ಮೊನ್ನೆ, ನಿನ್ನ ನೆನಪುಗಳ ವಿಲೇವಾರಿಗೆ ತೊಡಗಿಕೊಂಡೆ. ನೀನು ಕೊಟ್ಟ ಗುಲಾಬಿ ಹೂಗಳ ಎರಡು ಗ್ರೀಟಿಂಗ್ಸ್, ಒಂದು ವಾಚ್, ಹೃದಯದ ಮಾರ್ಕಿನ ಕೀ ಬಂಚ್, ಕೆಂಪು ಬಣ್ಣದ ಅಂಗಿ. ಎಲ್ಲವನ್ನೂ ಒಂದು ಕವರಿನಲ್ಲಿ ಕಟ್ಟಿ ದೂರದ ರಸ್ತೆಯ ಮರದ ಬುಡದಲ್ಲಿ ಎಸೆದು ಬಂದೆ. ಎಲ್ಲವನ್ನೂ ತೊಡೆದುಕೊಂಡ ಸಣ್ಣ ನೆಮ್ಮದಿ. ಮಾರನೆ ದಿನ ನಿನ್ನೆ ಎಸೆದು ಬಂದ ಅಷ್ಟೂ ವಸ್ತುಗಳು ಜೋಪಾನವಾಗಿ ಮನೆಗೆ ಬಂದಿದ್ದವು! ಯಾರು ಕಳ್ಸಿದ್ದು? ಗೊತ್ತಾಗಲಿಲ್ಲ. ಮತ್ತೆ ಅವುಗಳನ್ನು ನಿನ್ನ ಪ್ರೀತಿಯಷ್ಟೇ ಜೋಪಾನವಾಗಿ ಎತ್ತಿಟ್ಟೆ. ಯಾರು ಕಳಿಸಿದ್ದು?
ಬಿಡು, ಅವತ್ತು ಕಲ್ಲು ಕೂಡ ಕರಗಿತ್ತು. ಹೃದಯಗಳು ಒಡೆದು ಹೋದವು ಅಂತ ಹೇಳಲಾರೆ. ಯಾಕಂದ್ರೆ, ನನ್ನ ಹೃದಯ ಒಡೆದಿದ್ದು ಮಾತ್ರ ಸತ್ಯ. ನಿನ್ನದು?… ನನಗೆ ಗೊತ್ತಿಲ್ಲ. ಹೃದಯ ಒಡೆಯಲೆಂದೇ ಬಂದವರ ಹೃದಯಗಳು ಎಂದಿಗೂ ಸೇಫ್. ಅದರಲ್ಲಿ ಅಷ್ಟು ಮಾತ್ರದ ಸ್ವಾರ್ಥ ಇರುವುದನ್ನು ತಿಳಿದುಕೊಳ್ಳದೆ ಇರುವಷ್ಟು ಮೂರ್ಖನಾ ನಾನು?
ಪ್ರೀತಿಯೇ ಹಾಗೆ. ಅದು ಎಂಥವರನ್ನೂ ಬೇಗ ಮೂರ್ಖರನ್ನಾಗಿ ಮಾಡಿಬಿಡುತ್ತದೆ. ಎರಡೇ ಮಾತಿಗೆ ಆರು ವರ್ಷಗಳ ಒಲವೊಂದು ಅನಾಥವಾಯಿತು. ಬರೀ ಎರಡು ಮಾತಿಗೆ ಅಂಥ ಶಕ್ತಿ ಇದ್ದೀತಾ? ಅಂತ ಕೇಳುವವರಿ¨ªಾರೆ. ಆ ಎರಡು ಮಾತುಗಳಿಗಾಗಿ ನೀನು ನಡೆಸಿರುವ ಹೋಮ್ ವರ್ಕ್ ಜಗತ್ತಿಗೆ ಕಾಣುವುದಿಲ್ಲ. ಅಂದು ನನ್ನ ಕಣ್ಣಿನೊಳಗೆ ಇಂಗಿಹೋದ ಕಣ್ಣೀರು ನಿನಗೆ ಕಾಣಲಿಲ್ಲ. ಪ್ರೀತಿ ಎಂಥ ವಿಚಿತ್ರ ನೋಡು…
ಅದು ಹುಟ್ಟುವುದಕ್ಕೆ ಕಾರಣವಿಲ್ಲ, ಹಾಗೇ ಸಾಯುವುದಕ್ಕೂ.. ನಿನ್ನ ಹೊರತಾಗಿ ನನಗೆ ಸವಾಲಾಗಿದ್ದು ನಿನ್ನ ನೆನಪುಗಳು. ಒಂದೊಂದು ನೆನಪುಗಳಿಗೂ ಸಾವಿರ ಈಟಿ, ಪ್ರತಿಯೊಂದಕ್ಕೂ ಅದೆಂಥ ಮೊನಚು! ನೀನು ಬಿಟ್ಟು ಹೋಗಿದ್ದು ಅಗಣಿತ ನೆನಪುಗಳನ್ನಷ್ಟೇ ಅಲ್ಲ, ಅವು ಕಾಣದೇ ಕೊಡುವ ನೋವನ್ನೂ. ಮೊದಮೊದಲು ನೆನಪಿನ ಈಟಿ ಚುಚ್ಚುವಾಗಲೆಲ್ಲಾ ಆನಂದವಾಗುತ್ತಿತ್ತು. ಹಲ್ಲು ಬಿಗಿ ಹಿಡಿಯುವಂಥ ದುಃಖವನ್ನು ಮರೆಯಲು ನೆನಪಿನ ಈಟಿ ಮಾಡಿದ ಗಾಯದ ಮೊರೆ ಹೋಗುತ್ತಿದ್ದೆ. ಬಿಡು, ಇನ್ನೆಷ್ಟು ದಿನ? ಈಟಿಯ ಮೊನಚು ಕಡಿಮೆಯಾದೀತು ಅಂದುಕೊಂಡಿದ್ದೆ! ಉಹೂಂ, ಇಷ್ಟು ವರ್ಷಗಳಾದರೂ ಅದೇ ಪ್ರಾಣ ಹೋಗುವಂಥ ಚುಚ್ಚುವಿಕೆ. ಈ ಜಗತ್ತಿನಲ್ಲಿ ಎಲ್ಲವನ್ನೂ ಮಾರಬಹುದು; ಆದರೆ ನೆನಪುಗಳನ್ನು? ಆಚೆ ಎಸೆದಷ್ಟೂ ಮತ್ತೆ ಮತ್ತೆ ಬಂದು ಗಾಢವಾಗಿ ಮುತ್ತುತ್ತವೆ.
