Advertisement

ಸೌಲಭ್ಯವಿದೆ..ವೈದ್ಯರೇ ಇಲ್ಲ..!

05:27 PM Aug 13, 2018 | Team Udayavani |

ಹಾವೇರಿ: ‘ನಾನು ಹಾವೇರಿ ಜಿಲ್ಲಾ ಕೇಂದ್ರದಲ್ಲಿರುವ ಜಿಲ್ಲಾಸ್ಪತ್ರೆ. ಸರ್ಕಾರಿ ಆಸ್ಪತ್ರೆಯೆಂದರೆ ನನ್ನಲ್ಲಿಗೆ ಬರುವುದು ಬಡವರು ಮತ್ತು ಸಾಮಾನ್ಯ ವರ್ಗದವರು. ಬಂದವರಿಗೆಲ್ಲ ಉತ್ತಮ ವೈದ್ಯಕೀಯ ಸೇವೆ ಕೊಟ್ಟು ಬಡವರ ಬಂಧುವಾಗಬೇಕೆಂಬುದು ನನ್ನ ಹೆಬ್ಬಯಕೆ. ಆದರೆ, ಏನು ಮಾಡಲಿ, ಸೇವೆ ನೀಡುವ ಕೈಗಳ ಕೊರತೆ ನನ್ನನ್ನು ಕಾಡುತ್ತಿದೆ. ಇದರಿಂದಾಗಿ ನಾನೇ ವಿಕಲಾಂಗನಂತಾಗಿದ್ದೇನೆ! ಜಿಲ್ಲೆಯಲ್ಲಿಯೇ ಸರ್ಕಾರದ ದೊಡ್ಡ ಆಸ್ಪತ್ರೆ ಎಂಬ ಹೆಮ್ಮೆ ನನಗಿದೆ. ನನ್ನಲ್ಲಿಗೆ ನಿತ್ಯ ಹಲವಾರು ವಿವಿಧ ರೋಗಿಗಳು ಬರುತ್ತಾರೆ. ಅವರಿಗೆಲ್ಲ ತೃಪ್ತಿಕರ ಸೇವೆ ನೀಡಲು ನನಗೆ ಇನ್ನೂ 214 ವೈದ್ಯ ಹಾಗೂ ಸಿಬ್ಬಂದಿ ಬೇಕಿದೆ.

Advertisement

ಸೌಲಭ್ಯ ಸಾಕಷ್ಟಿದೆ: ನಾನು ಜಿಲ್ಲೆಯ ದೊಡ್ಡ ಆಸ್ಪತ್ರೆ ಆಗಿರುವುದರಿಂದ ಹಲವು ರೀತಿಯ ವೈದ್ಯಕೀಯ ಸೌಲಭ್ಯ ನೀಡಲು ಹಲವು ಸಾಧನ, ಸೌಕರ್ಯಗಳು ನನ್ನಲ್ಲಿವೆ. ನಿತ್ಯ ನನ್ನಲ್ಲಿಗೆ 600ರಿಂದ 700 ಹೊರರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸುತ್ತಾರೆ. 30 ರಿಂದ 40 ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಪ್ರತಿ ತಿಂಗಳು 400ರಿಂದ 450 ಹೆರಿಗೆಗಳಾಗುತ್ತಿವೆ. ಸರಾಸರಿ 100ರಷ್ಟು ಸಿಜೇರಿನ್‌ಗಳಾಗುತ್ತವೆ. ವಾರಕ್ಕೆ 20ರಿಂದ 25 ಸಾಮಾನ್ಯ ಆಪರೇಶನ್‌ ಗಳಾಗುತ್ತಿವೆ. ಆದರೂ ವೈದ್ಯ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಎಲ್ಲರಿಗೂ ಎಲ್ಲ ರೀತಿಯ ಸಮರ್ಪಕ ಸೇವೆ ನೀಡಲು ಆಗುತ್ತಿಲ್ಲ ಎಂಬ ಅಸಮಾಧಾನ ನನ್ನದು.

214 ಹುದ್ದೆ ಖಾಲಿ: ಅಂಕಿ ಅಂಶಗಳ ಪ್ರಕಾರ ಹೇಳಬೇಕೆಂದರೆ ನನ್ನಲ್ಲಿ ಕಾರ್ಯ ನಿರ್ವಹಿಸಲು ಸರ್ಕಾರದ ನಿಯಮಾವಳಿ ಪ್ರಕಾರ ಅವಶ್ಯವಿರುವ ಸಿಬ್ಬಂದಿ ಸಂಖ್ಯೆ 328. ಆದರೆ, ಇರುವುದು 114 ಮಾತ್ರ. ಎ ದರ್ಜೆ 68 ನೌಕರರಲ್ಲಿ 31 ಜನರು ಮಾತ್ರ ಇದ್ದು 37 ಹುದ್ದೆ ಖಾಲಿ ಇವೆ. ಬಿ ದರ್ಜೆ ನೌಕರರಲ್ಲಿ ಮೂವರಲ್ಲಿ ಇಬ್ಬರು ಇದ್ದು ಒಂದು ಹುದ್ದೆ ಖಾಲಿ ಇದೆ. ಸಿ ದರ್ಜೆ 182 ಹುದ್ದೆಗಳಲ್ಲಿ 60 ಹುದ್ದೆ ಮಾತ್ರ ಭರ್ತಿ ಇದ್ದು ಉಳಿದ 122 ಖಾಲಿ ಇವೆ. ಡಿ ದರ್ಜೆ 75 ಹುದ್ದೆಗಳಲ್ಲಿ 21 ಹುದ್ದೆ ತುಂಬಿದ್ದು 54 ಖಾಲಿ ಇವೆ. ಒಟ್ಟಾರೆ ಹೇಳುವುದಾದರೆ 328 ಹುದ್ದೆಗಳಲ್ಲಿ 114 ಹುದ್ದೆ ಭರ್ತಿಯಿದ್ದು 214 ಹುದ್ದೆ ಖಾಲಿ ಇವೆ. ಹೀಗಾಗಿ ಇರುವ ಕಡಿಮೆ ಸಿಬ್ಬಂದಿ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. 

