ಹೊಸದಿಲ್ಲಿ : ದಿಲ್ಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾಲಿನ್ಯದ ಬಗ್ಗೆ ಪ್ರಜೆಗಳು ದೂರು ದಾಖಲಿಸಲು ಅನುಕೂಲವಾಗುವಂತೆ ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲಿ ತಾನು ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆದಿರುವುದಾಗಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಇಂದು ಗುರುವಾರ ಸುಪ್ರೀಂ ಕೋರ್ಟಿಗೆ ತಿಳಿಸಿದೆ.
ಈ ಖಾತೆಗಳನ್ನು ತೆರೆಯಲಾಗಿರುವ ಬಗ್ಗೆ ಜನರಿಗೆ ಸೂಕ್ತ ಅರಿವು, ತಿಳಿವಳಿಕೆ ಮತ್ತು ಮಹತ್ವವನ್ನು ಮನಗಾಣಿಸಲು ಅಗತ್ಯವಿರುವ ಪ್ರಚಾರ, ಜಾಹೀರಾತು ನೀಡುವ ಕ್ರಮ ತೆಗೆದುಕೊಳ್ಳಬೇಕು ಎಂದು ಜಸ್ಟಿಸ್ ಮದನ್ ಬಿ ಲೋಕೂರ್ ನೇತೃತ್ವದ ಪೀಠವು ಸಿಪಿಸಿಬಿ ಗೆ ಸೂಚಿಸಿತು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, “ಮೂರು ವರ್ಷಗಳ ಹಿಂದೆಯೇ ಅಂದರೆ 2015ರ ಎಪ್ರಿಲ್ 7ರಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ದಿಲ್ಲಿಯಲ್ಲಿ 15 ವರ್ಷ ಮೀರಿದ ಪೆಟ್ರೋಲ್ ಮೋಟಾರು ವಾಹನ ಮತ್ತು 10 ವರ್ಷ ಮೀರಿದ ಡೀಸೆಲ್ ಮೋಟಾರು ವಾಹನ ಓಡಿಸಕೂಡದು ಎಂದು ಆದೇಶಿಸಿದ್ದ ಹೊರತಾಗಿಯೂ ಅದರ ಕಟ್ಟುನಿಟ್ಟಿನ ಅನುಷ್ಠಾನ ಏಕಾಗಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.