ದತ್ತು ಕಮ್ಮಾರ
ಕೊಪ್ಪಳ: ತುಂಗಭದ್ರಾ ತಟದಲ್ಲಿರುವ 70 ಎಕರೆ ವಿಸ್ತೀರ್ಣದ ಪಂಪಾವನಕ್ಕೆ ಇನ್ನಷ್ಟು ಮೆರಗು ಕೊಡಲು ತೋಟಗಾರಿಕೆ ಇಲಾಖೆ ಮುಂದಾಗಿದ್ದು, ಜಪಾನಿ ಗಾರ್ಡನ್ ಮಾದರಿಯಂತೆ ಪಂಪಾವನ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಮೊದಲ ಹಂತದ ಪ್ರಸ್ತಾವನೆಗೆ ಸಮ್ಮತಿ ಸಿಕ್ಕಿದ್ದು, 15 ಕೋಟಿಯಲ್ಲಿ ಡಿಪಿಆರ್ ಸಿದ್ಧತೆ ನಡೆದಿದೆ.
ಜಿಲ್ಲೆಯಲ್ಲಿ ಸುಸಜ್ಜಿತ ಹಾಗೂ 70 ಎಕರೆ ಪ್ರದೇಶದಷ್ಟು ವಿಸ್ತಾರ ಹೊಂದಿರುವ ಬೇರೊಂದು ಉದ್ಯಾನವನವಿಲ್ಲ. ತುಂಗಭದ್ರಾ ಜಲಾಶಯ ನಿರ್ಮಾಣದ ಬಳಿಕ ಈ ಉದ್ಯಾನವನ ನಿರ್ಮಾಣಗೊಂಡಿದೆ. ಇಲ್ಲಿ ವಿವಿಧ ಬಗೆಯ ಸಸ್ಯ ಪ್ರಬೇಧಗಳಿವೆ. ಔಷಧೀಯ ಗುಣದಿರುವ ಸಸ್ಯಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ವಿವಿಧ ಅಲಂಕಾರ, ವಿನ್ಯಾಸದ ಚಿತ್ರಣಗಳನ್ನು ನೀವು ಕಾಣಬಹುದಾಗಿದೆ.
ಪ್ರತಿ ವರ್ಷ ತುಂಗಭದ್ರಾ ಜಲಾಶಯ ಭರ್ತಿಯಾದಾಗ ವಿವಿಧ ಭಾಗಗಳಿಂದ ಲಕ್ಷಾಂತರ ಪ್ರವಾಸಿಗರು ಡ್ಯಾಂ ವೀಕ್ಷಣೆಗೆ ಆಗಮಿಸುತ್ತಾರೆ. ಈ ವೇಳೆ ಕುಟುಂಬ ಸಮೇತರಾಗಿ ಉದ್ಯಾನವನದಲ್ಲಿ ಇಡೀ ದಿನ ವಿಶ್ರಮಿಸಿ ಖುಷಿಯಿಂದಲೇ ತಮ್ಮ ಊರುಗಳಿಗೆ ತೆರಳುತ್ತಾರೆ. ಇದಲ್ಲದೇ, ಸುತ್ತಲಿನ ಊರುಗಳ ಜನ ಶನಿವಾರ, ರವಿವಾರ ಹಾಗೂ ರಜಾ ದಿನಗಳಲ್ಲಿ ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸಿ ಭೋಜನ ಸವಿದು ರಜಾ ದಿನವನ್ನು ಸಂತಸದಿಂದ ಕಳೆಯುತ್ತಾರೆ. ಸುತ್ತಮುತ್ತಲಿನ ಊರುಗಳ ಜನತೆಗೆ ಇದೊಂದು ಉತ್ತಮ ತಾಣವಾಗಿದೆ. ಇಂತಹ ಉದ್ಯಾನವನಕ್ಕೆ ಇನ್ನಷ್ಟು ಮೆರಗು ಕೊಡಲು, ಪ್ರವಾಸಿಗರನ್ನು ಇನಷ್ಟು ಆಕರ್ಷಿಸಲು ತೋಟಗಾರಿಕೆ ಇಲಾಖೆ ಹೊಸ ಯೋಜನೆ ಸಿದ್ಧಪಡಿಸುತ್ತಿದೆ.
