Advertisement

ಸಭಾಪತಿ ಸ್ಥಾನ ಬೇಕು ಅಂತ ನೀವು ಕೇಳಿದ್ದೀರಾ?

11:33 PM Dec 21, 2020 | mahesh |

ಬೆಂಗಳೂರು: ಬಿಜೆಪಿ ಜತೆ ಜೆಡಿಎಸ್‌ ವಿಲೀನ ಅಥವಾ ಮೈತ್ರಿ ಎಂಬ ಮಾತು-ಪ್ರತಿಮಾತುಗಳು ಗರಿಗೆದರುತ್ತಿವೆ. ಪರಿಷತ್‌ ಸಭಾಪತಿ ಹುದ್ದೆಯಿಂದ ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ಸಂಬಂಧ ಬಿಜೆಪಿಗೆ ನೇರವಾಗಿ ಜೆಡಿಎಸ್‌ ಬೆಂಬಲ ನೀಡಿದ್ದು, ಈ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿವೆ. ಸಭಾಪತಿ ಹುದ್ದೆಯ ಪ್ರಬಲ ಆಕಾಂಕ್ಷಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ತಮ್ಮ ಪಕ್ಷದ ಆಂತರಿಕ ಸಭೆಯಲ್ಲಿ ಬಿಜೆಪಿ ಜತೆ ವಿಲೀನ ಕುರಿತ ಚರ್ಚೆಯ ಬಗ್ಗೆ ಪ್ರಸ್ತಾವ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೊರಟ್ಟಿ ಅವರ ಜತೆ ನೇರಾನೇರ…

Advertisement

ಬಿಜೆಪಿ ಜತೆ ವಿಲೀನಕ್ಕೆ ಸಿದ್ಧವಾಗಿದ್ದೀರಾ ?
ಸಭಾಪತಿ ಸ್ಥಾನದ ವಿಚಾರದಲ್ಲಿ ಬಿಜೆಪಿ ಜತೆ ಕೈ ಜೋಡಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ವಿಲೀನ ಬಗ್ಗೆ ಚರ್ಚೆಯಾಗಿಲ್ಲ. ಇದು ಎಲ್ಲಿಂದ ಹುಟ್ಟಿಕೊಂಡಿತೊ ಗೊತ್ತಿಲ್ಲ.

ಕುಮಾರಸ್ವಾಮಿ ಬಿಜೆಪಿ ಜತೆ ವಿಲೀನ ಮಾಡಿದರೆ ನೀವು ಹೋಗುತ್ತೀರಾ?
ಅಂತಹ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಕೂಡ ಅದನ್ನು ಸ್ಪಷ್ಟಪಡಿಸಿದ್ದಾರೆ.

ಹಾಗಿದ್ದರೆ ಹೊಂದಾಣಿಕೆಗೆ ಸಿದ್ಧರಿದ್ದೀರಾ?
ಹೊಂದಾಣಿಕೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಪಡೆಯುತ್ತದೆ ಅಂದುಕೊಂಡಿದ್ದೀರಾ? ಈಗಿನ ರಾಜಕಾರಣದಲ್ಲಿ ಯಾರೂ ಯಾವುದನ್ನೂ ಬಿಟ್ಟುಕೊಡಲು ಆಗುವುದಿಲ್ಲ. ಎಲ್ಲರೂ ಏನನ್ನಾದರೂ ಮಾಡಿ ಅಧಿಕಾರ ಹಿಡಿಯಬೇಕು ಎನ್ನುವವರೇ.

ಬಿಜೆಪಿ ಜತೆ ಒಳ ಒಪ್ಪಂದ ಇರುವುದು ನಿಜವೇ?
ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ಒಪ್ಪಂದ ಮಾಡಿಕೊಂಡಿರುತ್ತಾರೆ. ನವಲಗುಂದದಲ್ಲಿ ಕಾಂಗ್ರೆಸ್‌ನವರು ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿರಲಿಲ್ಲವೇ? ಶೇ. 90ರಷ್ಟು ರಾಜಕಾರಣಿಗಳಲ್ಲಿ ಒಳಗೊಂದು ಹೊರಗೊಂದು ನಡೆ ಇರುತ್ತದೆ. ಇದು ಬಹಿರಂಗ ಸತ್ಯ.

Advertisement

ನಿಮಗಾಗಿ ದೇವೇಗೌಡರು ಜಾತ್ಯತೀತ ಸಿದ್ಧಾಂತ ಬಿಡುತ್ತಾರೆಯೇ?
ನನ್ನ ವಿಷಯ ಬಂದಾಗ ಇದೊಂದು ವಿಶಿಷ್ಟ ಪ್ರಕರಣ ಅಂತ ಪರಿಗಣಿಸುತ್ತಾರೆ. ಹಿಂದೆ ಕೋಮುವಾದಿ ಅಂತ ಬಿಜೆಪಿಯನ್ನು ಕರೆಯಲಾಗುತ್ತಿತ್ತು. ಈಗ ಯಾವ ಪಕ್ಷದಲ್ಲಿ ಜಾತಿ ಇಲ್ಲ ಹೇಳಿ!

