Advertisement

ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳಿರಲಿ: ಗವಿಶ್ರೀ

12:18 PM Sep 14, 2019 | Team Udayavani |

ಕೊಪ್ಪಳ: ಜೀವನದಲ್ಲಾದ ಆಕಸ್ಮಿಕ ಘಟನೆಗಳಲ್ಲಿ ದೈಹಿಕವಾಗಿ ಸಾಮರ್ಥ್ಯ ಕಳೆದುಕೊಂಡಿರುವವರು ನಮ್ಮೊಂದಿಗಿದ್ದಾರೆ. ಬದುಕಿನ ಇನ್ನೊಂದು ಹಂತದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ಮನಸ್ಸಿಗೆ ನೋವಾಗುತ್ತದೆ. ಆದರೆ ಆಗಿಹೋಗಿದ್ದರ ಬಗ್ಗೆ ಚಿಂತಿಸುವುದಕ್ಕಿಂತ ಅದರಿಂದ ಹೊರಗೆ ಬರುವುದು ಬಹಳ ಮುಖ್ಯ. ಈ ಸ್ಥಿತಿಯಿಂದ ಹೊರಗೆ ಬರುವ ಸಕಾರಾತ್ಮಕ ಚಿಂತನೆಯಿರಬೇಕು ಎಂದು ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ನಗರದ ಸಾಮರ್ಥ್ಯ ಸಂಸ್ಥೆಯಲ್ಲಿ ದಿ. ಅಸೋಸಿಯೇಷನ್‌ ಆಫ್‌ ಪೀಪಲ್ ವಿತ್‌ ಡಿಸೆಬಿಲಿಟಿ ಸಹಯೋಗದಲ್ಲಿ ನಡೆದ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬ ಮನುಷ್ಯ ಜೀವನದಲ್ಲಿ ನೋವು, ನಿರಾಸೆ, ಖನ್ನತೆಗೊಳಗಾಗಿ ಒಂದು ಗಿಡದ ಕೆಳಗೆ ಕುಳಿತಿದ್ದ. ಆಗ ಒಂದು ಹಣ್ಣಾದ ಎಲೆ ಗಿಡದಿಂದ ಕೆಳಗೆ ಬಿತ್ತು. ನೋವಿನಲ್ಲಿದ್ದ ಮನುಷ್ಯನಿಗೆ ಏಕೆ ನಿನ್ನ ಮುಖದಲ್ಲಿ ಹತಾಶೆಯಿದೆ, ದುಃಖವಿದೆ, ಖನ್ನತೆಯಿದೆ ಎಂದು ಎಲೆ ಕೇಳಿತು. ಆಗ ಮನುಷ್ಯ ಹೇಳುತ್ತಾ ವಯಸ್ಸಿದ್ದಾಗ ಮನೆ ಸಲುವಾಗಿ, ಕುಟುಂಬಕ್ಕಾಗಿ, ಸ್ನೇಹಿತರಿಗಾಗಿ ದುಡಿದಿದ್ದೇನೆ. ಈಗ ವಯಸ್ಸಾಗಿದೆ. ನನ್ನನ್ನು ಯಾರೂ ಕಾಳಜಿ ಮಾಡುತ್ತಿಲ್ಲ. ಅದಕ್ಕೆ ದುಃಖವಾಗುತ್ತಿದೆ ಎಂದನಂತೆ. ಆಗ ಎಲೆ ಹೇಳುತ್ತಾ ನಿರಾಶೆಯಾಗುವ ಅವಶ್ಯಕತೆ ಇಲ್ಲ. ನಾನು ಈ ಗಿಡದಿಂದ ಹಣ್ಣೆಲೆಯಾಗಿ ಬೀಳುವ ಮುಂಚೆ ಗಿಡದಲ್ಲಿ ಹಸಿರೆಲೆಯಾಗಿದ್ದೆ. ನಾನಿರುವುದರಿಂದ ಗಿಡದಲ್ಲಿ ಸಂಪೂರ್ಣ ಹಸಿರಾಗಿ ವೈಭವವಿತ್ತು. ಈಗ ಗಿಡಕ್ಕೆ ಉಪಯೋಗವಿಲ್ಲದಾಗಿ ಹಣ್ಣೆಲೆಯಾಗಿ ಬಿದ್ದಿದ್ದೇನೆ. ಉಪಯೋಗವಿಲ್ಲಂತ ನಿನ್ನ ಹಾಗೆ ನಾನು ನೋವು ಮಾಡಿಕೊಂಡಿಲ್ಲ. ನನಗೆ ಭರವಸೆಯಿದೆ. ನಾನು ಮಣ್ಣೊಂದಿಗೆ ಒಂದಾಗಿ, ಗೊಬ್ಬರವಾಗಿ ಈ ಗಿಡದ ಬೇರಿಗೆ ಬಂದು, ಟೊಂಗೆಗೆ ಬಂದು, ಮತ್ತೆ ಗಿಡದಲ್ಲಿ ಹಸಿರೆಲೆಯಾಗಿ ಬರುತ್ತೇನೆಂಬ ಭರವಸೆಯಿದೆ ಎಂದಿತಂತೆ ಎಂದು ದೃಷ್ಟಾಂತ ಹೇಳುವ ಮೂಲಕ ಮನುಷ್ಯ ತನ್ನಲ್ಲಿ ತನಗೆ ನಂಬಿಕೆ ಇರಬೇಕು. ಬೆನ್ನುಹುರಿ ಅಪಘಾತಕ್ಕೀಡಾಗಿ ಅಸಮರ್ಥರಾದವರು ವ್ಯಾಯಾಮ, ಚಿಕಿತ್ಸೆಯ ಮೂಲಕ ಜೀವನದಲ್ಲಿ ಮತ್ತೆ ಎದ್ದು ಓಡಾಡಬಹುದು ಎಂದು ಆತ್ಮಸ್ಥೈರ್ಯ ತುಂಬಿದರು.