ಬಡವರ ಪರಿಪಾಟಲು: ಕೆಲವೊಮ್ಮೆ ವೈದ್ಯರು ರಜೆಯ ಮೇಲೆ, ಕಚೇರಿ ಕಾರ್ಯದ ನಿಮಿತ್ತ ಬೇರೆ ಕಡೆ ಹೋದರಂತೂ ಮುಗಿದೇ ಹೊಯಿತು. ಆಯಾ ತಜ್ಞರಲ್ಲಿ ಚಿಕಿತ್ಸೆಗೆ ಬಂದ ರೋಗಿಗಳು ನನ್ನನ್ನೇ ಶಪಿಸುತ್ತಾರೆ. ತುರ್ತು ಚಿಕಿತ್ಸೆ ಅವಶ್ಯವಿದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಅವರ ಚಿಂತೆ ನನಗಿಲ್ಲ. ಆದರೆ, ಬಡ ರೋಗಿಗಳು ಪಡುವ ಪರಿಪಾಟಲು ನನ್ನಿಂದ ನೋಡಲಾಗುತ್ತಿಲ್ಲ. ಮೂರು ವರ್ಷಗಳ ಹಿಂದೆಷ್ಟೆ ಸರ್ಕಾರ ನನ್ನನ್ನು 100 ಹಾಸಿಗೆಯಿಂದ 250 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿದೆ. ಅದರ ಜೊತೆಗೆ ಕಟ್ಟಡ ನಿರ್ಮಾಣ, ವೈದ್ಯಕೀಯ ಸಲಕರಣೆ ಎಲ್ಲವನ್ನೂ ಸರ್ಕಾರ ನೀಡಿದೆ. ಆದರೆ, 250 ಹಾಸಿಗೆ ಆಸ್ಪತ್ರೆಗೆ ಬೇಕಾದಷ್ಟು ತಜ್ಞ ವೈದ್ಯರು, ನರ್ಸ್‌ ಮತ್ತು ಸಿಬ್ಬಂದಿಗಳನ್ನು ನೀಡುವುದೇ ಮರೆತಿದೆ. 

ಆಸ್ಪತ್ರೆಯಲ್ಲಿ ಐಸಿಯು, ರಕ್ತವಿದಳನ ಘಟಕ, ಅಲ್ಟ್ರಾಸೌಂಡ್‌ ಹಾಗೂ ಎಕ್ಸರೇ, ಡಯಾಲಿಸಿಸ್‌ ಹೀಗೆ ಅನೇಕ ಸೌಲಭ್ಯಗಳಿವೆ. ಸೇವೆ ನೀಡುವ ವೈದ್ಯರು, ಸಿಬ್ಬಂದಿ ಇಲ್ಲದಿದ್ದರೆ ಏನೆಲ್ಲ ಸೌಲಭ್ಯ ಇದ್ದರೂ ಏನು ಪ್ರಯೋಜನ ಎನ್ನುವಂತಾಗಿದೆ ನನ್ನ ಪರಿಸ್ಥಿತಿ. ಈಗಲಾದರೂ ಸರ್ಕಾರ, ಜನಪ್ರತಿನಿಧಿಗಳು ನನ್ನತ್ತ ಗಮನಹರಿಸಿ ಸಿಬ್ಬಂದಿ ಕೊರತೆ ನೀಗಿಸಿದರೆ, ನಾನು ಖಂಡಿತ ಉತ್ತಮ ವೈದ್ಯಕೀಯ ಸೇವೆ ನೀಡಬಲ್ಲೆ ಎಂಬ ಭರವಸೆ ಇದೆ.

Advertisement

ಸರ್ಕಾರಕ್ಕೆ ಪ್ರಸ್ತಾವನೆ
ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಕೊರತೆ ಇದ್ದು ಕೊರತೆ ಇರುವ ಹುದ್ದೆಗಳನ್ನು ಶೀಘ್ರ ತುಂಬುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಾಗರಾಜ ನಾಯಕ,
ಜಿಲ್ಲಾ ಶಸ್ತ್ರಚಿಕಿತ್ಸಕರು

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next