Advertisement
ರಾಮನಗರ, ಜಮಖಂಡಿ ಉಪ ಚುನಾವಣೆ ನಡೆಯುವವರೆಗೂ ಸಂಪುಟ ವಿಸ್ತರಣೆ ಮೂಂದೂಡಲು ಪಕ್ಷದ ರಾಜ್ಯ ನಾಯಕರು ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
Related Articles
ಈ ನಡುವೆ ರಾಮನಗರ ಹಾಗೂ ಜಮಖಂಡಿ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ರಾಜ್ಯ ನಾಯಕರು ಉಪ ಚುನಾವಣೆಯ ದಿನಾಂಕ ಘೋಷಣೆಯ ದಾರಿ ಕಾಯುತ್ತಿದ್ದಾರೆ .
Advertisement
ಉಪ ಚುನಾವಣೆ ಘೋಷಣೆಯಾದರೆ ಒಂದು ತಿಂಗಳು ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆಯ ಗೊಂದಲದಿಂದ ಪಾರಾಗಬಹುದು ಎಂಬ ಲೆಕ್ಕಾಚಾರ ರಾಜ್ಯ ನಾಯಕರದ್ದಾಗಿದೆ. ಅಲ್ಲದೇ ನವೆಂಬರ್‌ನಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ಬರುವುದರಿಂದ ಅಧಿವೇಶನ ಮುಂದಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಿದರೂ, ಅಧಿವೇಶನ ಸಮಯದಲ್ಲಿ ಅತೃಪ್ತ ಶಾಸಕರು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂಬ ಕಾರಣಕ್ಕೆ ನವೆಂಬರ್‌ನಲ್ಲಿಯೂ ಸಂಪುಟ ವಿಸ್ತರಣೆ ಮುಂದೂಡುವ ಲೆಕ್ಕಾಚಾರ ಇದೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆವರೆಗೂ ಅನುಮಾನ?ಮತ್ತೂಂದೆಡೆ ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಣೆ ಮುಂದೂಡುವ ಬಗ್ಗೆಯೂ ಚಿಂತನೆ ನಡೆದಿದೆ. ಚುನಾವಣೆಗೂ ಮೊದಲು ಸಂಪುಟ ವಿಸ್ತರಣೆಗೆ ಕೈ ಹಾಕಿ, ಸಚಿವಾಕಾಂಕ್ಷಿಗಳು ಪಕ್ಷದ ವಿರುದ್ಧ ಬಂಡಾಯ ಸಾರಿದರೆ, ಬಿಜೆಪಿ ಅದೇ ಲಾಭ ಪಡೆದು ಆಪರೇಷನ್ ಕಮಲ ಅಥವಾ ಚುನಾವಣೆಯಲ್ಲಿ ಅತೃಪ್ತರ ಪರೋಕ್ಷ ಬೆಂಬಲ ಪಡೆಯಬಹುದು ಎಂಬ ಕಾರಣಕ್ಕೆ ಲೋಕಸಭೆ ಚುನಾವಣೆವರೆಗೂ ಹೇಗಾದರೂ ಮಾಡಿ ಸಂಪುಟ ವಿಸ್ತರಣೆ ಮಾಡದೇ ಮುಂದೂಡಲು ರಾಜ್ಯ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಿದ್ದು ದಿನೇಶ್ ಭೇಟಿ ಚರ್ಚೆ
ಕಣ್ಣು ನೋವಿನಿಂದ ಬಳಲುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಗ್ಯ ವಿಚಾರಿಸುವ ನೆಪದಲ್ಲಿ ಭೇಟಿ ಮಾಡಿ ಸಂಪುಟ ವಿಸ್ತರಣೆ ಮುಂದೂಡುವ ಕುರಿತು ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ. ಪಿತೃಪಕ್ಷ ಮುಗಿಯುವುಷ್ಟರಲ್ಲಿ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದರೆ ವಿಸ್ತರಣೆ ಮುಂದೂಡಲು ಯಾವುದೇ ಸಮಸ್ಯೆ ಇಲ್ಲ ಎಂಬ ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 8 ಅಥವಾ 9 ರಂದು ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ.