ರಬಕವಿ-ಬನಹಟ್ಟಿ: ವಿದ್ಯಾರ್ಥಿಗಳು ಜೀವನದಲ್ಲಿ ವಿಭಿನ್ನ ಆಲೋಚನೆ ಹೊಂದುವುದರೊಂದಿಗೆ ಯಶಸ್ಸು ಗಳಿಸಿ ಎಂದು ಹರಿಹರ ಪೀಠದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀ ಹೇಳಿದರು.
ನಗರದ ಎಸ್‌ಟಿಸಿ ಕಾಲೇಜಿನ ಸಭಾ ಭವನದಲ್ಲಿ ಜನತಾ ಶಿಕ್ಷಣ ಸಂಘದ ಶ್ರೀ ತಮ್ಮಣ್ಣಪ್ಪ ಚಿಕ್ಕೋಡಿ ಕಲಾ ಹಾಗೂ ವಾಣಿಜ್ಯ ವಿಭಾಗದ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಇತಿಹಾಸ ವಿಭಾಗಕ್ಕೆ ಕಂಚಿನ ಮೂರ್ತಿಗಳ ಅರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ಜೀವನದಲ್ಲಿ ಸೋಲು ಗೆಲುವಾಗಿ ಪರಿವರ್ತಿಸಿಕೊಳ್ಳಿ, ಕೃಷಿ ಕೂಡಾ ಉತ್ತಮ ಆಯ್ಕೆ, ಕೃಷಿಯಲ್ಲಿ ವಿನೂತನ ತಂತ್ರಜ್ಞಾನ ಬಳಸಿ ಹೆಚ್ಚಿನ ಇಳುವರಿ ಹೊಂದುವ ಮೂಲಕ ದೇಶದ ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕಾದ ಆಹಾರ ನೀಡುವತ್ತ ಸಂಕಲ್ಪಿತರಾಗಬೇಕು ಎಂದರು.
ಹೊಸದನ್ನು ಕಲಿಯಿರಿ. ಈ ನಿಟ್ಟಿನಲ್ಲಿ ಆರೋಗ್ಯವಂತರಾಗಬೇಕು. ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಮಾಡಿ, ಹೆಚ್ಚಿಗೆ ನೀರು ಕುಡಿಯಿರಿ. ಜೀವನದಲ್ಲಿ ಗುರಿ ಸಾಧಿ ಸಲು ದೊಡ್ಡ ದೊಡ್ಡ ಕನಸ್ಸುಗಳನ್ನು ಕಾಣಿ ಎಂದು ಸಲಹೆ ನೀಡಿದರು.
ಅಥಣಿಯ ಶಿವಾನಂದ ಗುಡ್ಡಾಪುರ ಮಾತನಾಡಿದರು. ಜನತಾ ಶಿಕ್ಷಣ ಸಂಘದ ಚೇರಮನ್ ಬಿ.ಎಂ.ಜಾಡಗೌಡ, ಡಾ| ವಿ.ಆರ್. ಕುಳ್ಳಿ, ಮಲ್ಲಿಕಾರ್ಜುನ ಬಾಣಕಾರ, ಬಿ.ಆರ್. ಕುಲಗೊಡ, ಗಂಗಾಧರ ಕೊಕಟನೂರ, ಶ್ರೀಶೈಲ ಯಾದವಾಡ, ಪ್ರಾಚಾರ್ಯ ಡಾ| ಜಿ.ಆರ್. ಜುನ್ನಾಯ್ಕರ, ಇತಿಹಾಸ ವಿಭಾಗದ ಮುಖ್ಯಸ್ಥ ಡಾ| ಮಂಜುನಾಥ ಬೆನ್ನೂರ, ಉದ್ಯಮಿ ಬಸವರಾಜ ದಲಾಲ್, ಮಹಾಂತೇಶ ಅಥಣಿ, ಡಾ| ಪಿ. ಆರ್. ಕೆಂಗನಾಳ, ಪ್ರೊ| ವೈ.ಬಿ. ಕೊರಡೂರ, ಮನೋಹರ ಶಿರಹಟ್ಟಿ, ಎಸ್.ಪಿ. ನಡೋಣಿ, ರೇಷ್ಮಾ ಗಜಕೋಶ, ಭೀಮಶಿ ಮಗದುಮ್ಮ, ಪರಪ್ಪ ಉರಭಿನ್ನವರ ಇದ್ದರು.