ಮೈ ತೊಳೆಯುವುದು ಕಷ್ಟವಾಗಿದೆ.

Advertisement

ಈ ಬಾರಿ ಮಳೆಯಿಲ್ಲದೇ ಇರುವುದು ಗೊತ್ತಿದ್ದರೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ನದಿಯ ಬ್ಯಾರೇಜ್‌ಗಳಲ್ಲಿ ನೀರು ನಿಲ್ಲಿಸುವ ಪ್ರಯತ್ನ ಮಾಡಿಯೇ ಇಲ್ಲ. ಹೀಗಾಗಿ ನದಿಯಲ್ಲಿ ಇರುವಷ್ಟು ನೀರು ಹರಿದು ಹೋಗಿ ಈಗ ನದಿ ಒಣಗಿದ್ದು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ.
ವಿರುಪಾಕ್ಷಪ್ಪ, ರೈತ.

ಬೇಸಿಗೆಯಲ್ಲಿ ಸಮಸ್ಯೆಯಾಗಬಹುದಾದ 116 ಹಳ್ಳಿಗಳನ್ನು ಗುರುತಿಸಲಾಗಿದೆ. ಟಾಸ್ಕ್´ೋರ್ಸ್‌ ಸಮಿತಿ ಮೂಲಕ ಅಗತ್ಯವಿದ್ದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಕೆಲವೆಡೆ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಜನರಿಗೆ ನೀರು ಪೂರೈಸಲಾಗುತ್ತಿದೆ. ನೀರಿನ ಮೂಲ ಇಲ್ಲದ ಕಡೆಗಳಲ್ಲಿ ಹಾಗೂ ತುರ್ತು ಸಮಸ್ಯೆ ಇದ್ದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುವುದು.
. ವಿನಾಯಕ ಹುಲ್ಲೂರ‌, 
ಕಾರ್ಯ ನಿರ್ವಾಹಕ ಇಂಜಿನಿಯರ್‌,
ಕುಡಿಯುವ ನೀರು, ನೈರ್ಮಲ್ಯ ವಿಭಾಗ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next