ಹಾವೇರಿ: ಮಹಾಮಾರಿ ಕೊರೊನಾ ಸೋಂಕು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಇಲ್ಲಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಸಿಗದೇ ಸೋಂಕಿತರು ನಿತ್ಯ ಪರದಾಡುತ್ತಿದ್ದು, ಇಲ್ಲಿನ ಅವ್ಯವಸ್ಥೆಯ ಮುಖಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿವೆ.
ಕೋವಿಡ್ ಆಸ್ಪತ್ರೆಗೆ ದಾಖಲಾಗಿರುವ ಸೋಂಕಿತರೊಬ್ಬರು ತಾವೇ ಇಂಜೆಕ್ಷನ್ ಚುಚ್ಚಿಕೊಳ್ಳುತ್ತಿರುವುದು, ಡ್ಯೂಟಿ ನರ್ಸ್ ಸಮೀಪದಲ್ಲೇ ಇದ್ದರೂ ಸೋಂಕಿತರ ಆರೈಕೆಗೆ ಬಾರದಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಕೋವಿಡ್ ಆಸ್ಪತ್ರೆಯಲ್ಲಿನ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏಳು ಸಾವಿರಕ್ಕೆ ಸಮೀಪಿಸುತ್ತಿದೆ. ಈಗಾಗಲೇ 130 ಜನರು ಸೋಂಕಿಗೆ ಬಲಿಯಾಗಿದ್ದಾರೆ. ನಿತ್ಯವೂ ಸರಾಸರಿ 200ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಲೇ ಇದೆ. ಸರ್ಕಾರ ಕೋವಿಡ್ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೇವೆ ನೀಡಲು ಎಲ್ಲ ರೀತಿಯ ಸೌಲಭ್ಯ ಒದಗಿಸಿದ್ದರೂ ಇಲ್ಲಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳ ತಾತ್ಸಾರದಿಂದ ಸೋಂಕಿತರು ನರಕಯಾತನೆ ಪಡುವಂತಾಗಿದೆ.
ಇದನ್ನೂ ಓದಿ:ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಸಾಗಣಿಕೆ: ಓರ್ವನನ್ನು ಬಂಧಿಸಿದ ಹನೂರು ಪೊಲೀಸರು
ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳು ದಿನಕ್ಕೆ ಎರಡು ಬಾರಿ ನಾಮ್ ಕೇವಾಸ್ತೆ ಎಂಬಂತೆ ಬಂದು ಹೋಗುತ್ತಾರೆ ಬಿಟ್ಟರೆ ಸೋಂಕಿತರ ಚಿಕಿತ್ಸೆಗೆ ಗಮನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ತಮಗೆ ಇಂಜೆಕ್ಷನ್ ನೀಡಿ ಎಂದು ಕೋವಿಡ್ ಸೋಂಕಿತರೊಬ್ಬರು ಕೌಂಟರ್ ಬಳಿ ಬಂದು ಕೇಳಿಕೊಂಡರೂ ಅವರ ನೆರವಿಗೆ ಧಾವಿಸಿಲ್ಲ. ಬಳಿಕ ಸೋಂಕಿತ ವ್ಯಕ್ತಿ ತಾವೇ ಇಂಜೆಕ್ಷನ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸೋಂಕಿತರು ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಹಿಂಜರಿಯುವಂತ ಸ್ಥಿತಿ ಎದುರಾಗಿದೆ.
ಎರಡು ವಾರ್ಡ್‌ಗಳನ್ನು ಕೋವಿಡ್ ಸೋಂಕಿತರಿಗಾಗಿ ತೆರೆಯಲಾಗಿದ್ದು, 200ಕ್ಕೂ ಹೆಚ್ಚು ಸೋಂಕಿತರು ಅಲ್ಲಿದ್ದಾರೆ. ಆದರೆ, ಕೇವಲ ಇಬ್ಬರು ನರ್ಸ್‌ಗಳನ್ನು ಮಾತ್ರ ಹಾಕಲಾಗಿದೆ. ರಾತ್ರಿ 12 ಗಂಟೆ ವೇಳೆಗೆ ಬಂದು ಔಷ ಧ ನೀಡಿ ಹೋಗುತ್ತಾರೆ. ಮತ್ತೆ ಮರುದಿನ ಮಧ್ಯಾಹ್ನ ಬಂದು ಹೋದರೆ ಮತ್ತೆ ಹಿಂದಿರುಗಿಯೂ ನೋಡುವುದಿಲ್ಲ ಎಂಬ ಆಪಾದನೆ ಕೇಳಿಬಂದಿದೆ.
ವೈರಲ್ ಆಗಿರುವ ವಿಡಿಯೋ ಎಂಟು ದಿನ ಹಿಂದಿನದ್ದು. ಕೋವಿಡ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಆ ರೀತಿಯಿಲ್ಲ. ವೈದ್ಯರು ಮತ್ತು ನರ್ಸ್‌ಗಳು ಪಾಳಿ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಂಕಿತರ ಚಿಕಿತ್ಸೆಯನ್ನು ಸಮರ್ಪಕವಾಗಿ ಮಾಡಲಾಗುತ್ತಿದೆ.
– ಡಾ| ವಿ.ಎಚ್. ಹಾವನೂರ, ಜಿಲ್ಲಾ ಸರ್ಜನ್, ಕೋವಿಡ್ ಆಸ್ಪತ್ರೆ