ಪತಂಜಲಿ ಯೋಗ ಶಿಕ್ಷಕ ಎಂ. ಗೋವಿಂದರಾಜು ಮಾತನಾಡಿ, ಬೆನ್ನುಹುರಿ ಅಪಘಾತಕ್ಕೀಡಾದವರು ಪುನಃಶ್ಚೇತನಗೊಳ್ಳುವಲ್ಲಿ ಯೋಗ ಮತ್ತು ಪ್ರಾಣಾಯಾಮ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು.

ಬೆನ್ನುಹುರಿ ಅಪಘಾತಕ್ಕೀಡಾಗಿ ಸಾಮರ್ಥ್ಯ ಸಂಸ್ಥೆಯ ಪುನಃಶ್ಚೇತನ ಪಡೆದಿರುವ ವಿಕಲಚೇತನರು ಮಾತನಾಡಿದರು. ಹಿರಿಯ ಪಶು ವೈದ್ಯಾಧಿಕಾರಿ ಜೆ.ಎಸ್‌. ಅಶ್ವತ್ಥಕುಮಾರ, ದಾನಿಗಳ ನೆರವಿನ ಮೂಲಕ 3 ಬೆನ್ನುಹುರಿ ಅಪಘಾತಕ್ಕೀಡಾದ ವಿಕಲಚೇತನರಿಗೆ ವೀಲ್ ಚೇರ್‌ ಮತ್ತು ತ್ರಿಚಕ್ರ ಸೈಕಲ್ ವಿತರಿಸಲಾಯಿತು. ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಡಿ.ಎನ್‌. ಮೂಲಿಮನಿ, ಬಸಯ್ಯಸ್ವಾಮಿ, ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಕೋಮಲಾ ಕುದರಿಮೋತಿ, ಗಿರಿಜಾ ಬಳ್ಳೊಳ್ಳಿ, ಸಾಮರ್ಥ್ಯ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಎಚ್.ಎನ್‌. ಬಸಪ್ಪ, ಅಶೋಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next