Advertisement

ಕಾಲಕ್ಕೆ ತಕ್ಕಂತೆ ಬದಲಾಗಬೇಕು ಸುಡಗಾಡು ಸಿದ್ಧರು 

05:34 PM Jul 09, 2018 | |

ಕುಷ್ಟಗಿ: ಸುಡಗಾಡು ಸಿದ್ಧರು ಸಂಪ್ರದಾಯ ಕಲೆಯ ಸಂಸ್ಕಾರಕ್ಕೆ ಅಂಟಿಕೊಳ್ಳದೇ ಕಾಲ ಬದಲಾದಂತೆ ಶಿಕ್ಷಣ ಹೊಂದುವ ಮೂಲಕ ಪರಿವರ್ತಿತಗೊಳ್ಳಬೇಕಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಹೇಳಿದರು. ಇಲ್ಲಿನ ಶ್ರೀ ರೇಣುಕಾಚಾರ್ಯ ಮಂಗಲಭವನದಲ್ಲಿ ಕುಷ್ಟಗಿ ತಾಲೂಕು ಸುಡುಗಾಡು ಸಿದ್ಧರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಡುಗಾಡು ಸಿದ್ಧರ ಕಲೆಯೂ ಇರಲಿ ಕಲೆಯ ಜೊತೆಗೆ ಶಿಕ್ಷಣವೂ ಇರಲಿ. ಶಿಕ್ಷಣ ಪಡೆದು ಅಭಿವೃದ್ಧಿ ಕಾಣಬೇಕಿದೆ ಎಂದರು.

Advertisement

ಸುಡಗಾಡು ಸಿದ್ಧರು ಪ್ರದರ್ಶಿಸುವ ಜಾದೂ, ಮನರಂಜನೆ, ಹೇಳುವ ಭವಿಷ್ಯದಿಂದ ಸದ್ಯದ ಜೀವನ ನಿರ್ವಹಣೆ ಸಾಧ್ಯವಿಲ್ಲ. ಜಗತ್ತು ಬದಲಾಗುತ್ತಿದ್ದು, ಬದಲಾವಣೆ ತಕ್ಕಂತೆ ಬದುಕಬೇಕಿದೆ. ಈ ಸಮಾಜಕ್ಕೆ ಜಮೀನು ಇಲ್ಲ, ಅಲೆಮಾರಿ ಜೀವನದ ಹಿನ್ನೆಲೆಯಲ್ಲಿ ಸರ್ಕಾರ ವಸತಿ, ವಸತಿ ಶಾಲೆ ಕಲ್ಪಿಸಿದೆ. ತಾವರಗೇರಾ ಭಾಗದಲ್ಲಿ ಎರಡು ಎಕರೆ ಜಮೀನು ನೀಡಿದ್ದು, ಆದರೆ ಈಗಿನ ಪರಿಸ್ಥಿತಿಯಲ್ಲಿ ಜಮೀನು ಹೆಸರಿಗೆ ಮಾತ್ರ, ಪರ್ಯಾಯ ಉದ್ಯೋಗಕ್ಕೆ ಒತ್ತು ನೀಡಬೇಕಿದೆ. ಸರ್ಕಾರ 34 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದೆ. ಈ ಸಾಲದಿಂದ ರೈತರ ಬದುಕು ಹಸನಾಗದು. ನಿತ್ಯದ ಬದುಕಿನಲ್ಲಿ ರೈತರ ಬವಣೆ ಬದಲಾಗದಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಸಮಾರಂಭ ಉದ್ಘಾಟಿಸಿ, ಸುಡುಗಾಡು ಎನ್ನುವುದು ಭಯ ಹುಟ್ಟಿಸುವ ಪದ. ಸಮಾಜದ ಕಂದಾಚಾರಗಳನ್ನು ಮೀರಿ ಸಿದ್ಧರಾಗಿ ಬದುಕು ಸಾಗಿಸುತ್ತಿದ್ದಾರೆ. ಸುಡಗಾಡು ಸಿದ್ಧರ ಜಾದೂ ಈಗಿನ ಕಾಲಘಟ್ಟದಲ್ಲಿ ನಡೆಯದು, ಸರ್ಕಾರದ ಸೌಲಭ್ಯ ಬಳಸಿಕೊಂಡು ಶಿಕ್ಷಣ ಹೊಂದಿ ಸಮಾಜದ ಮುಖ್ಯವಾಹಿಗೆ ಬರಬೇಕಿದೆ. ಅಲೆಮಾರಿಯಾಗಿರುವ ಈ ಸಮಾಜ ಒಂದೆಡೆ ನೆಲೆ ನಿಂತರೆ ಶಿಕ್ಷಣ, ಇತರೇ ಸೌಲಭ್ಯ ಹೊಂದಲು ಸಾಧ್ಯ ಎಂದರು. ಸುಡುಗಾಡು ಸಿದ್ಧರ ಸಮಾಜದ ಅಧ್ಯಕ್ಷ ಶಿವಪ್ಪ ಒಂಟೆತ್ತಿನವರ ಮಾತನಾಡಿ, ಸುಡುಗಾಡು ಸಿದ್ಧರ ಸಮಾಜದಲ್ಲಿ ಶಿಕ್ಷಣ ಕೊರತೆಯಿಂದ ಬಾಲ್ಯ ವಿವಾಹ ಪ್ರಕರಣಗಳಾಗಿದ್ದು, ಸಮಾಜದ ಒಳಿತಿಗಾಗಿ ಅನಿಷ್ಟ ಪದ್ಧತಿ ನಿಲ್ಲಿಸಲೇ ಬೇಕಿದೆ. ಮಕ್ಕಳನ್ನು ಭಿಕ್ಷಾಟನೆಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು. ಸಮಾಜದ ವ್ಯಕ್ತಿಗೆ ತೊಂದರೆಯಾದಾಗ ಒಂದಾಗಿ ಸಮಾಜಕ್ಕೆ ಶಕ್ತಿ ಕೊಡಬೇಕೆಂದರು.

