ವೃತ್ತಿಯಲ್ಲಿ ಆಪ್ತಸಮಾಲೋಚಕಿ. ಸದಾಕಾಲ ಪ್ರಫುಲ್ಲವಾಗಿರಲು ವೀಣಾವಾದಕಿ. ರಂಗಭೂಮಿಯ ಕಲಾವಿದೆ ಎಂದು ಹೇಳಿಕೊಳ್ಳಲು ಅಭಿಮಾನ. ಬರೆಯುವುದು, ಕಾರ್ಯಕ್ರಮ ನಿರ್ವಹಿಸುವುದು, ತರಬೇತಿ ನೀಡುವುದು ಹೀಗೆ ಹತ್ತುಹಲವು ರೀತಿಯಲ್ಲಿ ತೊಡಗಿಸಿಕೊಂಡಿರುವವಳು ನಾನು. ಕೆಲಸಕ್ಕೆ ಹೋಗುವ ಮಹಿಳೆಗಂತೂ ಹವ್ಯಾಸವೂ ಜೊತೆಗಿದ್ದರೆ ಸಮಯ ಹೊಂದಾಣಿಕೆ ಒಂದು ಸವಾಲೇ.
ಒಂದು ನಾಟಕದ ಸ್ಟೇಜ್ ಮೇಲೆ ಬರಬೇಕಾದರೆ ಕನಿಷ್ಠ ಪಕ್ಷ ಹತ್ತು-ಹದಿನೈದು ದಿನ ತಪಸ್ಸಿನಂತೆ ಡೆಡಿಕೇಟ್ ಮಾಡಬೇಕು. ನಾನು ಅಭಿನಯಿಸುವ ತಂಡ ಇದ್ದಿದ್ದು ದೂರದ ಊರಿನಲ್ಲಿ. ಆಫೀಸು ಬಿಟ್ಟು ಮನೆ-ಮಕ್ಕಳ ದಿನನಿತ್ಯದ ಕೆಲಸ ಮುಗಿಸಿ ಎರಡೆರಡು ಬಸ್ ಹಿಡಿದು ನಾಟಕ ಪ್ರಾಕ್ಟೀಸ್‌ಗೆ ಹೋಗುವುದೇ ಒಂದು ಛಾಲೆಂಜ್. ಸಂಜೆ 5.30ಕ್ಕೆ ಮನೆಗೆ ಬಂದು ತೀರಾ ಅಗತ್ಯದ ಕೆಲಸವನ್ನಷ್ಟೇ ಮಾಡಿ 30 ಕಿ. ಮೀ. ದೂರದ ಜಾಗಕ್ಕೆ ಎರಡೆರಡು ಬಸ್ ಬದಲಾಯಿಸಿ, ಮತ್ತೆ ರಾತ್ರಿ ಹನ್ನೊಂದು-ಹನ್ನೆರಡು ಗಂಟೆಗೆ ಮನೆಗೆ ಬಂದು, ಯಥಾಪ್ರಕಾರ ಮರುದಿನದ “ಉದರ ನಿಮಿತ್ತಂ’ ದುಡಿಮೆಗೆ ಹಾಜರಾಗೋದು ನನಗೆ ಸಮಸ್ಯೆಯೇ ಆಗಿರಲಿಲ್ಲ. ಯಾಕೆಂದರೆ, ನನ್ನ ಬಾಳಸಂಗಾತಿ, ನನ್ನ ಕರುಳಬಳ್ಳಿಗಳಿಗೆ ನನ್ನ ತುಡಿತ ಅರ್ಥ ಆಗುತ್ತಿತ್ತು. ಹೆಚ್ಚಿನ ಸಲ ನಾನು ಬರಿಯ ಉತ್ಸವಮೂರ್ತಿ. ರಥ ಎಳೆಯುವ ಕೆಲಸ ಅವರದೇ!
