ವಿಶೇಷ ವರದಿ
ಹಾವೇರಿ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊರೊನಾ ತಪಾಸಣೆ ಹೆಚ್ಚಿಸುವ ಜತೆಗೆ ಕೋವಿಡ್ ಆರೈಕೆ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಿ ಸೋಂಕಿತರ ಸೇವೆಗೆ ಸಜ್ಜಾಗಿದೆ. ಕೊರೊನಾ ಮೊದಲ ಅಲೆ ವೇಳೆ ಜಿಲ್ಲೆಯಲ್ಲಿ ತಾಲೂಕಿಗೊಂದರಂತೆ ಕೊರೊನಾ ಆರೈಕೆ ಕೇಂದ್ರಗಳಿದ್ದವು. ಪ್ರಸ್ತುತ ಕೊರೊನಾ ಆರೈಕೆ ಕೇಂದ್ರಗಳ ಸಂಖ್ಯೆ ಒಂಬತ್ತಕ್ಕೇರಿದ್ದು, ಒಟ್ಟು 721ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.
ಪ್ರಸ್ತುತ ಇಲ್ಲಿ 400 ಬೆಡ್ ಭರ್ತಿಯಾಗಿದ್ದು, 321 ಬೆಡ್ ಖಾಲಿ ಇವೆಯಾದರೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೆಡ್‌ಗಳು ಸಹ ಕ್ಷಿಪ್ರವಾಗಿ ಭರ್ತಿಯಾಗುತ್ತಿವೆ. ಕೊರೊನಾ ಅಲೆ ಗ್ರಾಮೀಣ ಪ್ರದೇಶಗಳಲ್ಲೂ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ಕೊರೊನಾ ಆರೈಕೆ ಕೇಂದ್ರಗಳನ್ನು ಗ್ರಾಮಾಂತರ ಪ್ರದೇಶಗಳಲ್ಲೂ ತೆರೆಯಲಾಗಿದೆ.
ಪ್ರಸ್ತುತ ಶಿಗ್ಗಾವಿ ತಾಲೂಕಿನ ಬಾಡ, ಹಾವೇರಿ ತಾಲೂಕಿನ ಬಸಾಪುರ, ಹಿರೇಕರೂರು ತಾಲೂಕಿನ ದೂದಿಹಳ್ಳಿ, ಹಾನಗಲ್ಲ ತಾಲೂಕಿನ ಕಲಕೇರಿ, ರಾಣಿಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮಗಳಲ್ಲಿ ಕೊರೊನಾ ಆರೈಕೆ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಆರೈಕೆ ಕೇಂದ್ರಗಳ ವಿವರ: ಪ್ರಸ್ತುತ ಶಿಗ್ಗಾವಿ ತಾಲೂಕಿನ ಬಾಡ(80 ಬೆಡ್), ಹಾವೇರಿ ತಾಲೂಕು ಬಸಾಪುರ(125 ಬೆಡ್), ಬ್ಯಾಡಗಿ (51 ಬೆಡ್), ಹಿರೇಕೆರೂರು ತಾಲೂಕಿನ ದೂದಿಹಳ್ಳಿ (100 ಬೆಡ್), ಹಾನಗಲ್ಲ ತಾಲೂಕಿನ ಕಲಕೇರಿ (100 ಬೆಡ್), ರಾಣಿಬೆನ್ನೂರು ತಾಲೂಕಿನ ಹುಣಸಿಕಟ್ಟಿ (75 ಬೆಡ್), ರಾಣಿಬೆನ್ನೂರು ಎಸ್‌ಆರ್‌ಕೆ ಲೇಔಟ್‌ನಲ್ಲಿ(65 ಬೆಡ್), ರಾಣಿಬೆನ್ನೂರು ಕಮಲಾನಗರದಲ್ಲಿ (75 ಬೆಡ್), ಸವಣೂರಿನಲ್ಲಿ (50 ಬೆಡ್) ಸೇರಿ ಒಟ್ಟು 721 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.
400ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಸೇವೆ ಪಡೆಯುತ್ತಿದ್ದಾರೆ. ಇದರ ಜತೆಗೆ ಶಿಗ್ಗಾವಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನಿವಾಸವನ್ನೂ 50 ಬೆಡ್‌ಗಳ ಕೊರೊನಾ ಆರೈಕೆ ಕೇಂದ್ರವನ್ನಾಗಿಸಿಕೊಂಡು ಸೇವೆ ನೀಡಲಾಗುತ್ತಿದೆ. ಒಟ್ಟಾರೆ ಜಿಲ್ಲಾಡಳಿತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಅಲೆ ಎದುರಿಸಲು ಅಗತ್ಯ ಕೊರೊನಾ ಆರೈಕೆ ಕೇಂದ್ರಗಳನ್ನು ತೆರೆದು, ಅವಶ್ಯ ವೈದ್ಯಕೀಯ ಹಾಗೂ ಇತರೆ ಸೇವೆ ನೀಡಲು ಸಿದ್ಧತೆ ಮಾಡಿಕೊಂಡಿದೆ.