ಸರ್ಕಾರಿ ಆಸ್ಪತ್ರೆಯ ಹಿರಿಯ ತಜ್ಞವೈದ್ಯ ಡಾ| ಮಹೇಂದ್ರ ಕಿಂದರಿ ಮಾತನಾಡಿ, ಸಮಾಜ ಉಳಿಯಲು ಸಮಾಜದ ಜಾದು, ಮನರಂಜನೆ ಕಲೆ ಉಳಿಸಲೇ ಬೇಕಿದೆ. ಈ ಕಲೆ ಪ್ರೋತ್ಸಾಹಿಸಲು ಅಕಾಡೆಮಿ ಇಲ್ಲ. ಕಲೆಯನ್ನು ಕಲಿಯಲು ಯಾರು ಮುಂದೆ ಬರುವುದಿಲ್ಲ. ಹೀಗಾದಲ್ಲಿ ಈ ಕಲೆ ಉಳಿಸಲು ಹೇಗೆ ಸಾಧ್ಯ? ವೈದ್ಯಕೀಯ ಸೇವೆಯಿಂದ ಸ್ವಯಂ ನಿವೃತ್ತರಾಗಿ ಸುಡುಗಾಡು ಸಿದ್ಧರ ಸಮಾಜ ಸೇವೆಗೆ ಮೀಸಲಿಡುವುದಾಗಿ ಹೇಳಿದರು.

ಮಾಜಿ ಶಾಸಕ ಕೆ. ಶರಣಪ್ಪ, ವಸಂತ ಮೇಲಿನಮನಿ, ಚಂದ್ರಶೇಖರ ನಾಲತವಾಡ, ಲಕ್ಷ್ಮಣ  ಮುಖೀಯಾಜಿ, ಮೋಹನಲಾಲ್‌ ಜೈನ್‌, ಬಸನಗೌಡ ಮಾಲಿಪಾಟೀಲ, ಮರಿಯಪ್ಪ ಗಂಟಿ, ಬಸವರಾಜಪ್ಪ ವಿಭೂತಿ, ಸುಂಕಪ್ಪ ಶಿರಸಾಲಿ, ವೆಂಕಟರಾಮ್‌ ಶಿರಸಾಲಿ, ದುರಗಪ್ಪ ಪರಿಯವರ್‌, ಕೃಷ್ಣಪ್ಪ ವಿಭೂತಿ, ರಾಮಣ್ಣ ಪರಿಯವರ್‌ ಮತ್ತಿತರಿದ್ದರು. ಜಂಬಯ್ಯ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next