Advertisement

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

11:17 AM Apr 21, 2024 | Team Udayavani |

ಮಾನವರಾದ ನಾವು ದಿನನಿತ್ಯ ಜೀವನದಲ್ಲಿ ನಮಗೆ ಯಾವ ಅಗತ್ಯಗಳು ಬೇಕಿವೆಯೋ ಅವುಗಳನ್ನು ನಾವೇ ಈಡೇರಿಸಿಕೊಳ್ಳುತ್ತೇವೆ. ನಮಗೆ ಹೇಗೆ ಬೇಕೋ ಹಾಗೆ ಜೀವನ ನಡೆಸುತ್ತೇವೆ. ಚಳಿಯಾದಾಗ ಬೆಚ್ಚಗಿನ ಧಿರಿಸು ಧರಿಸಿ, ಬಿಸಿ ಬಿಸಿ ಆಹಾರ ತಿಂಡಿ ಪದಾರ್ಥಗಳನ್ನು ತಿಂದು ತೇಗುತ್ತೇವೆ.

Advertisement

ಹಾಗೇ ಬೇಸಗೆಯಲ್ಲಿ ಕಾಟನ್‌ ಉಡುಪುಗಳನ್ನು ಧರಿಸಿ, ತಂಪು ಪಾನೀಯಗಳನ್ನು ಹೆಚ್ಚಾಗಿ ಸೇವಿಸುತ್ತೇವೆ. ಹಣ್ಣುಗಳನ್ನು ತಿನ್ನುವುದು, ನೀರನ್ನು ಹೆಚ್ಚಾಗಿ ಕುಡಿಯುವುದು, ಬಿಸಿಲಿಗೆ ಬಾಡದ ಹಾಗೆ ನಮ್ಮನ್ನು ನಾವು ಕಾಪಾಡಿಕೊಳ್ಳುವುದು, ಸೆಕೆಯಾದಾಗ ಫ್ಯಾನ್‌, ಎ.ಸಿ ಹೀಗೆ ಎಲ್ಲ ರೀತಿಯಲ್ಲೂ  ನಮ್ಮ ಕುಟುಂಬ, ಸಮಾಜ ಬೇಸಗೆ ಕಾಲವನ್ನು ಎದುರಿಸುತ್ತದೆ.

ಆದರೆ ಈ ವರ್ಷದ ಬಿಸಿಲಿನ ತಾಪಕ್ಕೆ ಕೆರೆ, ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಸಾಕಷ್ಟು ಅನುಕೂಲಗಳಿದ್ದ ಮನುಷ್ಯನಿಗೇ ಈ ತಾಪವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇನ್ನು ಪ್ರಾಣಿ-ಪಕ್ಷಿಗಳ ಗೋಳು ಯಾವ ರೀತಿಯಾಗಿರಬಹುದು ? ಈಗ ಅದೆಷ್ಟೋ ಪ್ರಾಣಿ, ಪಕ್ಷಿಗಳು ಉರಿಬಿಸಿಲಿನ ತಾಪ ತಾಳಲಾರದೆ, ಕುಡಿಯುವ ನೀರಿಲ್ಲದೆ ಸಾಯುತ್ತಿವೆ.

ಹಳ್ಳಿಗಳ ಲ್ಲಾದರೂ ಕೆರೆ, ಬಾವಿಗಳಾದರೂ ಇವೆ. ಆದರೆ ಕಾಂಕ್ರೀಟ್‌ ಕಾಡುಗಳಲ್ಲಿ ಅದೂ ಇಲ್ಲ.  ಇಲ್ಲಿ ಹೇಗೆ ಪ್ರಾಣಿ-ಪಕ್ಷಿಗಳು ತಮ್ಮ ದಾಹವನ್ನು ತೀರಿಸಿಕೊಂಡಾವು? ಆದ್ದರಿಂದ ಕಾಂಕ್ರೀಟ್‌ ಕಾಡಿನಲ್ಲಿರುವ ನಾವು ಒಂದು ಸಣ್ಣ ಕೆಲಸ ಮಾಡಬೇಕಿದೆ. ಅದೇನೆಂದರೆ ನಮ್ಮ ಮನೆಯ ಮುಂಭಾಗ ಅಥವಾ ಮನೆಯ ಮೇಲಿನ ಗಾರ್ಡನ್‌ನಲ್ಲಿ ಒಂದು ಪಾತ್ರೆಯಲ್ಲಿ ನೀರು ತುಂಬಿಟ್ಟರೆ ಪಕ್ಷಿಗಳು ಬಂದು ನೀರು ಕುಡಿದು ತಮ್ಮ ದಾಹ ಇಂಗಿಸಿಕೊಳ್ಳುತ್ತವೆ.  ಹಾಗೆಯೇ ಒಂದು ಬಟ್ಟಲಿನಲ್ಲಿ ಧಾನ್ಯ, ಕಾಳುಗಳನ್ನು ಅಳತೆ ಮೀರದಂತೆ ತುಂಬಿಸಿಟ್ಟರೆ ಪಕ್ಷಿಗಳು ತಿಂದು ತಮ್ಮ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳುತ್ತವೆ.

Advertisement

ಇದು ನಾವು ಮಾಡುವ ಸಣ್ಣ ಕಾರ್ಯ ಎನಿಸಬಹುದು ಆದರೆ ಪ್ರತೀ ದಿನ ಬಿಡದೆ ಈ ಪ್ರಯತ್ನವನ್ನು ಮುಂದುವರಿಸಿದರೆ ನಮ್ಮ ಸಣ್ಣ ಕಾರ್ಯದಿಂದಾಗಿ ಒಂದು ಪಕ್ಷಿಯಾದರೂ ತನ್ನ ದಾಹವನ್ನು ತಣಿಸಿಕೊಂಡು ಜೀವ ಉಳಿಸಿಕೊಂಡೀತು.

ಮಾನವರಾದ ನಾವು ದಿನನಿತ್ಯ ಅಗತ್ಯಗಳನ್ನು ಈಡೇರಿಸಿಕೊಂಡು ನಮ್ಮಿಚ್ಛೆ ಬಂದಂತೆ ಬದುಕು ಸಾಗಿಸುತ್ತಿದ್ದೇವೆ. ಎಲ್ಲವನ್ನೂ ನಾವೇ ತಿಂದು ತೇಗುವ ಬದಲು ಸ್ವಲ್ಪವಾದರೂ ಸಮಾಜಮುಖೀಯಾಗಿ ಬಾಳ್ಳೋಣ. ಸಮಾಜದಲ್ಲಿನ ಜೀವಿಗಳಿಗೆ ಅಲ್ಪವಾದರೂ ಸಹಾಯ ಮಾಡುತ್ತಾ ಅವುಗಳನ್ನೂ ಬದುಕಿಸುತ್ತಾ ನಾವೂ ಬದುಕೋಣ. ಏನಂತೀರಾ…?

-ಭಾಗ್ಯ ಜೆ.

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next