Advertisement

ಸಂಸ್ಕಾರ ಮರೆತು ಹಣ ಗಳಿಕೆಗೆ ಆದ್ಯತೆ

09:59 AM Jan 18, 2019 | |

ಹಾವೇರಿ: ಯುವ ಪೀಳಿಗೆ ಬದುಕಿನ ಜಂಜಾಟದಲ್ಲಿ ಸಂಸ್ಕೃತಿ, ಸಂಸ್ಕಾರಕ್ಕೆ ಒತ್ತು ನೀಡುವ ಬದಲು ಹಣ ಸಂಪಾದನೆಗೆ ಆದ್ಯತೆ ನೀಡುತ್ತಿರುವುದು ವಿಷಾದನೀಯ. ಇದರಿಂದ ಆರೋಗ್ಯವಂತ ಸಮಾಜದಲ್ಲಿ ದೊಡ್ಡ ಕಂದಕ ಉಂಟಾಗುತ್ತಿದೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಹೇಳಿದರು.

Advertisement

ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ರಾಜ್ಯಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಾಗಪ್ಪ ದುಂಡೆಪ್ಪ ರೊಡ್ಡನವರ ಅವರು ಬರೆದ ‘ಸೇವೆ ಎಂಬ ಸೊಡರು’ ಪುಸ್ತಕ ಬಿಡುಗಡೆ ಹಾಗೂ ರಕ್ತದಾನ, ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಇಂದಿನ ಆಧುನಿಕ ಬದುಕಿನಲ್ಲಿ ಜನರು ಹಣ ಗಳಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು ಸಂಘಟನೆ, ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಬದುಕಿನಲ್ಲಿ ಹಣ ಒಂದೇ ಮುಖ್ಯವಲ್ಲ, ಮಾನವೀಯ ಮೌಲ್ಯಗಳು ಅವಶ್ಯವಾಗಿವೆ. ಇದನ್ನು ಅರಿತು ಜೀವನ ನಡೆಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯರು ಮಾತನಾಡಿ, ಇಂದಿನ ಯುವ ಸಮುದಾಯ ಉದ್ವೇಗದ ಜೀವನ ನಡೆಸುತ್ತಿದ್ದು, ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಯುವ ಸಮುದಾಯ ರಕ್ತದಾನದಂತ ಮಹಾ ದಾನದಲ್ಲಿ ತೋಡಗಿಸಿಕೊಳ್ಳುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು. ರಕ್ತ ಹಾಗೂ ಹಣವನ್ನು ಸಮಾನಂತರ ಶ್ರೇಣಿಯಲ್ಲಿ ಇಟ್ಟುಕೊಂಡು ಬದುಕಿನ ಸಂಪ್ರದಾಯದ ನಿಯಮ ಪಾಲಿಸಲು ಮುಂದಾಗಬೇಕು. ಅಂದಾಗ ಒತ್ತಡದ ಜೀವನದಿಂದ ಹೊರಬಂದು ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದರು.

ಬ್ಯಾಡಗಿ ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟೆರ ಮಾತನಾಡಿ, ಯುವ ಜನಾಂಗ ಸಮಾಜ ಸೇವೆಗಿಂತ ಇಂದು ಸಾಮಾಜಿಕ ಜಾಲತಾಣಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದನ್ನು ಬಿಟ್ಟು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಾಗಪ್ಪ ರೊಡ್ಡನವರ ಅವರ ರಚನೆಯ ‘ಸೇವೆ ಎಂಬ ಸೊಡರು’ ಪುಸ್ತಕ ಕುರಿತು ಪ್ರೊ| ಎಂ.ಜೆ.ಕಲ್ಲಜ್ಜನವರ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ನಾಗಪ್ಪ ದುಂಡೆಪ್ಪ ರೊಡ್ಡನವರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುಸ್ತಕ ಬಿಡುಗಡೆ ಕಾರ್ಯಕ್ರಮದ ನಿಮಿತ್ತ ಉಚಿತ ನೇತ್ರ ತಪಾಸಣೆ, ಸಕ್ಕರೆ ಕಾಯಿಲೆ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

Advertisement

ಶಿಬಿರದಲ್ಲಿ ಸುಮಾರು 110ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಯಿತು. 20ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಾದ ಎಸ್‌.ಬಿ.ತವರದ, ಎ.ಸಿ.ಹಿರೇಮಠ, ಶಿಕ್ಷಕ ಜೆ.ಎಂ.ಮಠದ, ಎಂ.ಎಸ್‌.ಉಜ್ಜಯಿನಿ, ರವೀಂದ್ರ ಪಟ್ಟಣಶೆಟ್ಟಿ, ಗುಡ್ಡಪ್ಪ ಕೋಳೂರ, ಹನುಮಂತಪ್ಪ ಕುರಡಣ್ಣನವರ ಇತರರು ಇದ್ದರು. ಶಿವಬಸಮ್ಮ ಲೆಕ್ಕಣ್ಣನವರ, ಲೀಲಾವತಿ ಕೆ., ಪ್ರಾರ್ಥಿಸಿದರು. ಚನ್ನಬಸವಣ್ಣ ರೊಡ್ಡನವರ ಸ್ವಾಗತಿಸಿದರು. ಡಿ.ಬಿ.ಕುಸನೂರ ನಿರೂಪಿಸಿದರು. ಮಲ್ಲಿಕಾರ್ಜುನ ರೊಡ್ಡನವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next