ನಿಮಗೆ ಸಭಾಪತಿ ಸಿಗುತ್ತದೆ ಅಂತ ಬಿಜೆಪಿಗೆ ಬೆಂಬಲ ಕೊಟ್ಟಿರಾ?
ನನ್ನ ವೈಯಕ್ತಿಕ ಪ್ರಶ್ನೆಯೇ ಇಲ್ಲ. ನನಗಾಗಿದ್ದರೆ, ಎಲ್ಲ ಪಕ್ಷದವರು ಬೆಂಬಲ ಕೊಡಲು ಸಿದ್ಧರಿದ್ದರು. ಯಡಿಯೂರಪ್ಪರಿಗೆ ಮನವಿ ಮಾಡುವಂತೆ ನಾನು ದೇವೇಗೌಡರಿಗೆ ಕೇಳಿಲ್ಲ. ನನ್ನನ್ನು ಸಭಾಪತಿ ಮಾಡಿ ಎಂದು ಸಿದ್ದರಾಮಯ್ಯ ಬಳಿಯೂ ಕೇಳಿಲ್ಲ.

ಮಣ್ಣಿನ ಮಕ್ಕಳ ಪಕ್ಷ ಅನ್ನುತ್ತೀರಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಬೆಂಬಲ ಕೊಡುತ್ತೀರಿ, ನಿಮ್ಮದು ಯಾವ ಸಿದ್ಧಾಂತ?
ಭೂ ಸುಧಾರಣೆ ಕಾಯ್ದೆಯಲ್ಲಿ 79 ಎ ಬಿ ಡಿಲೀಟ್‌ ಮಾಡಿದರೆ 5 ಲಕ್ಷ ಪ್ರಕರಣ ಇತ್ಯರ್ಥ ಆಗುತ್ತವೆ. ಅಲ್ಲದೆ ಕುಟುಂಬದ ಆಸ್ತಿ ಪ್ರಮಾಣವನ್ನು 208 ಎಕರೆಗಿಂತ 108 ಎಕರೆಗೆ ಇಳಿಸಲು ಬಿಜೆಪಿ ಒಪ್ಪಿಕೊಂಡಿದೆ. ಹೀಗಾಗಿ ಅದಕ್ಕೆ ಒಪ್ಪಿಕೊಂಡಿದ್ದೇವೆ.

ಮುಸ್ಲಿಮರ ಓಟಿಗಾಗಿ ಗೋಹತ್ಯೆ ನಿಷೇಧ ಕಾಯ್ದೆಗೆ ವಿರೋಧ ಮಾಡ್ತಿದ್ದೀರಾ ?
ಗೋಹತ್ಯೆ ಕಾಯ್ದೆಯ ಬಗ್ಗೆ ನಾನು ರೈತನಾಗಿ ಮಾತನಾಡುತ್ತೇನೆ. ಉತ್ತರ ಪ್ರದೇಶದಲ್ಲಿ 1,500 ಗೋಶಾಲೆಗಳಿವೆ. ಎಲ್ಲ ಮಠಗಳಿಗೆ ಗೋಶಾಲೆ ಕಡ್ಡಾಯ ಮಾಡಿದ್ದಾರೆ. ಒಂದು ಎತ್ತಿಗೆ 30 ರೂ. ನೀಡಬೇಕು ಎಂದು ಕಾನೂನು ಮಾಡಿದ್ದಾರೆ. ಇಲ್ಲಿ ಯಾವುದೇ ಸಿದ್ಧತೆ ಮಾಡಿಲ್ಲ.

ನಿಮ್ಮ ಭವಿಷ್ಯದ ರಾಜಕಾರಣ ಎಲ್ಲಿ?
ನನ್ನ ಭವಿಷ್ಯ ಹೇಗಿದೆಯೋ ಹಾಗೆ ಆಗುತ್ತದೆ. ನನಗೆ ಭವಿಷ್ಯ ಹೇಳಲು ಬರುವುದಿಲ್ಲ.

ವಿಧಾನಪರಿಷತ್‌ ಸಭಾಪತಿ ಸ್ಥಾನ ಬೇಕು ಅಂತ ನೀವು ಕೇಳಿದ್ದಿರೇ?
ನಮ್ಮವರು ಕೇಳಿದ್ದಾರೆ, ನಾನಲ್ಲ. ನಾನು ಸಭಾಪತಿ ಆಗುವುದಾದರೆ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್‌ನವರು ಬಂದಿದ್ದರು. ದೇವೇಗೌಡರು ಬಿಜೆಪಿ ವರಿಷ್ಠರ ಜತೆ ಮಾತನಾಡಿ, ಹೊರಟ್ಟಿಗೆ ಸಭಾಪತಿ ಸ್ಥಾನ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸಂದರ್ಶನ ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next