ಭೋಪಾಲ್ : ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರ ವಿಜಯಕ್ಕೆ ಹಠಯೋಗ ಮಾಡಿದ್ದ ಕಾರಣಕ್ಕೆ ಚುನಾವಣಾ ಆಯೋಗದಿಂದ ನೊಟೀಸ್ ಪಡೆದಿದ್ದ ಸ್ವಘೋಷಿತ ದೇವ ಮಾನವ ಕಂಪ್ಯೂಟರ್ ಬಾಬಾ ಇಂದು ಶನಿವಾರ ನೊಟೀಸಿಗೆ ಉತ್ತರಿಸಿದ್ದಾರೆ.
‘ಹಠಯೋಗ ಶಿಬಿರಕ್ಕೆ ದಿಗ್ವಿಜಯ್ ಸಿಂಗ್ ಅವರನ್ನು ನಾವು ಆಹ್ವಾನಿಸಿಲ್ಲ ಮತ್ತು ಕಾರ್ಯಕ್ರಮದ ಖರ್ಚು ವೆಚ್ಚಗಳಿಗೆ ನಾವು ಹಣವನ್ನು ದೇಣಿಗೆ ಮತ್ತು ದಾನ-ಧರ್ಮದ ವಂತಿಗೆಯಿಂದ ಸಂಗ್ರಹಿಸಿದ್ದೇವೆ’ ಎಂದು ಕಂಪ್ಯೂಟರ್ ಬಾಬಾ, ಜಿಲ್ಲಾ ಚುನಾವಣಾಧಿಕಾರಿಗೆ ನೀಡಿರುವ ಲಿಖೀತ ಉತ್ತರದಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
“ಹಠಯೋಗದ ಶಿಬಿರದಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಅವರ ಪತ್ನಿ ಉಪಸ್ಥಿತರಿದ್ದರೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ, ಏಕೆಂದರೆ ನಾನು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ; ಶಿಬಿರವನ್ನು ವಂತಿಗೆ ಮತ್ತು ದಾನದ ಹಣದಿಂದ ನೆರವೇರಿಸಲಾಗಿತ್ತು” ಎಂದು ಕಂಪ್ಯೂಟರ್ ಬಾಬಾ ಹೇಳಿದ್ದಾರೆ.
ಕಂಪ್ಯೂಟರ್ ಬಾಬಾ ಅವರ ನಿಜನಾಮ ನಾಮದಾಸ್ ತ್ಯಾಗಿ. ಇವರು ಭೋಪಾಲ್ ನ ಸೈಫಿಯಾ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ವಿಜಯಕ್ಕಾಗಿ ಹಠಯೋಗ ನಡೆಸಿದ್ದರು.
ನಾಮದಾಸ್ ತ್ಯಾಗಿ ಅಲಿಯಾಸ್ ಕಂಪ್ಯೂಟರ್ ಬಾಬಾ ಅವರು ಹಿಂದಿನ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದರು.