ಹಾವೇರಿ: ಕೊರೊನಾ ನಿಯಂತ್ರಿಸಲು ಕೊರೊನಾ ಕರ್ಫ್ಯೂ ನಿಯಮಗಳನ್ನು ಸರ್ಕಾರ ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಕೂತಿದ್ದವರನ್ನು ಪೊಲೀಸರು ರವಿವಾರ ಬೆಳಗ್ಗೆ ವಾಪಸ್ ಕಳುಹಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 6ಗಂಟೆಯಿಂದ 10 ಗಂಟೆವರೆಗೆ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಜನದಟ್ಟಣೆ ಹೆಚ್ಚಿದ್ದರಿಂದ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಿದ್ದರಿಂದ ರವಿವಾರ ಬೆಳಗ್ಗೆಯಿಂದಲೇ ಸರ್ಕಾರ ಪರಿಷ್ಕೃತ ನಿಯಮ ಜಾರಿಗೆ ಆದೇಶ ಹೊರಡಿಸಿತ್ತು. ಆದರೆ ಹಳ್ಳಿಗಳಿಂದ ಆಗಮಿಸಿದ್ದ ತರಕಾರಿ ವ್ಯಾಪಾರಸ್ಥರಿಗೆ ಈ ಬಗ್ಗೆ ಅರಿವಿಲ್ಲದೇ ಹಳ್ಳಿಗಳಿಂದ ಸೊಪ್ಪು, ಕಾಯಿಪಲ್ಲೆ ತಂದು ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕುಳಿತಿದ್ದರು. ಈ ವೇಳೆ ನಗರಸಭೆ ಅಧಿ ಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು ಆಗಮಿಸಿ ನೂರಾರು ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದರು.
ಇನ್ನು ಮೇಲೆ ಇಲ್ಲಿ ಕುಳಿತು ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿದರು. ಅದೇ ರೀತಿ ತರಕಾರಿ ಖರೀದಿಗೆ ಬಂದಿದ್ದ ನೂರಾರು ಜನರನ್ನು ಕೂಡ ಪೊಲೀಸರು ವಾಪಸ್ ಕಳುಹಿಸಿದರು. ತಳ್ಳುವ ಗಾಡಿ ಇಟ್ಟುಕೊಂಡು ಸಂಜೆ 6 ಗಂಟೆವರೆಗೂ ಎಲ್ಲಿ ಬೇಕಾದರೂ ತರಕಾರಿ ಮಾರಬಹುದೆಂದು ಹೇಳಿ ಕಳುಹಿಸಿದರು. ಇದರಿಂದ ವ್ಯಾಪಾರಕ್ಕೆ ಬಂದಿದ್ದವರು ಕಂಗಾಲಾದರು. ಪೊಲೀಸರ ಒತ್ತಾಯಕ್ಕೆ ಮಣಿದು ಮಾರಾಟಕ್ಕಿಟ್ಟಿದ್ದ ತರಕಾರಿಗಳನ್ನು ಚೀಲದಲ್ಲಿ ತುಂಬಿಕೊಂಡು ವಾಪಸ್ಸಾದರು.
ಹಳ್ಳಿಗಳಿಂದ ಬಂದಿದ್ದ ಮಹಿಳೆಯರು ಪೊಲೀಸರ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಒಂದು ದಿನ ಮುಂಚಿತ ಹೇಳಿದ್ದರೆ ನಾವು ದೂರದಿಂದ ತರಕಾರಿ ಖರೀದಿಸಿ ಇಲ್ಲಿಗೆ ಮಾರಾಟಕ್ಕೆ ಬರುತ್ತಿರಲಿಲ್ಲ. ಈಗ ನಾವು ಎಲ್ಲಿಗೆ ಹೋಗಬೇಕು? ನಮಗಾಗುವ ನಷ್ಟ ಭರಿಸುವರಾರು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ನಿಯಮ ಪಾಲಿಸಲೇಬೇಕು ಎಂದು ಹೇಳಿದ ಪೊಲೀಸರು ಮುಲಾಜಿಲ್ಲದೇ ಎಲ್ಲರನ್ನೂ ಚದುರಿಸಿದರು.
ದಿನಸಿ ಖರೀದಿ ಅವಧಿ ವಿಸ್ತರಣೆ: ದಿನಸಿ ಖರೀದಿಗೆ ಇದುವರೆಗೆ ಇದ್ದ ಸಮಯವನ್ನು ಮತ್ತೆ 2 ಗಂಟೆ ವಿಸ್ತರಿಸಿದ್ದರಿಂದ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಯಿತು. 12 ಗಂಟೆವರೆಗೂ ಸಾರ್ವಜನಿಕರು ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಜನರ ಓಡಾಟವೂ ಹೆಚ್ಚಿತ್ತು. ಕಳೆದ 5 ದಿನ 10 ಗಂಟೆಗೆ ಮನೆ ಸೇರುತ್ತಿದ್ದವರು ರವಿವಾರ ಹೆಚ್ಚಿನ ಸಮಯ ಸಿಕ್ಕಿದ್ದರಿಂದ ಖರೀದಿ ನೆಪದಲ್ಲಿ ಅಂಗಡಿಯಿಂದ ಅಂಗಡಿಗೆ ಅಲೆಯುತ್ತಿರುವ ದೃಶ್ಯ ಕಂಡುಬಂತು.
ಪೊಲೀಸರಿಂದ ದಂಡ ವಸೂಲಿ: ಅನಗತ್ಯ ಸಂಚರಿಸುತ್ತಿದ್ದವರಿಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದರು. ಮಾಸ್ಕ್ ಧರಿಸಿ ಬೈಕ್‌ನಲ್ಲಿ ಸಂಚರಿಸುತ್ತಿದ್ದವರನ್ನೂ ನಿಲ್ಲಿಸಿ ತಲಾ 100 ರೂ. ದಂಡ ಕಟ್ಟಿಸಿದರು. ಆಸ್ಪತ್ರೆ, ಮದುವೆ ಸಮಾರಂಭಗಳಿಗೆ ಓಡಾಡುತ್ತಿದ್ದವರ ಸಂಖ್ಯೆಯೂ ಹೆಚ್ಚಿತ್ತು. ಕೊರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಸಿಕ್ಕಿ¨ªೇ ಅವಕಾಶ ಎಂಬಂತೆ ಜನ ರಸ್ತೆಗಿಳಿಯುತ್ತಿರುವುದು ಪೊಲೀಸರಿಗೆ ತಲೆನೋವಾಯಿತು.