ಆದರೆ, ಸವಾಲು ಅಂದರೆ ಈ ಹೆಂಗಸರ ಮಾತುಗಳನ್ನು ಎದುರಿಸುವುದು! “”ಹೇಗ್ರೀ ಅಷ್ಟೆಲ್ಲ ಮ್ಯಾನೇಜ್ ಮಾಡ್ತೀರಾ?” ಅನ್ನುವುದರಿಂದ ಪ್ರಾರಂಭವಾಗಿ, “”ನಿಮ್ಮ ಯಜಮಾನರು ಬೈಯೋದಿಲ್ಲವಾ? ನಮ್ಮ ಮನೆಯಲ್ಲಿ ನಾನು ಸಾಯಂಕಾಲ ಕೂಡ ಎಲ್ಲಿಯಾದ್ರೂ ಹೋಗಬೇಕಾದ್ರೆ ಚಹಾ ಫ್ಲಾಸ್ಕಿನಲ್ಲಿ ಹಾಕಿಟ್ಟರೂ ಅವರು ಬಗ್ಗಿಸಿ ಕುಡಿಯೋದಿಲ್ಲ. ಊಟ ನಾನೇ ಬಡಿಸಬೇಕು” ಎನ್ನುವವರೇ ಬಹಳ ಮಂದಿ. ಮನೆಗೆಲಸ ಮಾಡಿಸಿ ನನ್ನ ಗಂಡ-ಮಕ್ಕಳನ್ನು ನಾನು ಶೋಷಣೆ ಮಾಡ್ತಿದ್ದೆನೇನೊ ಎಂಬ ಭಾವನೆಯಲ್ಲಿ ಮಾತಾಡಿಸಿ ನನ್ನಲ್ಲಿ ಗಿಲ್ಟಿ ಫೀಲಿಂಗ್ ಮೂಡಿಸುವಲ್ಲಿಯವರೆಗೂ ಅವರು ಬಿಡುವುದಿಲ್ಲ. ಯಾಕೆ ಇಂಥ ಸಣ್ಣ ಸೂಕ್ಷ್ಮಗಳೂ ಅರ್ಥ ಆಗುವುದಿಲ್ಲ. ವಿನೋದವಾಗಿ ಹೇಳುವುದಾದರೆ, ನನ್ನ ಜಾತಕದಲ್ಲಿ ಕೆಲಸದವರು ಹೊಂದಾಣಿಕೆಯೂ ಆಗುವುದಿಲ್ಲವೇನೋ! ಹಾಗಾಗಿ, ನಾವೇ ಮನೆಯವರು ನಮ್ಮದೇ ಮನೆಗೆಲಸವನ್ನು ಮಾಡಿಕೊಂಡು ಹೋಗುವುದು ರೂಢಿಯಾಗಿಬಿಟ್ಟಿದೆ.
ನಾನು ಸಣ್ಣ ಸಣ್ಣ ವಿಷಯದಲ್ಲಿ ಸಂತೋಷವನ್ನು ಹುಡುಕುವವಳು, ಸಣ್ಣ ಖುಷಿಗಳಲ್ಲಿ ಬದುಕಲು ಪ್ರಯತ್ನಿಸುವವಳು. ಸಾಧ್ಯವಾದಷ್ಟು ಮನೆಯವರೆಲ್ಲರೂ ಒಟ್ಟಾಗಿ ಹೊರಗೆ ಹೋಗುವುದು, ನಾಟಕ-ಯಕ್ಷಗಾನ ಎಂದು ಹೋದಲ್ಲೆಲ್ಲ ಸೆಲ್ಫಿ ತೆಗೆದು ಅದನ್ನು ಸ್ಟೇಟಸ್ಗೋ, ಡಿಪಿಯೋ ಮಾಡಿ ಖುಷಿ ಪಡುವುದು. ಕೆಲವು ಮಂದಿ ಗೆಳತಿಯರು ಅದನ್ನು ನೋಡಿ ನಾನೇನೋ ವರ್ಲ್ಡ್ ಟೂರ್ ಮಾಡಿ ಬಂದೆನೋ ಎಂಬ ಹಾಗೆ, “”ಯಾವಾಗ ಅಲ್ಲಿಗೆಲ್ಲ ಹೋಗೋದು? ಹೇಗೆ ಸಮಯ ಹೊಂದಾಣಿಕೆ ಮಾಡ್ತಿ” ಎಂದೆಲ್ಲ ಕೇಳುತ್ತಾರೆ. ಕಚೇರಿಗೆ ನೀಟಾಗಿ ಡ್ರೆಸ್ ಮಾಡಿಕೊಂಡು ಹೋದರೆ, “”ನಿನಗೆ ಇದೆಲ್ಲ ಮ್ಯಾಚಿಂಗ್ ಮಾಡೋಕೆ ಯಾವಾಗ ಸಮಯ ಸಿಗ್ತದೆ?” ಎಂದೆಲ್ಲ ಕೇಳಲಾರಂಭಿಸುತ್ತಾರೆ. ಬರೆಯುತ್ತ ಹೋದರೆ ಇಂತಹದ್ದೇ ಅನುಭವಗಳು ತುಂಬ ಇದೆ !
ಇನ್ನೊಬ್ಬರ ಸಂತೋಷದಲ್ಲಿ ನಾವೂ ಸಂತೋಷಪಡುವುದು ದೊಡ್ಡದು. ನಾವು ಹೆಣ್ಣುಮಕ್ಕಳು ಇನ್ನೊಬ್ಬರ ಸಂತೋಷವನ್ನು ನೋಡಿ ತಾವೂ ಸಂತೋಷ ಪಡಲು ಕಲಿಯುವುದು ಯಾವಾಗ?
ಶಿಲ್ಪಾ ಜೋಶಿ ರಂಗಭೂಮಿ ಕಲಾವಿದೆ