ಹಾವೇರಿ: ಜಿಲ್ಲೆಯ ಸಹಕಾರಿ ರಂಗ ಅತ್ತ ಉತ್ತುಂಗಕ್ಕೂ ಏರದೆ, ಇತ್ತ ಪಾತಾಳಕ್ಕೂ ಕುಸಿಯದೇ ಮಧ್ಯಮ ಸ್ಥಿತಿಯಲ್ಲಿ ನಡೆದುಕೊಂಡು ಬರುತ್ತಿದೆ. ಪ್ರಸ್ತುತ “ಸಮಾಧಾನಕರ’ ಎಂಬಂತಹ ಸ್ಥಿತಿಯಲ್ಲಿರುವ ಸಹಕಾರಿ ರಂಗ ಕಾಯಕಲ್ಪಕ್ಕಾಗಿ ಕಾಯುತ್ತಿದೆ. ಜಿಲ್ಲೆಯಲ್ಲಿರುವ ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿ ಅಷ್ಟಾಗಿ ಚೆನ್ನಾಗಿಲ್ಲ. ಶೇ.60 ಸಂಘಗಳು ಮಾತ್ರ ಒಂದಿಷ್ಟು ಲಾಭದಲ್ಲಿದ್ದು, ಶೇ.40 ಸಂಘಗಳು ನಷ್ಟದ ಹಾದಿಯಲ್ಲಿವೆ. ಜಿಲ್ಲೆಯಲ್ಲಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘ, ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಖ್ಯೆಯೇ ಅಧಿ ಕವಾಗಿದ್ದು,ಇವು ಜಿಲ್ಲೆಯ ಸಹಕಾರಿ ರಂಗದ ಜೀವಾಳವಾಗಿವೆ.
Advertisement
ಹಾವೇರಿ ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಪ್ರತ್ಯೇಕ ಜಿಲ್ಲೆಯಾದ ಬಳಿಕ ಜಿಲ್ಲೆಯ ಸಹಕಾರಿ ರಂಗದ ಅಭಿವೃದ್ಧಿಗೆ ಅಗತ್ಯ ಕಾರ್ಯಗಳು ನಡೆದಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನದೇ ವಿಧಿಯಿಲ್ಲ. ಜಿಲ್ಲೆ ರೂಪುಗೊಂಡ ಆರಂಭದಲ್ಲಿಯೇ ಸಹಕಾರಿ ರಂಗಕ್ಕೆ ಜೀವ ತುಂಬಬಹುದಾದ ಪ್ರತ್ಯೇಕ ಹಾಲು ಒಕ್ಕೂಟ, ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಬೇಕಿತ್ತು. ಆದರೆ ಜಿಲ್ಲೆಯಾಗಿ 22 ವರ್ಷಗಳಾದರೂ ಬೇಡಿಕೆ ಈಡೇರದೇ ಇರುವುದು ದುರ್ದೈವ ಸಂಗತಿ.
Related Articles
Advertisement
272 ಸಂಘಗಳು ನಷ್ಟದಲ್ಲಿ: ಜಿಲ್ಲೆಯ ಏಕೈಕ ಹಾಗೂ ದೊಡ್ಡ ಸಹಕಾರಿ ಸಂಘವಾದ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಅದು ಈಗ ಸಹಕಾರಿಗಳ ಕೈ ತಪ್ಪಿ ಗುತ್ತಿಗೆದಾರರಿಂದ ನಿರ್ವಹಿಸಲ್ಪಡುತ್ತಿದೆ. ಜಿಲ್ಲೆಯ ಒಟ್ಟು 1237 ಸಹಕಾರಿ ಸಂಘಗಳಲ್ಲಿ 836 ಸಂಘಗಳು ಲಾಭದಲ್ಲಿದ್ದು, 272 ಸಂಘಗಳು ನಷ್ಟದಲ್ಲಿವೆ. ಇನ್ನು 89ಸಹಕಾರ ಸಂಘಗಳು ಲಾಭ-ನಷ್ಟವಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ಲೆಕ್ಕಪರಿಶೋಧನಾ ವರ್ಗೀಕರಣ ಪ್ರಕಾರ ನೋಡುವುದಾದರೆ “ಎ’ ವರ್ಗೀಕರಣದಲ್ಲಿ 61 ಸಂಘಗಳು, “ಬಿ’ ವರ್ಗೀಕರಣದಲ್ಲಿ 150 ಸಂಘಗಳು, “ಸಿ’ ವರ್ಗೀಕರಣದಲ್ಲಿ 836 ಸಂಘಗಳು, “ಡಿ’ ವರ್ಗೀಕರಣದಲ್ಲಿ 101 ಸಂಘಗಳು, “ಇ’ ವರ್ಗೀಕರಣದಲ್ಲಿ 89 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಜಿಲ್ಲೆಯ ಸಹಕಾರ ರಂಗ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣದೇ ಇದ್ದರೂ ಕೊಂಚ ಸಮಾಧಾನ ಮೂಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.