ಮೊನ್ನೆ, ನಿನ್ನ ನೆನಪುಗಳ ವಿಲೇವಾರಿಗೆ ತೊಡಗಿಕೊಂಡೆ. ನೀನು ಕೊಟ್ಟ ಗುಲಾಬಿ ಹೂಗಳ ಎರಡು ಗ್ರೀಟಿಂಗ್ಸ್, ಒಂದು ವಾಚ್, ಹೃದಯದ ಮಾರ್ಕಿನ ಕೀ ಬಂಚ್, ಕೆಂಪು ಬಣ್ಣದ ಅಂಗಿ. ಎಲ್ಲವನ್ನೂ ಒಂದು ಕವರಿನಲ್ಲಿ ಕಟ್ಟಿ ದೂರದ ರಸ್ತೆಯ ಮರದ ಬುಡದಲ್ಲಿ ಎಸೆದು ಬಂದೆ. ಎಲ್ಲವನ್ನೂ ತೊಡೆದುಕೊಂಡ ಸಣ್ಣ ನೆಮ್ಮದಿ. ಮನೆಗೆ ಬಂದು ಕೂತೆ. ಅಲ್ಲಿ ನಿನ್ನ ನೆನಪಿನ ಯಾವ ಕುರುಹುಗಳಿರಲಿಲ್ಲ, ಒಂದು ಸಮಾಧಾನದ ನಿಟ್ಟುಸಿರು ಎಳೆದುಕೊಂಡೆ.
ಮಾರನೇ ದಿನದ ಮಧ್ಯಾಹ್ನದ ಹೊತ್ತಿಗೆ ಯಾರೋ ಬಾಗಿಲಲ್ಲಿ ನಿಂತು ನನ್ನ ಹೆಸರು ಕೂಗಿ ಕರೆದ ಸದ್ದು. ಎದ್ದು ಬಂದೆ. ಬಾಗಿಲಲ್ಲಿ ಅಂಚೆಯವನು ನಿಂತಿ¨ªಾನೆ. ಅವನ ಕೈಯಲ್ಲೊಂದು ಪಾರ್ಸಲ…. ಸಹಿ ಮಾಡಿ ಪಡೆದುಕೊಂಡೆ. ಹೌದು, ನನ್ನ ಹೆಸರಿಗೇ ಬಂದಿದೆ. ಬಂದಿದ್ದು ಎಲ್ಲಿಂದ? ಗೊತ್ತಾಗಲಿಲ್ಲ. ಕುತೂಹಲದಿಂದ ಕವರನ್ನು ಕಳಚಿದೆ. ಗುಲಾಬಿ ಹೂವುಗಳ ಎರಡು ಗ್ರೀಟಿಂಗ್ಸ್, ಒಂದು ವಾಚ್, ಹೃದಯ ಮಾರ್ಕಿನ ಕೀ ಬಂಚ್, ಕೆಂಪು ಬಣ್ಣದ ಅಂಗಿ! ನಿನ್ನೆ ಎಸೆದು ಬಂದ ಅಷ್ಟೂ ವಸ್ತುಗಳು ಜೋಪಾನವಾಗಿ ಮನೆಗೆ ಬಂದಿದ್ದವು! ಯಾರು? ಯಾರು ಕಳ್ಸಿದ್ದು? ಗೊತ್ತಾಗಲಿಲ್ಲ. ಮತ್ತೆ ಅವುಗಳನ್ನು ನಿನ್ನ ಪ್ರೀತಿಯಷ್ಟೇ ಜೋಪಾನವಾಗಿ ಎತ್ತಿಟ್ಟೆ. ನೀನೇನಾದರೂ ಮನಸ್ಸು ಬದಲಿಸಿರುವೆಯಾ? ಹಾಗನಿಸುತ್ತಿಲ್ಲ.
-ಸದಾಶಿವ್ ಸೊರಟೂರು