ಜಪಾನಿ ಮಾದರಿ ಗಾರ್ಡನ್: ಹಿಂದುಳಿದ ಪ್ರದೇಶದ ಜಿಲ್ಲೆಗಳಲ್ಲಿ ಪಂಪಾವನದಂತಹ ವಿಶಾಲವಾದ ಉದ್ಯಾನ ಇಲ್ಲ. ಈ ಗಾರ್ಡನ್ ಅಭಿವೃದ್ಧಿ ಮಾಡಿ ಪ್ರವಾಸಿಗರನ್ನು ಸೆಳೆಯಲು ಹಾಗೂ ಆಧುನಿಕತೆಗೆ ತಕ್ಕಂತೆ ವಿಶೇಷ ಶೈಲಿಯಲ್ಲಿ ವಿನ್ಯಾಸಗೊಳಿಸಲು ತೋಟಗಾರಿಕೆ ಇಲಾಖೆಯು ಜಪಾನಿ ಮಾದರಿ ಗಾರ್ಡನ್ ಯೋಜನೆಯ ಪ್ರಸ್ತಾವನೆಯೊಂದನ್ನು ಇಲಾಖೆಗೆ ಸಲ್ಲಿಸಿತ್ತು. ಪ್ರಸ್ತಾವನೆಗೆ ಸಮ್ಮತಿ ಸಿಕ್ಕಿದ್ದು, 15 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧತೆಗೂ ಎಲ್ಲ ತಯಾರಿ ನಡೆದಿದೆ. ಅಧಿ ಕಾರಿಗಳ ತಂಡವು ಉದ್ಯಾನವನ ಆಧುನಿಕತೆಗೆ ತಕ್ಕಂತೆ ಹೇಗಿರಬೇಕು? ಇಲ್ಲಿ ಏನೇನು ಅಳವಡಿಕೆ ಮಾಡಬೇಕು? ಬೇರೆ ಭಾಗದ ಸಸ್ಯ ಧಾಮ, ವಿನ್ಯಾಸ, ಜಾಗೃತಿ ಸಂದೇಶ ಅಳವಡಿಸಬೇಕು. ನೀರಿನ ತಾಣಗಳನ್ನು ಹೇಗೆಲ್ಲ ನಿರ್ಮಿಸಬೇಕು ಎನ್ನುವಂತ ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಒಂದು ತಿಂಗಳಿಂದಲೂ ಡಿಪಿಆರ್ ತಯಾರಿಗೆ ಸಿದ್ಧತೆ ನಡೆದಿದೆ. ಇತ್ತೀಚೆಗೆ ತುಂಗಭದ್ರಾ ಗೇಟ್ ಮುರಿದು 70 ಎಕರೆ ಪಂಪಾವನ ಜಲಾವೃತಗೊಂಡು ಬಹುಪಾಲು ಹಾನಿಯಾಗಿದೆ. ಇದಕ್ಕೆ ನೀರಾವರಿ ನಿಗಮ ಅನುದಾನವನ್ನೇ ಕೊಟ್ಟಿಲ್ಲ. ಹಾಗಾಗಿ ಉದ್ಯಾನವನ ಪುನರ್ ನಿರ್ಮಾಣಕ್ಕಾಗಿ ಈ ಯೋಜನೆ ರೂಪಿಸಲಾಗುತ್ತಿದೆ. 15 ಕೋಟಿ ಯೋಜನೆಯಲ್ಲಿ ಸೇತುವೆಗಳ ನಿರ್ಮಾಣ, ಮಕ್ಕಳ ಆಟಿಕೆಯ ಸ್ಥಳ, ಮಿನಿ ಗಾರ್ಡನ್, ನೀರಿನ ತಾಣ ನಿರ್ಮಾಣಕ್ಕೂ ಯೋಜಿಸಲಾಗಿದೆ.
ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಉದ್ಯಾನವನಕ್ಕೆ ಹೊಸ ವಿನ್ಯಾಸ ಕೊಡುವ ಯೋಜನೆ ಮಾಡುತ್ತಿರುವುದು ಈ ಭಾಗದ ಜನರಲ್ಲಿ ಕುತೂಹಲ ಮೂಡಿಸಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡಲು, ತೋಟಗಾರಿಕೆ ಇಲಾಖೆ ಯೋಜನೆ ನೀಡುತ್ತಿದ್ದು ಎಲ್ಲರ ಗಮನ ಸೆಳೆದಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕರೆ ಮಾತ್ರ ಜಪಾನಿ ಮಾದರಿ ಗಾರ್ಡನ್ ನಿರ್ಮಾಣವಾಗಲಿದೆ.