Advertisement

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

09:17 PM Apr 24, 2024 | Team Udayavani |

ನವದೆಹಲಿ: ಸಂಪತ್ತು ಮರುಹಂಚಿಕೆಯ ಭರವಸೆ ಕುರಿತು ಬಿಜೆಪಿ ಕಿಡಿಕಾರುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು, ಜಾತಿಗಣತಿಯು ತಮ್ಮ ಜೀವನದ ಗುರಿಯಾಗಿದ್ದು, ಅದನ್ನು ಯಾವ ಶಕ್ತಿಯೂ ತಡೆಯಲಾರದು ಎಂದು ಬುಧವಾರ ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, “ಜಾತಿಗಣತಿಯ ಎಕ್ಸ್‌-ರೇಗೆ (ಸಂಪತ್ತು ಮರುಹಂಚಿಕೆ) ತಮ್ಮನ್ನು ತಾವು ದೇಶಭಕ್ತರು ಎಂದು ಹೇಳಿಕೊಳ್ಳುವವರು ಹೆದರಿದ್ದಾರೆ. ಆದರೆ, ಜಾತಿಗಣತಿ ನನ್ನ ಜೀವನದ ಗುರಿಯಾಗಿದ್ದು, ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.

ನಮ್ಮ ಸರ್ಕಾರ ರಚನೆಯಾಗುತ್ತಿದ್ದಂತೆ ನಾವು ಮಾಡುವ ಮೊದಲ ಕೆಲಸವೇ ಜಾತಿಗಣತಿಯಾಗಿರುತ್ತದೆ. ಮೋದಿ 16 ಲಕ್ಷ ಕೋಟಿ ರೂಪಾಯಿಯನ್ನು ಆಯ್ದ ಕೆಲವೇ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಈ ಪೈಕಿ ಚಿಕ್ಕ ಮೊತ್ತವನ್ನು ಶೇ.90 ಜನರಿಗೆ ವಾಪಸ್‌ ನೀಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಶೇ.90 ಜನರಿಗೆ ಭಾರೀ ಅನ್ಯಾಯ: ನನಗೆ ನ್ಯಾಯದಲ್ಲಿ ಆಸಕ್ತಿ ಇದೆಯೇ ಹೊರತು ಜಾತಿಯಲ್ಲಿ ಅಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ.

“ದೇಶದ ಶೇ.90ರಷ್ಟು ಜನಸಂಖ್ಯೆಗೆ ಭಾರೀ ಅನ್ಯಾಯ ಮಾಡಲಾಗಿದೆ ಎಂದು ಹೇಳುತ್ತಿದ್ದೇನೆ. ಈ ಕುರಿತು ನಾವು ಏನು ಕ್ರಮ ಕೈಗೊಳ್ಳಲಿದ್ದೇವೆ‌ ಎಂದು ಈವರೆಗೂ ಹೇಳಿಲ್ಲ. ನಾನು ಹೇಳಿದ್ದಿಷ್ಟೇ; ಎಷ್ಟು ಅನ್ಯಾಯವಾಗಿದೆ ಎಂದು ತಿಳಿದುಕೊಳ್ಳೋಣ. ಇದಕ್ಕೆ ಏಕೆ ಅಡ್ಡಿ ಮಾಡಬೇಕು? ಒಂದು ವೇಳೆ ನೀವು ಗಾಯಗೊಂಡರೆ, ಎಕ್ಸ್‌-ರೇ ಮಾಡಿ ಎಂದು ಹೇಳುವುದಿಲ್ಲವೇ? ಅದಕ್ಕೆ ಯಾರಾದರೂ ಅಡ್ಡಿ ಮಾಡುತ್ತಾರೆಯೇ ಎಂದು ರಾಹುಲ್‌ ಪ್ರಶ್ನಿಸಿದರು.

Advertisement

ಜಾತಿಗಣತಿ ನನಗೆ ರಾಜಕೀಯವಲ್ಲ: ಜಾತಿ ಗಣತಿಯು ತಮಗೆ ರಾಜಕೀಯವಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ ವಯನಾಡ್‌ ಸಂಸದ ಹೇಳಿಕೊಂಡಿದ್ದಾರೆ. “ಅದು ನನ್ನ ನನ್ನ ಜೀವನದ ಗುರಿ. ನಾನು ನಿಮಗೆ ಗ್ಯಾರಂಟಿ ನೀಡುತ್ತೇನೆ… ಜಾತಿಗಣತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಜಾತಿ ಗಣತಿ ವಿಳಂಬವಾದಷ್ಟೂ ದೊಡ್ಡ ಶಕ್ತಿಯಾಗಿ ವಾಪಸ್‌ ಬರಲಿದೆ. ಹಾಗಾಗಿ, ಜೀವನದ ಗುರಿ ಮತ್ತು ರಾಜಕೀಯ ಮಧ್ಯೆ ವ್ಯತ್ಯಾಸವಿದೆ. ರಾಜಕೀಯದಲ್ಲಿ ನೀವು ಹೊಂದಾಣಿಕೆ ಮಾಡಿಕೊಳ್ಳಬಹುದು’ ಎಂದರು.

ಆತಂಕಕ್ಕೀಡಾಗಿರುವ ಪ್ರಧಾನಿ : ಕಾಂಗ್ರೆಸ್‌ನ ಕ್ರಾಂತಿಕಾರಕ ಚುನಾವಣಾ ಪ್ರಣಾಳಿಕೆಯನ್ನು ನೋಡಿದ ಬಳಿಕ ನರೇಂದ್ರ ಮೋದಿ ಅವರು ಆತಂಕಕ್ಕೀಡಾಗಿದ್ದಾರೆ. ನಮ್ಮ ಪ್ರಣಾಳಿಕೆಯು ಎಕ್ಸ್‌-ರೇ(ಜಾತಿ ಗಣತಿ) ಮತ್ತು ಮೋದಿ ಸೃಷ್ಟಿಸಿರುವ ಆದಾಯ ಅಸಮಾನತೆಯ ಬಗ್ಗೆ ಮಾತನಾಡುತ್ತಿದೆ‌ ಎಂದು ರಾಹುಲ್‌ ಗಾಂಧಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next